ಲಕ್ಕವಳ್ಳಿ: ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲೂಕಿನ ಲಕ್ಕವಳ್ಳಿ ಗ್ರಾಮದ ಸುತ್ತಮುತ್ತಲ ಪ್ರದೇಶದಲ್ಲಿ ಕರಡಿಯೊಂದು ಪ್ರತ್ಯಕ್ಷವಾಗಿದ್ದು, ಜನರಲ್ಲಿ ತೀವ್ರ ಆತಂಕ ಸೃಷ್ಟಿಸಿದೆ. ಸುಮಾರು ಎರಡು ಕಿಲೋಮೀಟರ್‌ಗಳಿಗೂ ಹೆಚ್ಚು ಕಾಲ ರಾಜ್ಯ ಹೆದ್ದಾರಿಯಲ್ಲಿ ಓಡಿದ ಕರಡಿ, ಬೈಕ್ ಸವಾರರು ಹಾಗೂ ಹಳ್ಳಿಗರನ್ನು ಬೆಚ್ಚಿಬೀಳಿಸಿದೆ.
ತರೀಕೆರೆ-ಶಿವಮೊಗ್ಗ ರಾಜ್ಯ ಹೆದ್ದಾರಿಯಲ್ಲಿ ಕಾಣಿಸಿಕೊಂಡ ಈ ಕರಡಿ, ಕುವೆಂಪು ವಿಶ್ವವಿದ್ಯಾನಿಲಯದ ಹತ್ತಿರದ ಲಕ್ಕವಳ್ಳಿ ಗ್ರಾಮದ ಬಳಿ ಜನನಿಬಿಡ ರಸ್ತೆಯಲ್ಲೇ ಓಡಿದೆ. ಸುಮಾರು 2 ಕಿ.ಮೀ ದೂರದವರೆಗೆ ರಸ್ತೆಯ ಮಧ್ಯೆಯೇ ಸಾಗಿದ ಕರಡಿಯನ್ನು ಕಂಡು ವಾಹನ ಸವಾರರು ಕಂಗಾಲಾಗಿದ್ದಾರೆ. ಅನಿವಾರ್ಯವಾಗಿ ಬೈಕ್ ಸವಾರರು ಭಯದಿಂದ ಹಾರನ್ ಮಾಡುತ್ತಾ ಕರಡಿಯನ್ನು ಓಡಿಸಲು ಪ್ರಯತ್ನಿಸುತ್ತಾ ಸಾಗಿದ್ದಾರೆ. ದಾರಿಹೊಕ್ಕರು ಈ ದೃಶ್ಯವನ್ನು ತಮ್ಮ ಮೊಬೈಲ್ ಕ್ಯಾಮೆರಾಗಳಲ್ಲಿ ಸೆರೆಹಿಡಿದಿದ್ದಾರೆ
ಇನ್ನು ಮನೆಯೊಂದರ ಬಾಗಿಲಲ್ಲೇ ಮಗುವೊಂದು ಆಟವಾಡುತ್ತಿತ್ತು. ಮಗುವಿನ ತೀರಾ ಹತ್ತಿರದಲ್ಲೇ ಸಾಗಿದ ಕರಡಿ, ಅದೃಷ್ಟವಶಾತ್ ಮಗುವಿಗೆ ಯಾವುದೇ ತೊಂದರೆ ನೀಡದೆ ಪಕ್ಕದಲ್ಲೇ ಹಾದು ಹೋಗಿದೆ. ಇದನ್ನು ಕಂಡ ಮನೆಯವರು ಹಾಗೂ ಗ್ರಾಮಸ್ಥರು ಒಂದು ಕ್ಷಣ ಸ್ತಬ್ಧರಾಗಿದ್ದರು.
ಕರಡಿ ಗ್ರಾಮದೊಳಗೆ ಬರುತ್ತಿದ್ದಂತೆ ಸ್ಥಳೀಯ ನಾಯಿಗಳು ಅದರ ಮೇಲೆ ಬೊಗಳುತ್ತಾ ಅಟ್ಟಿಸಿಕೊಂಡು ಬಂದಿವೆ. ಈ ವೇಳೆ ತಿರುಗಿಬಿದ್ದ ಕರಡಿ, ನಾಯಿಗಳನ್ನೇ ಹೆದರಿಸಿ ಓಡಿಸಿ, ಬಳಿಕ ಅರಣ್ಯದ ಅಂಚಿನಲ್ಲಿ ಕಣ್ಮರೆಯಾಗಿದೆ
ವಿಷಯ ತಿಳಿಯುತ್ತಿದ್ದಂತೆಯೇ ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸದ್ಯ ಲಕ್ಕವಳ್ಳಿ ಹಾಗೂ ಸುತ್ತಮುತ್ತಲ ಗ್ರಾಮದ ಜನರು ಕರಡಿ ದಾಳಿಯ ಭೀತಿಯಲ್ಲಿ ಬದುಕುತ್ತಿದ್ದಾರೆ. “ಕರಡಿ ಜನವಸತಿ ಪ್ರದೇಶಕ್ಕೆ ನುಗ್ಗುತ್ತಿರುವುದು ಅಪಾಯಕಾರಿ. ಕೂಡಲೇ ಅರಣ್ಯ ಇಲಾಖೆ ಕಾರ್ಯಪ್ರವೃತ್ತರಾಗಿ ಕರಡಿಯನ್ನು ಸೆರೆಹಿಡಿದು ದೂರದ ಕಾಡಿಗೆ ಸ್ಥಳಾಂತರಿಸಬೇಕು” ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.
















Leave a Reply