ಶೃಂಗೇರಿ ವಿಧಾನಸಭಾ ಕ್ಷೇತ್ರದಲ್ಲಿ ಅಂಚೆ ಮತಗಳ ಮರುಎಣಿಕೆ ಪ್ರಕ್ರಿಯೆ ಇದೀಗ ರಾಜಕೀಯ ಕುತೂಹಲದ ಕೇಂದ್ರಬಿಂದುವಾಗಿ ಪರಿಣಮಿಸಿದೆ.
2023ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಟಿ.ಡಿ. ರಾಜೇಗೌಡ ಅವರು ಬಿಜೆಪಿಯ ಡಿ.ಎನ್. ಜೀವರಾಜ್ ವಿರುದ್ಧ ಕೇವಲ 201 ಮತಗಳ ಅಲ್ಪ ಅಂತರದಿಂದ ಗೆಲುವು ಸಾಧಿಸಿದ್ದರು. ಆದರೆ ಆ ವೇಳೆ ಚಲಾವಣೆಯಾಗಿದ್ದ ಅಂಚೆ ಮತಗಳಲ್ಲಿ 279 ಮತಗಳನ್ನು ತಾಂತ್ರಿಕ ಕಾರಣಗಳಿಂದ ತಿರಸ್ಕರಿಸಲಾಗಿತ್ತು. ಈ ತಿರಸ್ಕಾರದಲ್ಲಿ ಲೋಪವಾಗಿದೆ ಎಂದು ಆರೋಪಿಸಿ ಡಿ.ಎನ್. ಜೀವರಾಜ್ ಅವರು ಹೈಕೋರ್ಟ್‌ಗೆ ಮೊರೆಹೋಗಿದ್ದರು.
ಸುದೀರ್ಘ ವಿಚಾರಣೆಯ ಬಳಿಕ ನ್ಯಾಯಾಲಯವು ಏಪ್ರಿಲ್ 6ರಂದು ಮಹತ್ವದ ತೀರ್ಪು ನೀಡಿದ್ದು, ತಿರಸ್ಕೃತಗೊಂಡಿದ್ದ 279 ಅಂಚೆ ಮತಗಳನ್ನು ಮಾತ್ರ ಮರುಎಣಿಕೆ ಮಾಡುವಂತೆ ಜಿಲ್ಲಾಡಳಿತಕ್ಕೆ ನಿರ್ದೇಶಿಸಿದೆ.
ಈ ಆದೇಶದಂತೆ ಮೇ 2ರಂದು ಬೆಳಿಗ್ಗೆ 8 ಗಂಟೆಯಿಂದ ಚಿಕ್ಕಮಗಳೂರಿನ ಐಡಿಎಸ್‌ಜಿ ಕಾಲೇಜಿನಲ್ಲಿ ಮರುಎಣಿಕೆ ಪ್ರಕ್ರಿಯೆ ಆರಂಭವಾಗಲಿದೆ. ಚುನಾವಣಾಧಿಕಾರಿ ಗೌರವಶೆಟ್ಟಿ ಅವರ ನೇತೃತ್ವದಲ್ಲಿ ನಾಲ್ವರು ಸಹಾಯಕ ಚುನಾವಣಾಧಿಕಾರಿಗಳು ಈ ಕಾರ್ಯವನ್ನು ನಿರ್ವಹಿಸಲಿದ್ದಾರೆ.
ಪಾರದರ್ಶಕತೆ ಕಾಪಾಡಲು ಎಣಿಕೆ ಕೊಠಡಿಯಲ್ಲಿ ಸಿಸಿಟಿವಿ ಕ್ಯಾಮರಾಗಳನ್ನು ಅಳವಡಿಸಲಾಗುತ್ತಿದ್ದು, ಸಂಪೂರ್ಣ ಪ್ರಕ್ರಿಯೆಯನ್ನು ವಿಡಿಯೋಗ್ರಫಿ ಮಾಡಲಾಗುತ್ತದೆ. ಕೇವಲ ಒಂದೇ ಟೇಬಲ್‌ನಲ್ಲಿ ಎಣಿಕೆ ನಡೆಯಲಿದ್ದು, ಅಭ್ಯರ್ಥಿಗಳ ಪರ ಏಜೆಂಟರು ಹಾಜರಿರುತ್ತಾರೆ. ಚುನಾವಣಾ ಆಯೋಗದ ನಿಯಮಾವಳಿಗಳಂತೆ ಪ್ರತಿಯೊಂದು ಮತದ ಮಾನ್ಯತೆಯನ್ನು ಸೂಕ್ಷ್ಮವಾಗಿ ಪರಿಶೀಲಿಸಲಾಗುತ್ತದೆ.
ಈ ಮರುಎಣಿಕೆ ಫಲಿತಾಂಶವು ಅಂತಿಮ ಚುನಾವಣಾ ಫಲಿತಾಂಶದ ಮೇಲೆ ಯಾವುದೇ ಪರಿಣಾಮ ಬೀರುವುದೇ ಎಂಬುದರ ಬಗ್ಗೆ ರಾಜ್ಯದ ರಾಜಕೀಯ ವಲಯದಲ್ಲಿ ತೀವ್ರ ಕುತೂಹಲ ಮೂಡಿಸಿದೆ.













Leave a Reply