ಮೂಡಿಗೆರೆ ತಾಲೂಕಿನ ಮಾಕೋನಹಳ್ಳಿಯಲ್ಲಿ ಘಟನೆ – ಶಾಸಕಿ ನಯನಾ ಮೋಟಮ್ಮ ಸ್ಥಳಕ್ಕೆ ಬರುವಂತೆ ರೈತರ ಆಗ್ರಹ
ಚಿಕ್ಕಮಗಳೂರು: ಕಾಡಾನೆಗಳ ನಿರಂತರ ಹಾವಳಿಯಿಂದ ಬೇಸತ್ತು ರೈತ ಪ್ರಹ್ಲಾದ್ ಎಂಬುವವರು ಪ್ರತಿಭಟನಾ ಸ್ಥಳದಲ್ಲೇ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಮೂಡಿಗೆರೆ ತಾಲೂಕಿನ ಮಾಕೋನಹಳ್ಳಿಯಲ್ಲಿ ನಡೆದಿದೆ.
ಕಾಡಾನೆ ದಾಳಿಯಿಂದ ತಮ್ಮ ಎರಡು ಎಕರೆ ತೋಟವನ್ನು ಕಳೆದುಕೊಂಡಿರುವ ಪ್ರಹ್ಲಾದ್, ನಿನ್ನೆ ಆನೆಯೇ ತನ್ನನ್ನು ತುಳಿದು ಸಾಯಿಸಲಿ ಎಂದು ತೋಟದ ಮಧ್ಯೆ ಕುಳಿತು ಆಕ್ರೋಶ ವ್ಯಕ್ತಪಡಿಸಿದ್ದರು. ಇಂದು ಕಾಡಾನೆ ಹಾವಳಿ ಖಂಡಿಸಿ ನಡೆಯುತ್ತಿದ್ದ ಪ್ರತಿಭಟನೆಯ ವೇಳೆ ಕಟ್ಟಡವೊಂದರ ಮೇಲೇರಿ ವಿಷ ಸೇವಿಸಲು ಯತ್ನಿಸಿದ್ದಾರೆ.
ಮೂಡಿಗೆರೆ–ಬೇಲೂರು ರಾಜ್ಯ ಹೆದ್ದಾರಿಯನ್ನು ತಡೆದು ರೈತರು ಪ್ರತಿಭಟನೆ ನಡೆಸುತ್ತಿದ್ದು, ಕಾಡಾನೆಗಳ ಹಾವಳಿಗೆ ಶಾಶ್ವತ ಪರಿಹಾರ ಕಲ್ಪಿಸುವಂತೆ ಆಗ್ರಹಿಸಿದ್ದಾರೆ.
ಸ್ಥಳಕ್ಕೆ ಆಗಮಿಸಿದ ಅರಣ್ಯಾಧಿಕಾರಿ (DFO) ಅವರಿಗೆ ರೈತರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ನಿಮ್ಮ ಸಮಾಧಾನದ ಮಾತುಗಳು ನಮಗೆ ಬೇಡ, ಆನೆ ಹಾವಳಿಗೆ ಸೂಕ್ತ ಪರಿಹಾರ ಬೇಕು ಎಂದು ಒತ್ತಾಯಿಸಿದ್ದಾರೆ.
ಇದೇ ವೇಳೆ ಶಾಸಕಿ ನಯನಾ ಮೋಟಮ್ಮ ಸ್ಥಳಕ್ಕೆ ಆಗಮಿಸಿ ರೈತರ ಸಮಸ್ಯೆ ಆಲಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದ್ದಾರೆ.
ಮಲೆನಾಡಿನಲ್ಲಿ ನಿರಂತರವಾಗಿ ಕಾಡಾನೆಗಳ ಹಾವಳಿಯಿಂದ ಬೆಳೆ ಹಾಗೂ ತೋಟಗಳನ್ನು ಕಳೆದುಕೊಳ್ಳುತ್ತಿರುವ ರೈತರ ಆಕ್ರೋಶ ಇದೀಗ ತೀವ್ರ ಸ್ವರೂಪ ಪಡೆದುಕೊಂಡಿದೆ.



