ಚಿಕ್ಕಮಗಳೂರು : ಬೇಲೂರು ಕಡೆಯಿಂದ ಮೂಡಿಗೆರೆ ಭಾಗದತ್ತ ಕಾಡಾನೆಗಳ ಹಿಂಡು ಸಾಗುತ್ತಿರುವ ಬೆನ್ನಲ್ಲೇ, ಅರಣ್ಯ ಇಲಾಖೆ ಕೈಗೊಂಡಿರುವ ‘ಆಪರೇಷನ್ ಗಜ’ ಕಾರ್ಯಾಚರಣೆಗೆ ಕಾಂಗ್ರೆಸ್ ಕಾರ್ಯಕರ್ತರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.
ಮೂಡಿಗೆರೆ ಪಟ್ಟಣದಲ್ಲಿರುವ ಅರಣ್ಯ ಇಲಾಖೆ ಕಚೇರಿ ಮುಂಭಾಗ ಕಾಂಗ್ರೆಸ್ ಕಾರ್ಯಕರ್ತರು ಬೃಹತ್ ಪ್ರತಿಭಟನೆ ನಡೆಸಿದರು. ಕಾಡಾನೆಗಳನ್ನು ಬೇಲೂರು ಮಾರ್ಗವಾಗಿ ಭದ್ರಾ ಅಭಯಾರಣ್ಯದತ್ತ ಸ್ಥಳಾಂತರಿಸುವ ಬದಲು, ತತ್ಕೊಳ ಅರಣ್ಯ ಪ್ರದೇಶಕ್ಕೆ ಓಡಿಸುವಂತೆ ಪ್ರತಿಭಟನಾಕಾರರು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ನೂರಾರು ಸಂಖ್ಯೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಜಮಾವಣೆಗೊಂಡು ಅರಣ್ಯ ಇಲಾಖೆಯ ಕಾರ್ಯಾಚರಣೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಈ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಕಚೇರಿ ಎದುರು ಪೊಲೀಸರು ಬಿಗಿ ಭದ್ರತೆ ಕೈಗೊಂಡಿದ್ದು, ಪ್ರತಿಭಟನಾಕಾರರನ್ನು ಸಮಾಧಾನಪಡಿಸಲು ಪೊಲೀಸರು ಹರಸಾಹಸಪಟ್ಟರು.
ಇನ್ನು ಆಡಳಿತ ಪಕ್ಷದ ಕಾರ್ಯಕರ್ತರೇ ಅರಣ್ಯ ಇಲಾಖೆಯ ಕಾರ್ಯಾಚರಣೆಗೆ ವಿರೋಧ ವ್ಯಕ್ತಪಡಿಸಿರುವುದು ವಿಶೇಷವಾಗಿದೆ. ಆಪರೇಷನ್ ಗಜ ವಿಚಾರವಾಗಿ ಅರಣ್ಯ ಇಲಾಖೆ ಹಾಗೂ ಕಾಂಗ್ರೆಸ್ ಕಾರ್ಯಕರ್ತರ ನಡುವೆ ಭಿನ್ನಾಭಿಪ್ರಾಯ ವ್ಯಕ್ತವಾಗಿದ್ದು, ಮೂಡಿಗೆರೆಯಲ್ಲಿ ರಾಜಕೀಯ ಸಂಘರ್ಷದ ವಾತಾವರಣ ನಿರ್ಮಾಣವಾಗಿದೆ.
ಕಾಡಾನೆಗಳ ಸ್ಥಳಾಂತರ ಕಾರ್ಯಾಚರಣೆ ಯಾವ ದಿಕ್ಕಿನಲ್ಲಿ ಸಾಗಲಿದೆ ಎಂಬುದು ಇದೀಗ ಕುತೂಹಲ ಮೂಡಿಸಿದೆ.


