ಎನ್.ಆರ್ ಪುರ: ತಾಲೂಕಿನ ಬಾಳೆಹೊನ್ನೂರಿನಲ್ಲಿ ಆನ್‌ಲೈನ್ ಲಿಂಕ್ ಮೂಲಕ ಲಕ್ಷಾಂತರ ರೂಪಾಯಿ ಹಣ ವಂಚಿಸಿರುವ ಪ್ರಕರಣ ಬೆಳಕಿಗೆ ಬಂದಿದೆ. ಬ್ಯಾಂಕ್ ಗ್ರಾಹಕ ಸೇವಾ ಪ್ರತಿನಿಧಿಯ ಸೋಗಿನಲ್ಲಿ ಬಂದ ಕರೆಗೆ ಮರುಳಾದ ವ್ಯಕ್ತಿಯೊಬ್ಬರು ತಮ್ಮ ಖಾತೆಯಿಂದ ಸುಮಾರು 1.97 ಲಕ್ಷ ರೂಪಾಯಿಗಳನ್ನು ಕಳೆದುಕೊಂಡಿದ್ದಾರೆ.
ಬಾಳೆಹೊನ್ನೂರು ನಿವಾಸಿ ಅಕ್ಷಯ್ ಎಂಬುವವರು ತಮ್ಮ ಆಕ್ಸಿಸ್ ಬ್ಯಾಂಕ್ ಕ್ರೆಡಿಟ್ ಕಾರ್ಡ್‌ನ ಮಿತಿಯನ್ನು ಹೆಚ್ಚಿಸಲು ಮೊಬೈಲ್ ಬ್ಯಾಂಕಿಂಗ್ ಆಪ್ ಬಳಸುತ್ತಿದ್ದಾಗ ತಾಂತ್ರಿಕ ಸಮಸ್ಯೆ ಎದುರಾಗಿತ್ತು. ಇದನ್ನೇ ಬಂಡವಾಳ ಮಾಡಿಕೊಂಡ ‘ಸಂಜೀವ್’ ಎಂಬ ವಂಚಕ, ತಾನು ಬ್ಯಾಂಕ್ ಪ್ರತಿನಿಧಿ ಎಂದು ಹೇಳಿಕೊಂಡು ಕರೆ ಮಾಡಿ ನಂಬಿಸಿದ್ದಾನೆ. ಆತ ಕಳುಹಿಸಿದ ನಕಲಿ ವೆಬ್ ಲಿಂಕ್ ಕ್ಲಿಕ್ ಮಾಡಿ ಅಕ್ಷಯ್ ವಿವರಗಳನ್ನು ದಾಖಲಿಸುತ್ತಿದ್ದಂತೆಯೇ, ಕೇವಲ ಒಂದು ನಿಮಿಷದಲ್ಲಿ 1,97,841 ರೂಪಾಯಿ ಹಣ ರಿಲಯನ್ಸ್ ರಿಟೇಲ್ ಹೆಸರಿನ ಖಾತೆಗೆ ವರ್ಗಾವಣೆಯಾಗಿದೆ. ಹಣ ಕಡಿತಗೊಳ್ಳುತ್ತಿದ್ದಂತೆಯೇ ವಂಚಕ ತನ್ನ ಫೋನ್ ಸ್ವಿಚ್ ಆಫ್ ಮಾಡಿದ್ದಾನೆ. ಈ ಕುರಿತು ಬಾಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಅಪರಿಚಿತ ಲಿಂಕ್‌ಗಳ ಬಗ್ಗೆ ಜಾಗರೂಕರಾಗಿರಲು ಪೊಲೀಸರು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.
















Leave a Reply