ಚಿಕ್ಕಮಗಳೂರು: ಕಾಫಿನಾಡಿನ ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ ಶಾಖೆಯಲ್ಲಿ ಸಾರ್ವಜನಿಕರ ಆಸ್ತಿಯನ್ನು ಕಾಯಬೇಕಿದ್ದ ಸಿಬ್ಬಂದಿಗಳೇ ಭಕ್ಷಕರಾಗಿರುವ ಆತಂಕಕಾರಿ ಘಟನೆ ವರದಿಯಾಗಿದೆ. ಬ್ಯಾಂಕ್ ಅಧಿಕಾರಿಗಳು ಮತ್ತು ಸಿಬ್ಬಂದಿ ಸೇರಿಕೊಂಡು ಗ್ರಾಹಕರು ಅಡವಿಟ್ಟಿದ್ದ ಕೋಟ್ಯಂತರ ಮೌಲ್ಯದ ಅಸಲಿ ಚಿನ್ನವನ್ನು ಗುಳುಂ ಮಾಡಿ, ಆ ಜಾಗದಲ್ಲಿ ನಕಲಿ ಚಿನ್ನವನ್ನಿಟ್ಟು ಮಹಾ ವಂಚನೆ ಎಸಗಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಬ್ಯಾಂಕ್ ಮ್ಯಾನೇಜರ್ ಸಂದೀಪ್, ಸಿಬ್ಬಂದಿ ನಾರಾಯಣಸ್ವಾಮಿ ಸೇರಿದಂತೆ ಐವರ ವಿರುದ್ಧ ಈ ಬೃಹತ್ ಹಗರಣದ ಆರೋಪ ಕೇಳಿಬಂದಿದ್ದು, ಈ ಸಂಬಂಧ ಚಿಕ್ಕಮಗಳೂರು ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. 2020ರಿಂದ 2025ರ ಅವಧಿಯಲ್ಲಿ ಈ ದಂಧೆ ನಡೆದಿದೆ ಎಂದು ಶಂಕಿಸಲಾಗಿದ್ದು, ಗ್ರಾಹಕರಿಗೆ ಗೊತ್ತಿಲ್ಲದಂತೆ ಅವರ ಹೆಸರಿನಲ್ಲೇ ಹೆಚ್ಚುವರಿ ಚಿನ್ನದ ಸಾಲ ಪಡೆದು ಹಣ ಲೂಟಿ ಮಾಡಲಾಗಿದೆ.
ಸಾಲ ತೀರಿಸಿದರೂ ತಮ್ಮ 80 ರಿಂದ 142 ಗ್ರಾಂವರೆಗಿನ ಚಿನ್ನ ವಾಪಸ್ ಸಿಗದೆ ಗ್ರಾಹಕರು ಕಂಗಾಲಾಗಿದ್ದಾರೆ. ಅಲ್ಲದೆ, ಸಾರ್ವಜನಿಕರು ಕಷ್ಟಪಟ್ಟು ಕೂಡಿಟ್ಟಿದ್ದ ಎಫ್.ಡಿ (ಸ್ಥಿರ ಠೇವಣಿ) ಹಣಕ್ಕೂ ಈ ಗಿರಾಕಿಗಳು ಕನ್ನ ಹಾಕಿದ್ದಾರೆ ಎನ್ನಲಾಗಿದೆ. ಸ್ಥಳೀಯವಾಗಿ ನ್ಯಾಯ ಸಿಗದ ಹಿನ್ನೆಲೆಯಲ್ಲಿ ಸಂತ್ರಸ್ತ ಗ್ರಾಹಕರು ಈಗ ನ್ಯಾಯಕ್ಕಾಗಿ ಬೆಂಗಳೂರಿನ ಬ್ಯಾಂಕ್ ಕೇಂದ್ರ ಕಚೇರಿಯತ್ತ ಮುಖ ಮಾಡಿದ್ದಾರೆ.












Leave a Reply