ಮೂಡಿಗೆರೆ: ತತ್ಕೊಳ ಅರಣ್ಯ ಮಾರ್ಗವಾಗಿ ಭದ್ರಾ ಅಭಯಾರಣ್ಯಕ್ಕೆ ಕಾಡಾನೆಗಳನ್ನು ಸ್ಥಳಾಂತರಿಸುವ ಸರ್ಕಾರದ ‘ಆಪರೇಷನ್ ಗಜ’ ಕಾರ್ಯಾಚರಣೆಗೆ ಕಾಫಿನಾಡಿನಲ್ಲಿ ತೀವ್ರ ವಿರೋಧ ವ್ಯಕ್ತವಾಗಿದೆ. ಈ ನಿರ್ಧಾರವನ್ನು ಖಂಡಿಸಿ ಸರ್ವಪಕ್ಷಗಳು ಹಾಗೂ ವಿವಿಧ ಸ್ಥಳೀಯ ಸಂಘಟನೆಗಳು ಇಂದು ಸಂಪೂರ್ಣ ಮೂಡಿಗೆರೆ ತಾಲೂಕು ಬಂದ್ಗೆ ಕರೆ ನೀಡಿವೆ.
ಬೆಳಗ್ಗೆ 6 ಗಂಟೆಯಿಂದ ಸಂಜೆ 6 ಗಂಟೆಯವರೆಗೂ ತಾಲೂಕಿನಾದ್ಯಂತ ಬಂದ್ ಆಚರಿಸಲಾಗುತ್ತಿದ್ದು, ಹೋರಾಟಗಾರರು ಬೀದಿಗಿಳಿದು ಅಂಗಡಿ ಮುಂಗಟ್ಟುಗಳನ್ನು ಮುಚ್ಚಿಸುತ್ತಿದ್ದಾರೆ. ವ್ಯಾಪಾರಿಗಳು ಸ್ವಯಂಪ್ರೇರಿತವಾಗಿ ತಮ್ಮ ವಹಿವಾಟು ಸ್ಥಗಿತಗೊಳಿಸುವ ಮೂಲಕ ಈ ಹೋರಾಟಕ್ಕೆ ಕೈಜೋಡಿಸಬೇಕೆಂದು ಮನವಿ ಮಾಡಲಾಗಿದೆ. ಈ ಬೃಹತ್ ಪ್ರತಿಭಟನೆಗೆ ಪಕ್ಷಭೇದ ಮರೆತು ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್ ಮುಖಂಡರು ಒಂದಾಗಿದ್ದು, ರೈತ ಸಂಘಟನೆಗಳು, ಕನ್ನಡಪರ ಸಂಘಟನೆಗಳು ಸೇರಿದಂತೆ ಆಟೋ ಮತ್ತು ಟ್ಯಾಕ್ಸಿ ಚಾಲಕರ ಸಂಘಗಳೂ ಸಂಪೂರ್ಣ ಬೆಂಬಲ ಸೂಚಿಸುವುದರೊಂದಿಗೆ ಮೂಡಿಗೆರೆ ಇಂದು ಸಂಪೂರ್ಣ ಸ್ತಬ್ಧಗೊಂಡಿದೆ.

