ತರೀಕೆರೆ: ಸಂಬಂಧಿಕರ ಮನೆಗೆ ದೀಪಾವಳಿ ಹಬ್ಬದ ಸಂಭ್ರಮದಲ್ಲಿ ತೆರಳುತ್ತಿದ್ದ ತಂದೆ-ಮಗಳು ಬೈಕ್ ಅಪಘಾತಕ್ಕೀಡಾಗಿ, ಮಗಳು ಮೃತಪಟ್ಟಿದ್ದು, ತಂದೆ ಗಂಭೀರವಾಗಿ ಗಾಯಗೊಂಡಿರುವ ಘಟನೆ ತರೀಕೆರೆ ತಾಲೂಕಿನ ಭೈರಾಪುರ ಕ್ರಾಸ್ ಬಳಿ ನಡೆದಿದೆ.
ಲಿಂಗದಹಳ್ಳಿ ಸಮೀಪದ ಶಾಂತಿನಗರ ನಿವಾಸಿಗಳಾದ ರಮೇಶ್ ಹಾಗೂ ಅವರ ಮಗಳು ದ್ರಾಕ್ಷಾಯಿಣಿ (20) ಬೈಕ್‌ನಲ್ಲಿ ಶಾಂತಿನಗರದಿಂದ ಎಂ.ಸಿ.ಹಳ್ಳಿ ಗ್ರಾಮದಲ್ಲಿರುವ ಚಿಕ್ಕಮ್ಮನ ಮಗಳ ಮನೆಗೆ ತೆರಳುತ್ತಿದ್ದರು. ಈ ವೇಳೆ ಬೈಕ್ ನಿಯಂತ್ರಣ ತಪ್ಪಿ ರಸ್ತೆ ಬದಿಯ ಮಣ್ಣಿನ ಗುಡ್ಡೆಗೆ ಡಿಕ್ಕಿ ಹೊಡೆದಿದೆ.
ಅಪಘಾತದ ತೀವ್ರತೆಗೆ ದ್ರಾಕ್ಷಾಯಿಣಿ ಮೃತಪಟ್ಟಿದ್ದು, ತಂದೆ ರಮೇಶ್ ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಾಳು ರಮೇಶ್ ಅವರನ್ನು ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.



