ಚಿಕ್ಕಮಗಳೂರು: ಕಾಫಿನಾಡಿನಲ್ಲಿ ಕಾಡಾನೆಗಳ ಆತಂಕ ಮುಂದುವರಿದಿದ್ದು, ಇದೀಗ ನಗರದ ಸಮೀಪದಲ್ಲೇ ಆನೆಗಳು ಪ್ರತ್ಯಕ್ಷವಾಗಿರುವುದು ಜನರಲ್ಲಿ ಭೀತಿ ಹುಟ್ಟಿಸಿದೆ. ಚಿಕ್ಕಮಗಳೂರು ನಗರದ ಕೂಗಳೆತೆಯಲ್ಲಿರುವ ಮೂಗ್ತಿಹಳ್ಳಿ ಮತ್ತು ಶಿರಗುಂದ ವ್ಯಾಪ್ತಿಯಲ್ಲಿ ಕಾಡಾನೆಗಳು ಸಂಚರಿಸುತ್ತಿದ್ದು, ಸುಮಾರು ಐದು ಕಿಲೋಮೀಟರ್ ವ್ಯಾಪ್ತಿಯಲ್ಲಿ ಈ ಆನೆಗಳು ಬೀಡುಬಿಟ್ಟಿವೆ. ಈ ಹಿನ್ನೆಲೆಯಲ್ಲಿ ಕಾಡಾನೆಗಳನ್ನು ಕಾಡಿಗೆ ಹಿಮ್ಮೆಟ್ಟಿಸಲು ಅರಣ್ಯ ಇಲಾಖೆ ಸಿದ್ಧತೆ ನಡೆಸಿದೆ. ಆನೆಗಳನ್ನು ಹಿಮ್ಮೆಟ್ಟಿಸುವ ಕಾರ್ಯಾಚರಣೆಯ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮತ್ತು ಸಾರ್ವಜನಿಕರ ಸುರಕ್ಷತೆಯ ದೃಷ್ಟಿಯಿಂದ ಚಿಕ್ಕಮಗಳೂರು ತಹಶಿಲ್ದಾರ್ ರೇಷ್ಮಾ ಅವರು ಸುತ್ತಮುತ್ತಲ 12 ಗ್ರಾಮಗಳಲ್ಲಿ ನಿಷೇಧಾಜ್ಞೆ ಜಾರಿಗೊಳಿಸಿ ಆದೇಶ ಹೊರಡಿಸಿದ್ದಾರೆ. ಈ ನಿಷೇಧಾಜ್ಞೆಯು ಫೆಬ್ರವರಿ 24ರ ಸಂಜೆ 4 ಗಂಟೆಯಿಂದ ಫೆಬ್ರವರಿ 25ರ ಬೆಳಗ್ಗೆ 8 ಗಂಟೆಯವರೆಗೆ ಜಾರಿಯಲ್ಲಿರಲಿದೆ. ಅರಣ್ಯ ಇಲಾಖೆಯ ಸಿಬ್ಬಂದಿ ಆನೆಗಳನ್ನು ಸುರಕ್ಷಿತವಾಗಿ ಕಾಡಿಗೆ ಅಟ್ಟುವ ಕಾರ್ಯದಲ್ಲಿ ನಿರತರಾಗಿದ್ದು, ಜನರು ಸಹಕರಿಸಬೇಕು ಎಂದು ವಿನಂತಿಸಲಾಗಿದೆ.















Leave a Reply