ಬೆಂಗಳೂರು: ತಾನು 2023ನೇ ಬ್ಯಾಚ್‌ನ ಐಎಎಸ್ ಅಧಿಕಾರಿ ಎಂದು ಹೇಳಿಕೊಂಡು ವೈದ್ಯರು ಹಾಗೂ ಮೆಡಿಕಲ್ ವ್ಯಾಪಾರಿಗಳನ್ನು ವಂಚಿಸಿದ್ದ ಆರೋಪದ ಮೇಲೆ ಚಿಕ್ಕಮಗಳೂರು ಮೂಲದ ಮಿಥುನ್ ಎಂಬಾತನನ್ನು ಬೆಂಗಳೂರು ಪೊಲೀಸರ ತಂಡ ಬಂಧಿಸಿದೆ. ಈ ಘಟನೆ ರಾಜ್ಯದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ.
ಬಂಧಿತನು ಚಿಕ್ಕಮಗಳೂರು ಜಿಲ್ಲೆಯ ಕಡೂರು ಮೂಲದವನಾಗಿದ್ದು, ತಾನು ರಾಷ್ಟ್ರೀಯ ಆರೋಗ್ಯ ಅಭಿಯಾನ (NHM) ವಿಭಾಗದ ಉನ್ನತಾಧಿಕಾರಿ ಎಂದು ಪರಿಚಯಿಸಿಕೊಂಡಿದ್ದ. ಅಲ್ಲದೆ ಆರೋಗ್ಯ ಸೌಧದಲ್ಲಿ ಕೆಲಸ ಮಾಡುತ್ತೇನೆ ಎಂದು ಹೇಳಿ ಹಲವು ಸರ್ಕಾರಿ ಅಧಿಕಾರಿಗಳನ್ನೇ ನಂಬಿಸುವಲ್ಲಿ ಯಶಸ್ವಿಯಾಗಿದ್ದ.
ಈತನ ಮೋಸದ ಜಾಲಕ್ಕೆ ಸರ್ಕಾರಿ ಆಸ್ಪತ್ರೆಯ ಜಿಲ್ಲಾ ಸರ್ಜನ್ ಡಾ. ಚಂದ್ರಶೇಖರ್ ಕೂಡ ಸಿಲುಕಿರುವುದು ಬೆಳಕಿಗೆ ಬಂದಿದೆ. ಮಲ್ಲೇಗೌಡ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿ, ವೈದ್ಯರು ಮತ್ತು ನರ್ಸ್‌ಗಳ ಸಭೆ ನಡೆಸಿದ ಮಿಥುನ್, ತನ್ನನ್ನು ಐಎಎಸ್ ಅಧಿಕಾರಿ ಎಂದು ಪರಿಚಯಿಸಿಕೊಂಡು ಎಲ್ಲರ ವಿಶ್ವಾಸ ಗಳಿಸಿದ್ದ.
ಮುಂದೆ, ಶ್ರೇಯಸ್ ಮೆಡಿಕಲ್ ಮಾಲೀಕ ಸತೀಶ್ ಅವರಿಗೆ ಸುಮಾರು 1.8 ಕೋಟಿ ರೂಪಾಯಿ ಮೌಲ್ಯದ ಔಷಧ ಸರಬರಾಜು ಟೆಂಡರ್ ಕೊಡಿಸುವುದಾಗಿ ಭರವಸೆ ನೀಡಿದ್ದ. ಇದಕ್ಕಾಗಿ 20% ಕಮಿಷನ್ ಕೇಳಿ, ಜಕ್ಕೂರು ಪ್ರದೇಶದಲ್ಲಿ 36 ಲಕ್ಷ ರೂ. ಸೇರಿದಂತೆ ಒಟ್ಟು 41 ಲಕ್ಷ ರೂಪಾಯಿಗಳನ್ನು ಪಡೆದು ವಂಚಿಸಿದ್ದಾನೆ.
ಆದರೆ, ತನ್ನ ಪ್ರಭಾವ ತೋರಿಸಲು ಬೆಂಗಳೂರು ನಗರದ ಡಿಸಿಪಿಯ ಹೆಸರನ್ನು ಬಳಸಲು ಹೋಗಿದಾಗ ಪೊಲೀಸರಿಗೆ ಅನುಮಾನ ಮೂಡಿದೆ. ಬಳಿಕ ಅಮೃತಹಳ್ಳಿ ಪೊಲೀಸರು ತನಿಖೆ ನಡೆಸಿ ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ.
ಪೊಲೀಸರ ವಿಚಾರಣೆಯಲ್ಲಿ, ತಾನು 10 ಲಕ್ಷ ಜನರಲ್ಲಿ ಪರೀಕ್ಷೆ ಬರೆದು ಆಯ್ಕೆಯಾದ 900 ಅಧಿಕಾರಿಗಳಲ್ಲಿ ಒಬ್ಬ ಎಂದು ಸುಳ್ಳು ಹೇಳಿ, ಪ್ರಭಾವಿ ವ್ಯಕ್ತಿಗಳನ್ನೂ ವಂಚಿಸಿರುವುದಾಗಿ ಒಪ್ಪಿಕೊಂಡಿದ್ದಾನೆ.ಪ್ರಭಾವಿ ಬೆಂಬಲ?: ಉನ್ನತ ಮಟ್ಟದ ಅಧಿಕಾರಿಗಳು ಹಾಗೂ ಚಿಕ್ಕಮಗಳೂರು ರಾಜಕಾರಣಿಗಳ ಜೊತೆ ಫೋಟೋ ತೆಗೆಸಿಕೊಂಡು, ಆ ಪ್ರಭಾವ ಬಳಸಿ ಜನರ ನಂಬಿಕೆ ಗಳಿಸುತ್ತಿದ್ದ ಎನ್ನಲಾಗಿದೆ.
ಈತನ ವಿರುದ್ಧ ಇನ್ನಷ್ಟು ಪ್ರಕರಣಗಳು ಬೆಳಕಿಗೆ ಬರಬಹುದೆಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ













Leave a Reply