ಯೂರಿಯಾ ಗೊಬ್ಬರ ಅಕ್ರಮ ದಾಸ್ತಾನು ಜಾಲ ಪತ್ತೆ: ಕೋಳಿ ಫಾರಂ ಮೇಲೆ ಅಧಿಕಾರಿಗಳ ದಾಳಿ

Spread the love

 

 

ಚಿಕ್ಕಮಗಳೂರು ತಾಲೂಕಿನ ಕೆಸವಿನಮನೆ ಗ್ರಾಮದಲ್ಲಿ ಅಕ್ರಮವಾಗಿ ಯೂರಿಯಾ ಗೊಬ್ಬರವನ್ನು ದಾಸ್ತಾನು ಮಾಡಿ ರೀಪ್ಯಾಕಿಂಗ್ ಮಾಡುತ್ತಿದ್ದ ದಂಧೆಯನ್ನು ಕೃಷಿ ಇಲಾಖೆ ಅಧಿಕಾರಿಗಳು ಬಯಲಿಗೆಳೆದಿದ್ದಾರೆ. ಜಿಲ್ಲೆಯಾದ್ಯಂತ ರೈತರು ಗೊಬ್ಬರಕ್ಕಾಗಿ ಪರದಾಡುತ್ತಿರುವ ಸಂದರ್ಭದಲ್ಲೇ, ಇಲ್ಲಿನ ಕೋಳಿ ಫಾರಂ ಒಂದರಲ್ಲಿ ಕೃಷಿ ಬಳಕೆಯ ರಸಗೊಬ್ಬರವನ್ನು ಕೈಗಾರಿಕಾ ಉದ್ದೇಶಕ್ಕಾಗಿ ಬಳಸಲು ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ವಿಷಯ ಬೆಳಕಿಗೆ ಬಂದಿದೆ. ಕೃಷಿ ಇಲಾಖೆ ಅಧಿಕಾರಿ ತಿರುಮಲೇಶ್ ನೇತೃತ್ವದ ತಂಡವು ಖಚಿತ ಮಾಹಿತಿ ಮೇರೆಗೆ ಕೋಳಿ ಫಾರಂ ಮೇಲೆ ದಾಳಿ ನಡೆಸಿದಾಗ, ಸುಮಾರು 181 ಚೀಲ ಮೂಲ ಯೂರಿಯಾ ಹಾಗೂ ರೀಪ್ಯಾಕ್ ಮಾಡಲಾಗಿದ್ದ 218 ಚೀಲಗಳು ಸೇರಿದಂತೆ ಒಟ್ಟು 399 ಚೀಲ ಗೊಬ್ಬರ ಪತ್ತೆಯಾಗಿದೆ.

ಈ ಅಕ್ರಮ ದಂಧೆಯ ಹಿಂದೆ ಕೋಳಿ ಫಾರಂ ಮಾಲೀಕ ರಾಜೇಶ್ ಎಂಬಾತನ ಕೈವಾಡವಿರುವುದು ತಿಳಿದುಬಂದಿದ್ದು, ಲಾಭದ ಆಸೆಗೆ ರೈತರ ಪಾಲಿನ ಗೊಬ್ಬರವನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದ ಆರೋಪದಡಿ ಆತನ ವಿರುದ್ಧ ಚಿಕ್ಕಮಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ವಶಪಡಿಸಿಕೊಳ್ಳಲಾದ ನೂರಾರು ಚೀಲ ಗೊಬ್ಬರವನ್ನು ಅಧಿಕಾರಿಗಳು ಸೀಜ್ ಮಾಡಿದ್ದು, ತಲೆಮರೆಸಿಕೊಂಡಿರುವ ಆರೋಪಿಗಳಿಗಾಗಿ ಶೋಧ ಕಾರ್ಯ ಮುಂದುವರಿದಿದೆ. ಕೃಷಿ ಚಟುವಟಿಕೆಗಳಿಗೆ ಪೂರೈಕೆಯಾಗಬೇಕಾದ ರಸಗೊಬ್ಬರವನ್ನು ಕಾಳಸಂತೆಯಲ್ಲಿ ಮಾರಾಟ ಮಾಡುವ ಅಥವಾ ಬೇರೆ ಉದ್ದೇಶಕ್ಕೆ ಬಳಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.

Leave a Reply

Your email address will not be published. Required fields are marked *