ಚಿಕ್ಕಮಗಳೂರು: ಎರಡು ತೆಂಗಿನ ಸಸಿಗಳನ್ನು ಕಡಿದ ವಿಚಾರಕ್ಕೆ ವ್ಯಕ್ತಿಯೊಬ್ಬನನ್ನು ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿರುವ ಘಟನೆ ಕಡೂರು ತಾಲೂಕಿನ ಪಂಚನಹಳ್ಳಿ ಸಮೀಪದ ಆಲದಹಳ್ಳಿ ತಾಂಡ್ಯಾದಲ್ಲಿ ನಡೆದಿದೆ.
ಮೃತನನ್ನು ದೇವರಾಜ್ ನಾಯ್ಕ್ (35) ಎಂದು ಗುರುತಿಸಲಾಗಿದೆ. ದೇವರಾಜ್ ನಾಯ್ಕ್ ತನ್ನ ಮಾವ ರಾಜಾನಾಯ್ಕ್ನಿಂದಲೇ ಕೊಲೆಯಾಗಿರುವ ಆರೋಪ ಕೇಳಿಬಂದಿದೆ.
ದೇವರಾಜ್ ನಾಯ್ಕ್ ರಾಜಾನಾಯ್ಕನ ಮಗಳನ್ನು ಮದುವೆಯಾಗಿದ್ದ ಎನ್ನಲಾಗಿದೆ. ದಂಪತಿ ನಡುವೆ ಜಗಳ ನಡೆದ ಬಳಿಕ ದೇವರಾಜ್ ಪತ್ನಿ ಬೆಂಗಳೂರಿನಲ್ಲಿ ವಾಸವಾಗಿದ್ದಳು. ಈ ನಡುವೆ ದೇವರಾಜ್ ನಾಯ್ಕ್ ಹಾಗೂ ರಾಜಾನಾಯ್ಕ್ ನಡುವೆ ಆಲದಹಳ್ಳಿಯಲ್ಲಿ ಆಗಾಗ್ಗೆ ಜಗಳ ನಡೆಯುತ್ತಿತ್ತು ಎನ್ನಲಾಗಿದೆ.
ಜಗಳದ ವೇಳೆ ರಾಜಾನಾಯ್ಕನ ತೋಟದಲ್ಲಿದ್ದ ಎರಡು ತೆಂಗಿನ ಸಸಿಗಳನ್ನು ದೇವರಾಜ್ ನಾಯ್ಕ್ ಕಡಿದಿದ್ದಾನೆ ಎನ್ನಲಾಗಿದೆ. ಇದರಿಂದ ಕೋಪಗೊಂಡ ರಾಜಾನಾಯ್ಕ್, ಅದೇ ಮಚ್ಚಿನಿಂದ ದೇವರಾಜ್ ನಾಯ್ಕ್ ಮೇಲೆ ಹಲ್ಲೆ ನಡೆಸಿದ್ದಾನೆ ಎಂದು ಆರೋಪಿಸಲಾಗಿದೆ.
ಗಂಭೀರವಾಗಿ ಗಾಯಗೊಂಡ ದೇವರಾಜ್ ನಾಯ್ಕ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎನ್ನಲಾಗಿದೆ. ಘಟನೆ ಸಂಬಂಧ ಪಂಚನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.




