ಚಿಕ್ಕಮಗಳೂರು: ನಗರದ ವಿಜಯಪುರ ಬಡಾವಣೆಯಲ್ಲಿ ಹಿಂದೂ ಕುಟುಂಬದ ಮನೆಯ ಮೇಲೆ ಕಲ್ಲು ತೂರಾಟ ನಡೆಸಿದ ಪ್ರಕರಣದಲ್ಲಿ ಈಗ ಅನಿರೀಕ್ಷಿತ ತಿರುವು ಕಂಡುಬಂದಿದೆ. ಘಟನೆ ನಡೆದ ಮನೆಯ ಪಕ್ಕದಲ್ಲೇ ವಾಸವಿರುವ ಇಕ್ಬಾಲ್ ಎಂಬುವವರು ಪೊಲೀಸರ ನಡೆ ಹಾಗೂ ಕಲ್ಲು ಹೊಡೆದ ಮುಸ್ಲಿಂ ಯುವಕರ ವಿರುದ್ಧವೇ ಕಿಡಿಕಾರುವ ಮೂಲಕ ಘಟನೆಯ ಅಸಲಿ ಸತ್ಯವನ್ನು ಬಿಚ್ಚಿಟ್ಟಿದ್ದಾರೆ.
ಬಂಧಿತ ಯುವಕರೇ ಕಲ್ಲು ಹೊಡೆದಿದ್ದನ್ನು ತಾವು ಕಣ್ಣಾರೆ ಕಂಡಿರುವುದಾಗಿ ಮತ್ತು ಅವರು ತಪ್ಪಿಸಿಕೊಳ್ಳಲು ಯತ್ನಿಸಿದಾಗ ತಾವೇ ಹಿಡಿದುಕೊಂಡಿದ್ದಾಗಿ ಸ್ಪಷ್ಟಪಡಿಸಿದ್ದಾರೆ. ಆದರೆ, ಘಟನೆ ನಡೆದ ಬಳಿಕ ಸಹಾಯಕ್ಕೆ ಧಾವಿಸಿದ ಬಿಜೆಪಿ ಮುಖಂಡ ಸಂತೋಷ್ ಕೋಟ್ಯಾನ್ ಮತ್ತು ಭಜರಂಗದಳದ ಶಾಮ್ ಅವರ ಮೇಲೆ ಪೊಲೀಸರು ಸುಖಾಸುಮ್ಮನೆ ಪ್ರಕರಣ ದಾಖಲಿಸಿರುವುದಕ್ಕೆ ಇಕ್ಬಾಲ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. “ಗಲಾಟೆ ನಡೆಯುತ್ತಿದೆ ಎಂದು ತಿಳಿದು ರಕ್ಷಣೆಗೆ ಬಂದವರ ಮೇಲೆ ಕೇಸ್ ಹಾಕಿ ಟಾರ್ಗೆಟ್ ಮಾಡಲಾಗುತ್ತಿದೆ. ಪೊಲೀಸರಿಗೆ ಸ್ವಲ್ಪನಾದರೂ ಮಾನ-ಮರ್ಯಾದೆ ಇದೆಯೇ?” ಎಂದು ಅವರು ನೇರವಾಗಿಯೇ ಪ್ರಶ್ನಿಸಿದ್ದಾರೆ.
ಕಲ್ಲು ತೂರಾಟ ನಡೆಸಿದ ಕಿಡಿಗೇಡಿಗಳು ಕಳೆದ ಒಂದು ವಾರದಿಂದ ದರೋಡೆ ಮಾಡುವ ಸಂಚಿನೊಂದಿಗೆ ಮನೆಯ ಹಿತ್ತಲಿನ ಭಾಗದಲ್ಲಿ ಅನುಮಾನಾಸ್ಪದವಾಗಿ ಓಡಾಡುತ್ತಿದ್ದರು ಎಂದು ಇಕ್ಬಾಲ್ ಮಾಹಿತಿ ನೀಡಿದ್ದಾರೆ. ಹಗಲು ಹೊತ್ತಿನಲ್ಲೇ ಹೆಣ್ಣುಮಕ್ಕಳು ಇರುವ ಮನೆಗೆ ನುಗ್ಗಲು ಯತ್ನಿಸುವುದು ಅಕ್ಷಮ್ಯ ಅಪರಾಧ. ಈಗ ಆರೋಪಿಗಳು ಏಟು ತಿಂದವರಂತೆ ಆಸ್ಪತ್ರೆಯಲ್ಲಿ ನಾಟಕವಾಡುತ್ತಾ ಮಲಗಿದ್ದಾರೆ. ಅವರಿಗೆ ಯಾರೂ ಹೊಡೆದಿಲ್ಲ, ಹೊಡೆದಿದ್ದರೆ ಅದಕ್ಕೆ ಸಾಕ್ಷಿ ತೋರಿಸಲಿ ಎಂದು ಸವಾಲು ಹಾಕಿದ್ದಾರೆ.
ಸಾಮಾನ್ಯವಾಗಿ ಸಣ್ಣಪುಟ್ಟ ವಿಚಾರಗಳಿಗೂ ಅಟ್ರಾಸಿಟಿ ಕೇಸ್ ದಾಖಲಿಸುವ ಪೊಲೀಸರು, ಈ ಗಂಭೀರ ಪ್ರಕರಣದಲ್ಲಿ ಅನ್ಯಾಯಕ್ಕೊಳಗಾದವರ ಪರ ನಿಲ್ಲದೆ ಕಿಡಿಗೇಡಿಗಳ ಪರವಾಗಿ ನಿಂತಿರುವುದು ಯಾಕೆ ಎಂದು ಅವರು ಆಕ್ರೋಶ ಹೊರಹಾಕಿದ್ದಾರೆ.















Leave a Reply