ಕಡೂರು ರಾಗಿ ಖರೀದಿ ಕೇಂದ್ರದಲ್ಲಿ ಅನ್ನದಾತರ ಆಕ್ರೋಶ

Spread the love

ಹಣ ಕೊಟ್ಟವರಿಗೆ ಮೊದಲು ಅವಕಾಶ – ರೈತರ ಆರೋಪ

ಚಿಕ್ಕಮಗಳೂರು ಜಿಲ್ಲೆ ಕಡೂರು ಪಟ್ಟಣದ ರಾಗಿ ಖರೀದಿ ಕೇಂದ್ರದ ಬಳಿ ರೈತರು ಆಕ್ರೋಶ ವ್ಯಕ್ತಪಡಿಸಿದ ಘಟನೆ ನಡೆದಿದೆ. ಖರೀದಿ ಕೇಂದ್ರದ ಸಿಬ್ಬಂದಿ ಹಣ ಪಡೆದು ಕೆಲವರಿಗೆ ಮೊದಲು ಅವಕಾಶ ನೀಡುತ್ತಿದ್ದಾರೆ ಎಂದು ರೈತರು ಆರೋಪಿಸಿದ್ದಾರೆ.
ಗ್ರಾಮೀಣ ಪ್ರದೇಶಗಳಿಂದ ಬಂದ ರೈತರು ವಾರಗಟ್ಟಲೆ ಸರತಿ ಸಾಲಿನಲ್ಲಿ ನಿಂತಿದ್ದರೂ ತಮ್ಮ ಸರದಿ ಬರದೇ ಪರದಾಡುತ್ತಿರುವ ಸ್ಥಿತಿ ನಿರ್ಮಾಣವಾಗಿದೆ. ಆದರೆ ಮಧ್ಯೆ ಬಂದ ಕೆಲವರಿಗೆ ಹಣದ ಆಧಾರದ ಮೇಲೆ ಅವಕಾಶ ನೀಡಲಾಗುತ್ತಿದೆ ಎಂದು ರೈತರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ರೈತರು ಅಧಿಕಾರಿಗಳು ಹಾಗೂ ಸಿಬ್ಬಂದಿಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಕೂಗಾಡಿದರು. ಖರೀದಿ ಕೇಂದ್ರದ ಸಿಬ್ಬಂದಿಗೆ ತರಾಟೆಗೆ ತೆಗೆದುಕೊಂಡ ರೈತರು, “ವಾರಗಳ ಕಾಲ ಕಾಯುತ್ತಿದ್ದರೂ ನಮ್ಮ ಧಾನ್ಯ ಖರೀದಿ ಮಾಡುತ್ತಿಲ್ಲ. ಆದರೆ ಹಣ ಕೊಟ್ಟವರಿಗೆ ಮಾತ್ರ ಮೊದಲಿಗೆ ಅವಕಾಶ ನೀಡುತ್ತಿದ್ದಾರೆ” ಎಂದು ಆರೋಪಿಸಿದರು.
ಕಡೂರು ಎಪಿಎಂಸಿ ಆವರಣದಲ್ಲಿ ನೂರಾರು ಟ್ರಾಕ್ಟರ್‌ಗಳು ಸಾಲಾಗಿ ನಿಂತಿದ್ದು, ಕಿಲೋಮೀಟರ್‌ಗಟ್ಟಲೆ ರೈತರು ತಮ್ಮ ಸರದಿಗಾಗಿ ಕಾಯುತ್ತಿರುವ ದೃಶ್ಯ ಕಂಡುಬಂದಿದೆ. ಹಗಲು-ರಾತ್ರಿ ಪರವಾಗದೆ ರೈತರು ಖರೀದಿ ಕೇಂದ್ರದ ಬಳಿ ಕಾದು ಕುಳಿತಿದ್ದಾರೆ.
ಈ ಘಟನೆ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ತಕ್ಷಣ ಗಮನಹರಿಸಿ ಸಮಸ್ಯೆ ಪರಿಹರಿಸಬೇಕು ಎಂದು ರೈತರು ಆಗ್ರಹಿಸಿದ್ದಾರೆ.

Leave a Reply

Your email address will not be published. Required fields are marked *