🏠 Home ದೇಶ ಜಿಲ್ಲಾ ಸುದ್ದಿ ತಾಲ್ಲೂಕು ರಾಜ್ಯ ರಾಜಕೀಯ  ಆರೋಗ್ಯ  ಕ್ರೈಮ್  ಪ್ರವಾಸ ಶಿಕ್ಷಣ

 

Breaking News
---Advertisement---
 

ಕಾಫಿನಾಡಲ್ಲಿ ದಾವೂದ್ ಇಬ್ರಾಹಿಂ ವೈಭವೀಕರಣ ವಿವಾದ – ಕೇರಳ ಮೂಲದ ಪ್ರವಾಸಿ ಬಸ್ ಪೊಲೀಸ್ ವಶಕ್ಕೆ!

---Advertisement---

 

ಚಿಕ್ಕಮಗಳೂರು: ಕಾಫಿನಾಡು ಚಿಕ್ಕಮಗಳೂರಿನಲ್ಲಿ ದಾವೂದ್ ಇಬ್ರಾಹಿಂನನ್ನು ವೈಭವೀಕರಿಸುವ ರೀತಿಯ ಬರಹ ಹೊಂದಿದ್ದ ಪ್ರವಾಸಿ ಬಸ್ ವಿವಾದಕ್ಕೆ ಕಾರಣವಾಗಿದೆ. ಕೇರಳದಿಂದ ಬಂದಿದ್ದ ಪ್ರವಾಸಿ ಬಸ್ಸಿನ ಮೇಲೆ ದಾವೂದ್ ಇಬ್ರಾಹಿಂನನ್ನು ವೈಭವೀಕರಿಸುವ ರೀತಿಯಲ್ಲಿ “Dawood Rise of day” ಹಾಗೂ “Emperor strikes again” ಎಂಬ ಬರಹಗಳು ಪತ್ತೆಯಾಗಿದ್ದು, ಹಿಂದೂಪರ ಸಂಘಟನೆಗಳ ಆಕ್ರೋಶಕ್ಕೆ ಕಾರಣವಾಗಿದೆ.

ಚಿಕ್ಕಮಗಳೂರು ನಗರದ ಬೋಳರಾಮೇಶ್ವರ ದೇವಾಲಯದ ಬಳಿ ಬಸ್ ಬರುತ್ತಿದ್ದಂತೆ ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ಬಸ್ಸನ್ನು ಅಡ್ಡಗಟ್ಟಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬಳಿಕ ಸ್ಥಳಕ್ಕೆ ಆಗಮಿಸಿದ ಚಿಕ್ಕಮಗಳೂರು ನಗರ ಠಾಣೆಯ ಪೊಲೀಸರು ಬಸ್ಸನ್ನು ತಮ್ಮ ವಶಕ್ಕೆ ಪಡೆದುಕೊಂಡಿದ್ದಾರೆ.

ಇನ್ನು ಆರು ತಿಂಗಳ ಹಿಂದೆಯೂ ತಮಿಳುನಾಡಿನಿಂದ ಇದೇ ರೀತಿಯ ಬರಹ ಹೊಂದಿದ್ದ ಪ್ರವಾಸಿ ಬಸ್ ಚಿಕ್ಕಮಗಳೂರಿಗೆ ಬಂದಿತ್ತು ಎನ್ನಲಾಗಿದ್ದು, ಇದೀಗ ಕೇರಳ ಮೂಲದ ಮತ್ತೊಂದು ಬಸ್ಸಿನಲ್ಲೂ ಇಂತಹ ಬರಹ ಪತ್ತೆಯಾಗಿರುವುದು ಚರ್ಚೆಗೆ ಗ್ರಾಸವಾಗಿದೆ.

ಈ ಘಟನೆಗೆ ಸಂಬಂಧಿಸಿದಂತೆ ಬಿಜೆಪಿ ಯುವ ಮೋರ್ಚಾ ಪೊಲೀಸ್ ಇಲಾಖೆಯ ಭದ್ರತಾ ವೈಫಲ್ಯದ ವಿರುದ್ಧ ಕಿಡಿಕಾರಿದೆ. ಹತ್ತಾರು ಚೆಕ್‌ಪೋಸ್ಟ್‌ಗಳನ್ನು ದಾಟಿ ಇಂತಹ ಬರಹ ಹೊಂದಿರುವ ಬಸ್ ಚಿಕ್ಕಮಗಳೂರಿಗೆ ಹೇಗೆ ಪ್ರವೇಶಿಸಿತು ಎಂದು ಪ್ರಶ್ನಿಸಿದೆ.

ದೇಶದ್ರೋಹಿ ಕೃತ್ಯಗಳನ್ನು ಬೆಂಬಲಿಸುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿರುವ ಬಿಜೆಪಿ ಯುವ ಮೋರ್ಚಾ, ಮುಂದಿನ ದಿನಗಳಲ್ಲಿ ಇಂತಹ ಘಟನೆಗಳು ಮರುಕಳಿಸಿದರೆ ಉಗ್ರ ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿದೆ.

ಒಟ್ಟಿನಲ್ಲಿ, ಕಾಫಿನಾಡಿನಲ್ಲಿ ದಾವೂದ್ ಇಬ್ರಾಹಿಂ ವೈಭವೀಕರಣ ಬರಹದ ವಿವಾದ ಇದೀಗ ರಾಜಕೀಯ ಹಾಗೂ ಪೊಲೀಸ್ ಭದ್ರತಾ ವ್ಯವಸ್ಥೆಯ ಕುರಿತ ಚರ್ಚೆಗೆ ಕಾರಣವಾಗಿದೆ.