ಮೂಡಿಗೆರೆ ತಾಲೂಕಿನ ಬಾಳೆಹಳ್ಳಿ ಗ್ರಾಮದಲ್ಲಿ ಬೆಚ್ಚಿಬೀಳಿಸುವ ಘಟನೆಯೊಂದು ನಡೆದಿದೆ. ಕೇವಲ 50 ರೂಪಾಯಿ ಕೂಲಿ ಹಣದ ವಿವಾದ ಕೊನೆಗೆ ಗುಂಡಿನ ಚಕಮಕಿಯಲ್ಲಿ ಅಂತ್ಯವಾಗಿದ್ದು, ಮುಗ್ಧ ಮಗುವೊಂದು ಜೀವನ್ಮರಣ ಹೋರಾಟ ನಡೆಸುವಂತಾಗಿದೆ. ಅಸ್ಸಾಂ ಮೂಲದ ಕಾರ್ಮಿಕರು ದಿನಕ್ಕೆ 400 ರೂಪಾಯಿ ಕೂಲಿ ನೀಡುವಂತೆ ಪಟ್ಟು ಹಿಡಿದಿದ್ದರೆ, ತೋಟದ ಮಾಲೀಕ ಮಾತ್ರ ಈಗ 350 ರೂಪಾಯಿ ಕೊಟ್ಟು ಉಳಿದ 50 ರೂಪಾಯಿಯನ್ನು ಆಮೇಲೆ ನೀಡುವುದಾಗಿ ಹೇಳಿದ್ದರು. ಈ ವಿಚಾರವಾಗಿ ಮಾತಿಗೆ ಮಾತು ಬೆಳೆದು, ವಾತಾವರಣ ಉದ್ವಿಗ್ನಗೊಂಡಿದೆ.
ಕಾರ್ಮಿಕರು ಹಲ್ಲೆಗೆ ಯತ್ನಿಸಿದಾಗ ಕೆರಳಿದ ಮಾಲೀಕ, ಬೆದರಿಕೆ ಹಾಕುವ ಉದ್ದೇಶದಿಂದ ಬಂದೂಕು ಹಿಡಿದು ಬಂದಿದ್ದಾರೆ. ಆದರೆ ವಿಧಿಬರಹವೇ ಬೇರೆಯಾಗಿತ್ತು. ಬೆದರಿಸಲು ಹೋದಾಗ ಆಕಸ್ಮಿಕವಾಗಿ ನಡೆದ ಗುಂಡಿನ ದಾಳಿ ನೇರವಾಗಿ ಅಪ್ರಾಪ್ತ ಮಗುವಿನ ತಲೆಗೇ ತಗಲಿದೆ. ರಕ್ತದ ಮಡುವಿನಲ್ಲಿ ಬಿದ್ದ ಮಗುವನ್ನು ತಕ್ಷಣವೇ ಮೂಡಿಗೆರೆ ತಾಲೂಕು ಆಸ್ಪತ್ರೆಗೆ ಸೇರಿಸಲಾಯಿತಾದರೂ, ಪರಿಸ್ಥಿತಿ ತೀರಾ ಗಂಭೀರವಾಗಿದ್ದರಿಂದ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಆಸ್ಪತ್ರೆಗೆ ರವಾನಿಸಲಾಗಿದೆ. ಪ್ರಸ್ತುತ ಮೂಡಿಗೆರೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.


