ಪಿಡಿಓ ವಿರುದ್ಧ ಸಿಡಿದ್ದೆದ ರಾಜ್ಯ ರೈತ ಸಂಘ ಒತ್ತುವರಿ ತೆರವುಗೊಳಿಸದಿರುವುದನ್ನು ಖಂಡಿಸಿ ಪ್ರತಿಭಟನೆ

Spread the love
Spread the love

ಚಿಕ್ಕಮಗಳೂರು ತಾಲೂಕಿನ ಆಲ್ದೂರು ಸಮೀಪದ ಚಿಕ್ಕಮಾಗರವಳ್ಳಿಯಲ್ಲಿ ನಡೆದಿರುವ ರಸ್ತೆ ಒತ್ತುವರಿ ಪ್ರಕರಣ ಇದೀಗ ಜಿಲ್ಲಾ ಪಂಚಾಯತ್ ಕಚೇರಿ ಅಂಗಳದಲ್ಲಿ ಕಿಚ್ಚು ಹಚ್ಚಿದೆ. ನ್ಯಾಯಕ್ಕಾಗಿ ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘದ ಕಾರ್ಯಕರ್ತರು ನಡೆಸಿದ ಪ್ರತಿಭಟನೆಯು ಪೊಲೀಸರು ಮತ್ತು ರೈತರ ನಡುವಿನ ತೀವ್ರ ವಾಗ್ವಾದಕ್ಕೆ ಸಾಕ್ಷಿಯಾಯಿತು.

ಸಿ.ಬಿ. ವಿಜಯೇಂದ್ರ ಎಂಬುವವರು ಗ್ರಾಮಠಾಣಾ ಜಾಗದಲ್ಲಿ ಸುಮಾರು 7 ಗುಂಟೆ ಪ್ರದೇಶವನ್ನು ಒತ್ತುವರಿ ಮಾಡಿ ಅನಧಿಕೃತವಾಗಿ ಕಾಂಪೌಂಡ್ ನಿರ್ಮಿಸಿದ್ದಾರೆ ಎಂಬುದು ರೈತರ ಗಂಭೀರ ಆರೋಪ. ಇದರಿಂದಾಗಿ ಹೇಮಂತ್ ಹಾಗೂ ಇತರ ಗ್ರಾಮಸ್ಥರು ತಮ್ಮ ಕೃಷಿ ಪರಿಕರಗಳನ್ನು ಸಾಗಿಸಲು ಮತ್ತು ಓಡಾಡಲು ದಾರಿಯಿಲ್ಲದೆ ಪರದಾಡುವಂತಾಗಿದೆ.

ಈ ಒತ್ತುವರಿಯನ್ನು ತೆರವುಗೊಳಿಸುವಂತೆ ಕುಂದುಕೊರತೆ ನಿವಾರಣಾ ಪ್ರಾಧಿಕಾರ ಮತ್ತು ತಾಲ್ಲೂಕು ಪಂಚಾಯಿತಿ ಈಗಾಗಲೇ ಸ್ಪಷ್ಟ ಆದೇಶ ನೀಡಿದ್ದರೂ, ಆಲ್ದೂರು ಗ್ರಾಮ ಪಂಚಾಯಿತಿಯ ಪಿಡಿಒ ಅವರು ಈ ಆದೇಶವನ್ನು ಗಾಳಿಗೆ ತೂರಿದ್ದಾರೆ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪಿಡಿಒ ಅವರು ಒತ್ತುವರಿದಾರರ ಪರವಾಗಿ ನಿಂತು ಕರ್ತವ್ಯ ಲೋಪ ಎಸಗುತ್ತಿದ್ದಾರೆ ಎಂಬುದು ಪ್ರತಿಭಟನಾಕಾರರ ದೂರು.

ಜಿ.ಪಂ. ಕಚೇರಿ ಎದುರು ಸೇರಿದ ರೈತ ಸಂಘದ ಕಾರ್ಯಕರ್ತರು ಮತ್ತು ಪೊಲೀಸರ ನಡುವೆ ವಾಗ್ವಾದ ನಡೆದು ಆದೇಶ ಉಲ್ಲಂಘಿಸುತ್ತಿರುವ ಪಿಡಿಒ ಅವರನ್ನು ಕೂಡಲೇ ಸೇವೆಯಿಂದ ವಜಾಗೊಳಿಸಬೇಕು ಮತ್ತು ಅಕ್ರಮ ಕಾಂಪೌಂಡ್ ಅನ್ನು ತಕ್ಷಣವೇ ನೆಲಸಮಗೊಳಿಸಬೇಕು ಎಂದು ರೈತ ಸಂಘದ ಜಿಲ್ಲಾಧ್ಯಕ್ಷ ಮಹೇಶ್ ಮತ್ತು ಕಾರ್ಯಕರ್ತರು ಪಟ್ಟು ಹಿಡಿದರು.

ರೈತರ ಆಕ್ರೋಶಕ್ಕೆ ಮಣಿದ ಹಿರಿಯ ಅಧಿಕಾರಿಗಳು ಮಧ್ಯಪ್ರವೇಶಿಸಿ, ಮುಂದಿನ ಒಂದು ವಾರದೊಳಗೆ ವಿಶೇಷ ಸಭೆ ಕರೆದು ಈ ಸಮಸ್ಯೆಗೆ ಶಾಶ್ವತ ಪರಿಹಾರ ಒದಗಿಸುವ ಭರವಸೆ ನೀಡಿದರು. ಈ ಭರವಸೆಯ ನಂತರ ರೈತರು ತಮ್ಮ ಹೋರಾಟವನ್ನು ತಾತ್ಕಾಲಿಕವಾಗಿ ಹಿಂಪಡೆದಿದ್ದಾರೆ.

Leave a Reply

Your email address will not be published. Required fields are marked *