ಚಿಕ್ಕಮಗಳೂರು: “ನಾವು ಮಫ್ತಿಯಲ್ಲಿರುವ ಪೊಲೀಸರು, ಈ ಕಡೆ ಸರಗಳ್ಳರು ಬಂದಿದ್ದಾರೆ, ನಿಮ್ಮ ಮಾಂಗಲ್ಯ ಸರವನ್ನು ಬಿಚ್ಚಿ ಬ್ಯಾಗ್ನಲ್ಲಿ ಭದ್ರವಾಗಿ ಇಟ್ಟುಕೊಳ್ಳಿ” ಎಂದು ಹೆದರಿಸಿ ಮಹಿಳೆಯರಿಂದ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ ದೋಚುವ ವಿನೂತನ ಜಾಲವೊಂದು ಸಕ್ರಿಯವಾಗಿದೆ. ನಕಲಿ ಪೊಲೀಸರ ಮಾತನ್ನು ನಂಬಿ ಮೋಸಹೋದ ಮಹಿಳೆಯೊಬ್ಬರು ಬರೋಬ್ಬರಿ ಏಳು ಲಕ್ಷ ಮೌಲ್ಯದ ಮಾಂಗಲ್ಯ ಸರ ಕಳೆದುಕೊಂಡಿರುವ ಆಘಾತಕಾರಿ ಘಟನೆ ಚಿಕ್ಕಮಗಳೂರು ನಗರದ ವಿಜಯಪುರದ ಉರ್ದು ಶಾಲೆ ಬಳಿ ನಡೆದಿದೆ.
ರಸ್ತೆಯಲ್ಲಿ ನಡೆದುಕೊಂಡು ಹೋಗುವ ಒಂಟಿ ಮಹಿಳೆಯರನ್ನೇ ಗುರಿಯಾಗಿಸಿಕೊಳ್ಳುವ ಈ ಖದೀಮರು, ಪೊಲೀಸ್ ಸೋಗಿನಲ್ಲಿ ಬಂದು ಎಚ್ಚರಿಕೆ ನೀಡುವ ನಾಟಕವಾಡುತ್ತಾರೆ. ಕಳ್ಳರ ಬಗ್ಗೆ ಭಯಹುಟ್ಟಿಸಿ, ಕುತ್ತಿಗೆಯಲ್ಲಿರುವ ಸರ ಬಿಚ್ಚುವಂತೆ ಸೂಚಿಸುತ್ತಾರೆ. ಕಂಗಾಲಾದ ಮಹಿಳೆಯರು ಸರವನ್ನು ಬಿಚ್ಚುತ್ತಿದ್ದಂತೆ, ಅದನ್ನು ನಾವೇ ಸುರಕ್ಷಿತವಾಗಿ ಪ್ಯಾಕ್ ಮಾಡಿಕೊಡುವುದಾಗಿ ಹೇಳಿ, ಕಣ್ಮುಚ್ಚಿ ತೆರೆಯುವಷ್ಟರಲ್ಲಿ ಚಿನ್ನದೊಂದಿಗೆ ಎಸ್ಕೇಪ್ ಆಗುತ್ತಿದ್ದಾರೆ. ಇದೇ ರೀತಿ ಖದೀಮರ ಬಲೆಗೆ ಬಿದ್ದ ರಾಧಮ್ಮ ಎಂಬುವರು ತಮ್ಮ 7 ಲಕ್ಷ ರೂಪಾಯಿ ಮೌಲ್ಯದ ಚಿನ್ನದ ಸರವನ್ನು ಕಳೆದುಕೊಂಡು ಕಣ್ಣೀರು ಹಾಕುತ್ತಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಚಿಕ್ಕಮಗಳೂರು ನಗರದಲ್ಲಿ ಸರಗಳ್ಳರ ಹಾವಳಿ ಮಿತಿಮೀರಿದ್ದು, ಬೈಕ್ನಲ್ಲಿ ಬಂದು ಒಂಟಿ ಮಹಿಳೆಯರ ಕುತ್ತಿಗೆಯಿಂದ ಮಾಂಗಲ್ಯ ಸರ ಕಿತ್ತು ಪರಾರಿಯಾಗುತ್ತಿರುವ ಪ್ರಕರಣಗಳು ಹೆಚ್ಚಾಗಿವೆ. ಕೇವಲ ಒಂದೇ ತಿಂಗಳ ಅವಧಿಯಲ್ಲಿ ಐದಕ್ಕೂ ಹೆಚ್ಚು ಕಳ್ಳತನ ಪ್ರಕರಣಗಳು ದಾಖಲಾಗಿದ್ದು, ಮಹಿಳೆಯರನ್ನು ಬೆಚ್ಚಿಬೀಳಿಸಿದೆ. ಪ್ರಸ್ತುತ ರಾಧಮ್ಮ ಅವರನ್ನು ವಂಚಿಸಿ ಸರ ದೋಚಿದ ಕಳ್ಳರ ಚಲನವಲನಗಳು ಸಮೀಪದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿವೆ. ಈ ಆತಂಕಕಾರಿ ಘಟನೆಗೆ ಸಂಬಂಧಿಸಿದಂತೆ ಬಸವನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಖದೀಮರ ಪತ್ತೆಗೆ ಬಲೆ ಬೀಸಿದ್ದಾರೆ.

