🏠 Home ದೇಶ ಜಿಲ್ಲಾ ಸುದ್ದಿ ತಾಲ್ಲೂಕು ರಾಜ್ಯ ರಾಜಕೀಯ  ಆರೋಗ್ಯ  ಕ್ರೈಮ್  ಪ್ರವಾಸ ಶಿಕ್ಷಣ

 

Breaking News
---Advertisement---
 

ಕಾಡಾನೆ, ಕಾಡುಕೋಣ, ಚಿರತೆಗಳ ಕಾಟಕ್ಕೆ ಕಂಗಾಲಾದ ಮಲೆನಾಡಿಗರು

---Advertisement---

 

ಚಿಕ್ಕಮಗಳೂರು: ಕಾಫಿನಾಡು ಚಿಕ್ಕಮಗಳೂರು ಜಿಲ್ಲೆಯ ಮಲೆನಾಡು ಭಾಗದಲ್ಲಿ ಕಾಡುಪ್ರಾಣಿಗಳ ಹಾವಳಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಗ್ರಾಮಸ್ಥರು ಹಾಗೂ ವಾಹನ ಸವಾರರಲ್ಲಿ ಆತಂಕ ಮನೆಮಾಡಿದೆ. ಒಂದೆಡೆ ಹಿಂಡು ಹಿಂಡಾಗಿ ಗ್ರಾಮಗಳತ್ತ ಲಗ್ಗೆ ಇಡುತ್ತಿರುವ ಕಾಡಾನೆಗಳು, ಮತ್ತೊಂದೆಡೆ ರಸ್ತೆಗಿಳಿದು ವಾಹನ ಸವಾರರಿಗೆ ಅಡ್ಡಿಯಾಗುತ್ತಿರುವ ಕಾಡುಕೋಣಗಳು, ಇನ್ನೊಂದೆಡೆ ತೋಟ ಹಾಗೂ ಗ್ರಾಮಗಳ ಸಮೀಪ ಚಿರತೆಗಳ ದಾಳಿ ಮಲೆನಾಡಿಗರನ್ನು ಕಂಗಾಲಾಗಿಸಿದೆ.

ಮೂಡಿಗೆರೆ ಭಾಗದಲ್ಲಿ ಕಾಡಾನೆಗಳ ಹಿಂಡು ಗುಂಪಾಗಿ ಕಾಣಿಸಿಕೊಂಡು ದಾಳಿ ನಡೆಸಿರುವ ಘಟನೆಗಳು ಆತಂಕಕ್ಕೆ ಕಾರಣವಾಗಿವೆ. ಇನ್ನು ಶೃಂಗೇರಿ ರಾಜ್ಯ ಹೆದ್ದಾರಿಯ ಅರೇನೂರು ಗ್ರಾಮದ ಹಕ್ಕಿಮಕ್ಕಿ ಬಳಿ ಕಾಡುಕೋಣವೊಂದು ರಸ್ತೆಗೆ ಬಂದಿದ್ದು, ವಾಹನ ಸವಾರರಿಗೆ ಅಡ್ಡಿಯಾಗಿದೆ.

ಇನ್ನೊಂದೆಡೆ ಚಿಕ್ಕಮಗಳೂರು ತಾಲೂಕಿನ ದಿಣ್ಣೆಕೆರೆ ಗ್ರಾಮದಲ್ಲಿ ಚಿರತೆ ದಾಳಿ ನಡೆಸಿ ಎರಡು ನಾಯಿಗಳನ್ನು ಬಲಿ ಪಡೆದಿದೆ. ಮಗದೊಡೆ ತೋಟದಲ್ಲೂ ಚಿರತೆ ದಾಳಿ ನಡೆದಿರುವುದು ಗ್ರಾಮಸ್ಥರಲ್ಲಿ ಭೀತಿ ಮೂಡಿಸಿದೆ.

ಹೀಗೆ ಜಿಲ್ಲೆಯ ಮಲೆನಾಡು ಭಾಗದಲ್ಲಿ ಕಾಡಾನೆ, ಕಾಡುಕೋಣ ಹಾಗೂ ಚಿರತೆಗಳ ನಿರಂತರ ಸಂಚಾರ ಮತ್ತು ದಾಳಿಯಿಂದ ಜನರು ಆತಂಕದಲ್ಲೇ ದಿನ ಕಳೆಯುವಂತಾಗಿದೆ. ರಾತ್ರಿ ವೇಳೆ ಮನೆಗಳಿಂದ ಹೊರಬರಲು ಗ್ರಾಮಸ್ಥರು ಹಿಂದೇಟು ಹಾಕುತ್ತಿದ್ದರೆ, ಹೆದ್ದಾರಿಗಳಲ್ಲಿ ಸಂಚರಿಸುವ ವಾಹನ ಸವಾರರೂ ಜೀವಭಯದಲ್ಲೇ ಪ್ರಯಾಣಿಸುವಂತಾಗಿದೆ.

ನಿರಂತರವಾಗಿ ನಡೆಯುತ್ತಿರುವ ಕಾಡುಪ್ರಾಣಿಗಳ ಹಾವಳಿಯನ್ನು ನಿಯಂತ್ರಿಸಲು ಅರಣ್ಯ ಇಲಾಖೆ ಯಾವ ರೀತಿಯ ಕ್ರಮ ಕೈಗೊಳ್ಳಲಿದೆ? ಜನರ ಜೀವ ಮತ್ತು ಆಸ್ತಿಪಾಸ್ತಿಯ ರಕ್ಷಣೆಗೆ ಶಾಶ್ವತ ಪರಿಹಾರ ರೂಪಿಸಲಿದೆಯೇ? ಎಂಬ ಪ್ರಶ್ನೆಗಳು ಇದೀಗ ಮಲೆನಾಡಿಗರನ್ನು ಕಾಡುತ್ತಿವೆ.

ಕಾಡಾನೆ, ಕಾಡುಕೋಣ ಹಾಗೂ ಚಿರತೆಗಳ ಕಾಟಕ್ಕೆ ಕಂಗಾಲಾಗಿರುವ ಮಲೆನಾಡಿನ ಜನರಿಗೆ ಅರಣ್ಯ ಇಲಾಖೆ ಯಾವಾಗ ನೆಮ್ಮದಿ ನೀಡಲಿದೆ ಎಂಬುದನ್ನು ಕಾದು ನೋಡಬೇಕಿದೆ.

Join WhatsApp