ಚಿಕ್ಕಮಗಳೂರು: ಶಿಕಾರಿಗೆ ಬಂದವರಂತೆ ನಟಿಸಿ ಬಂದ ದುಷ್ಕರ್ಮಿಗಳ ತಂಡವೊಂದು ಎಸ್ಟೇಟ್ ಮಾಲೀಕರ ಮನೆಯ ಮೇಲೆ ಏಕಾಏಕಿ ಗುಂಡಿನ ದಾಳಿ ನಡೆಸಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಮುತ್ತಿಗೆಪುರ ಗ್ರಾಮದಲ್ಲಿ ನಡೆದಿದೆ.
ಮುತ್ತಿಗೆಪುರ ಗ್ರಾಮದ ಎಸ್ಟೇಟ್ ಮಾಲೀಕ ವಿಂದನ್ ಅವರ ಮನೆಯನ್ನೇ ಗುರಿಯಾಗಿಸಿಕೊಂಡು 5ರಿಂದ 6 ಜನರ ತಂಡ ಫೈರಿಂಗ್ ನಡೆಸಿದೆ ಎನ್ನಲಾಗಿದೆ. ದುಷ್ಕರ್ಮಿಗಳು ಮೂರು ಸುತ್ತು ಗುಂಡು ಹಾರಿಸಿ ಸ್ಥಳದಿಂದ ಪರಾರಿಯಾಗಿದ್ದಾರೆ. ಗುಂಡಿನ ತೀವ್ರತೆಗೆ ಮನೆಯ ಕಿಟಕಿ ಹಾಗೂ ಗೋಡೆಗಳು ಛಿದ್ರಗೊಂಡಿದ್ದು, ಮನೆಯಲ್ಲಿದ್ದವರು ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಘಟನೆಯಿಂದ ಗ್ರಾಮದಲ್ಲಿ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಇನ್ನು ದುಷ್ಕರ್ಮಿಗಳು ಗನ್ ಸಮೇತ ಮನೆಯ ಬಳಿ ಬರುತ್ತಿದ್ದಂತೆ ಸಿಸಿ ಕ್ಯಾಮೆರಾದಲ್ಲಿ ಅಲರ್ಟ್ ಸಿಗ್ನಲ್ ಬಂದಿದ್ದು, ಫೈರಿಂಗ್ ನಡೆಸಿದವರ ಚಲನವಲನಗಳು ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿವೆ.
ಈ ದಾಳಿಯ ಹಿಂದೆ ಹಳೆಯ ವೈಷಮ್ಯವೇ ಕಾರಣ ಎಂದು ಮನೆ ಮಾಲೀಕ ಆರೋಪಿಸಿದ್ದಾರೆ. ಕೊಲೆ ಮಾಡುವ ಉದ್ದೇಶದಿಂದಲೇ ಗುಂಡಿನ ದಾಳಿ ನಡೆಸಲಾಗಿದೆ ಎಂಬ ಆರೋಪವೂ ಕೇಳಿಬಂದಿದೆ.
ಘಟನೆ ಸಂಬಂಧ ಮೂಡಿಗೆರೆ ಪೊಲೀಸ್ ಠಾಣೆಯಲ್ಲಿ ಮೂವರ ವಿರುದ್ಧ ಪ್ರಕರಣ ದಾಖಲಾಗಿದ್ದು, ಉಳಿದ ಆರೋಪಿಗಳ ಪತ್ತೆಗಾಗಿ ಪೊಲೀಸರು ಶೋಧ ಕಾರ್ಯ ನಡೆಸುತ್ತಿದ್ದಾರೆ. ಪ್ರಕರಣದ ಬಗ್ಗೆ ನೈಜ ತನಿಖೆ ನಡೆಸಿ, ದಾಳಿಯಲ್ಲಿ ಭಾಗಿಯಾದ ಎಲ್ಲ ಆರೋಪಿಗಳನ್ನು ಕೂಡಲೇ ಬಂಧಿಸಬೇಕು ಎಂದು ಮನೆ ಮಾಲೀಕರು ಒತ್ತಾಯಿಸಿದ್ದಾರೆ.


