ಎನ್.ಆರ್.ಪುರ : ಬೆಡ್ ಮೇಲೆ ಮಲಗಿ ಮೊಬೈಲ್ ಗುಂಗಲ್ಲಿ ಮುಳುಗಿದ ಆರೋಗ್ಯ ಕೇಂದ್ರದ ನರ್ಸ್‌!

Spread the love

 

ಎನ್.ಆರ್.ಪುರ : ಚಿಕ್ಕಮಗಳೂರು ಜಿಲ್ಲೆಯ ಎನ್.ಆರ್. ಪುರ ತಾಲೂಕಿನ ಬಾಳೆಹೊನ್ನೂರು ಪ್ರಾಥಮಿಕ ಆರೋಗ್ಯ ಕೇಂದ್ರವೀಗ ರೀಲ್ಸ್ ಅಡ್ಡವಾಗಿ ಮಾರ್ಪಟ್ಟಿದೆ. ರೋಗಿಗಳ ಸೇವೆಯಲ್ಲಿ ನಿರತರಾಗಬೇಕಿದ್ದ ನರ್ಸ್‌ಗಳು ಆಸ್ಪತ್ರೆಯ ಬೆಡ್‌ಗಳ ಮೇಲೆಯೇ ಮಲಗಿ ಮೊಬೈಲ್‌ನಲ್ಲಿ ರೀಲ್ಸ್ ನೋಡುವುದರಲ್ಲಿ ಮಗ್ನರಾಗಿರುವ ಆಘಾತಕಾರಿ ದೃಶ್ಯಗಳು ಬೆಳಕಿಗೆ ಬಂದಿವೆ. ಆಸ್ಪತ್ರೆಗೆ ಚಿಕಿತ್ಸೆಗಾಗಿ ಬರುವ ರೋಗಿಗಳು ನೋವಿನಿಂದ ನರಳುತ್ತಿದ್ದರೂ, ಅದಾವುದರ ಪರಿವೆಯಿಲ್ಲದ ನರ್ಸ್‌ಗಳು ತಮ್ಮದೇ ಲೋಕದಲ್ಲಿ ಮುಳುಗಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಇಲ್ಲಿನ ಸಿಬ್ಬಂದಿಗಳ ವಿರುದ್ಧ ಕೇಳಿಬರುತ್ತಿರುವ ಆರೋಪಗಳು ಒಂದೆರಡಲ್ಲ. ಮಧ್ಯಾಹ್ನ ಊಟಕ್ಕೆಂದು ಮನೆಗೆ ತೆರಳುವ ನರ್ಸ್‌ಗಳು ಮತ್ತೆ ಆಸ್ಪತ್ರೆಯ ಕಡೆಗೆ ಮುಖ ಮಾಡುವುದೇ ಅಪರೂಪ ಎಂಬ ದೂರಿದೆ. ಒಂದು ವೇಳೆ ಕೆಲಸಕ್ಕೆ ಬಂದರೂ ವೈದ್ಯರ ಅನುಪಸ್ಥಿತಿಯಲ್ಲಿ ರೀಲ್ಸ್ ನೋಡುವುದನ್ನೇ ತಮ್ಮ ಮುಖ್ಯ ಕರ್ತವ್ಯವಾಗಿಸಿಕೊಂಡಿದ್ದಾರೆ. ಚಿಕಿತ್ಸೆಗಾಗಿ ರೋಗಿಗಳು ದಾವಿಸಿದರೆ, ಕನಿಷ್ಠ ಸೌಜನ್ಯವೂ ಇಲ್ಲದೆ “ಡಾಕ್ಟರ್ ಬರ್ತಾರೆ, ಅಲ್ಲಿಯವರೆಗೆ ಸುಮ್ಮನೆ ಕುಳಿತುಕೊಳ್ಳಿ” ಎಂದು ಗದರಿಸುವ ಪ್ರವೃತ್ತಿ ಬೆಳೆದಿದೆ. ಇನ್ನು ಕೆಲವೊಮ್ಮೆ ಬೇಜವಾಬ್ದಾರಿಯ ಪರಮಾವಧಿ ಎಂಬಂತೆ, ಮೊಬೈಲ್ ನೋಡುತ್ತಲೇ ಪಕ್ಕದಲ್ಲಿರುವ ಮತ್ತೊಬ್ಬ ನರ್ಸ್ ಬಳಿ ಹೋಗುವಂತೆ ರೋಗಿಗಳನ್ನು ಅಲೆದಾಡಿಸುತ್ತಿದ್ದಾರೆ ಎನ್ನಲಾಗಿದೆ.
ವೈದ್ಯರ ನಿರ್ಲಕ್ಷ್ಯ ಮತ್ತು ನರ್ಸ್‌ಗಳ ಈ ಅತಿಯಾದ ಮೊಬೈಲ್ ವ್ಯಾಮೋಹದಿಂದಾಗಿ ಬಡ ರೋಗಿಗಳು ಹೈರಾಣಾಗಿದ್ದಾರೆ. ನರ್ಸ್ ಒಬ್ಬರು ಬೆಡ್ ಮೇಲೆ ಮಲಗಿ ಆರಾಮವಾಗಿ ರೀಲ್ಸ್ ವೀಕ್ಷಿಸುತ್ತಿರುವ ದೃಶ್ಯವನ್ನು ರೋಗಿಯೊಬ್ಬರು ತಮ್ಮ ಮೊಬೈಲ್‌ನಲ್ಲಿ ಸೆರೆಹಿಡಿದಿದ್ದು, ಈಗ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ರೋಗಿಗಳ ಜೀವದ ಜೊತೆ ಚೆಲ್ಲಾಟವಾಡುತ್ತಿರುವ ಇಂತಹ ಸಿಬ್ಬಂದಿಗಳ ವಿರುದ್ಧ ಜಿಲ್ಲಾ ಆರೋಗ್ಯ ಇಲಾಖೆ ಕಠಿಣ ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.

Leave a Reply

Your email address will not be published. Required fields are marked *