🏠 Home ದೇಶ ಜಿಲ್ಲಾ ಸುದ್ದಿ ತಾಲ್ಲೂಕು ರಾಜ್ಯ ರಾಜಕೀಯ  ಆರೋಗ್ಯ  ಕ್ರೈಮ್  ಪ್ರವಾಸ ಶಿಕ್ಷಣ

 

Breaking News
---Advertisement---
 

ಕಾಡಾನೆ ಅಟ್ಟಹಾಸ: ತೋಟದ ಕಾರ್ಮಿಕ ಬಲಿ ಅರಣ್ಯ ಇಲಾಖೆ ವಿರುದ್ಧ ಬೃಹತ್ ಪ್ರತಿಭಟನೆ

---Advertisement---

ಚಿಕ್ಕಮಗಳೂರು: ಕಾಡಾನೆ ಮತ್ತು ಮಾನವ ಸಂಘರ್ಷದ ದಾರುಣ ಘಟನೆ ನಡೆದಿದ್ದು, ಆನೆ ದಾಳಿಗೆ ಕಾಫಿ ತೋಟದ ಕಾರ್ಮಿಕರೊಬ್ಬರು ಬಲಿಯಾಗಿರುವ ಘಟನೆ ಚಿಕ್ಕಮಗಳೂರು ತಾಲೂಕಿನ ಹುಣಸೇಹಳ್ಳಿ ಸಮೀಪದ ಹ್ಯಾರಂಬಿಪುರ ಗ್ರಾಮದಲ್ಲಿ ನಡೆದಿದೆ. ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ತಿರುವಳ್ಳಿ ಮೂಲದ ಯಲ್ಲಪ್ಪ (45) ಮೃತಪಟ್ಟ ದುರ್ದೈವಿ. ಗಾರೆ ಹಾಗೂ ಕೂಲಿ ಕೆಲಸ ಮಾಡುತ್ತಿದ್ದ ಯಲ್ಲಪ್ಪ ಅವರು ನಾಗೇಶ್ ಗೌಡರ ತೋಟದ ಮೂಲಕ ಶ್ರೀಧರ್ ಗೌಡರ ತೋಟದ ಲೈನ್ ಮನೆಗೆ ತೆರಳುತ್ತಿದ್ದಾಗ ಕಾಡಾನೆ ಏಕಾಏಕಿ ದಾಳಿ ಮಾಡಿದೆ. ದಾಳಿಯ ತೀವ್ರತೆಗೆ ಸಿಲುಕಿದ ಅವರು ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ. ವಿಷಯ ತಿಳಿಯುತ್ತಿದ್ದಂತೆಯೇ ಬಾಳೆಹೊನ್ನೂರು ಪೊಲೀಸರು ಮತ್ತು ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಈ ಅನಿರೀಕ್ಷಿತ ಸಾವಿನಿಂದ ಆಕ್ರೋಶಗೊಂಡಿರುವ ಮಲೆನಾಡು ನಾಗರಿಕ ರಕ್ಷಣಾ ವೇದಿಕೆ ಹಾಗೂ ವಿವಿಧ ರೈತ ಪರ ಸಂಘಟನೆಗಳ ಕಾರ್ಯಕರ್ತರು ಬಾಳೆಹೊನ್ನೂರು ಅರಣ್ಯ ಇಲಾಖೆ ಕಚೇರಿ ಮುಂದೆ ಬೃಹತ್ ಪ್ರತಿಭಟನೆ ನಡೆಸಿದ್ದಾರೆ. ಕಾಡಾನೆಗಳ ಹಾವಳಿಯಿಂದ ಅಮಾಯಕ ಜೀವಗಳು ಬಲಿಯಾಗುತ್ತಿದ್ದರೂ ನಿಯಂತ್ರಿಸಲು ಅರಣ್ಯ ಇಲಾಖೆ ವಿಫಲವಾಗಿದೆ ಎಂದು ಗ್ರಾಮಸ್ಥರು ಮತ್ತು ಪ್ರತಿಭಟನಾಕಾರರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಮೃತರ ಕುಟುಂಬಕ್ಕೆ ತಕ್ಷಣವೇ ಗರಿಷ್ಠ ಪರಿಹಾರ ಘೋಷಿಸಬೇಕು ಮತ್ತು ಈ ಭಾಗದಲ್ಲಿ ಕಾಡಾನೆಗಳ ಹಾವಳಿ ತಡೆಗಟ್ಟಲು ಅರಣ್ಯ ಇಲಾಖೆಯು ಶಾಶ್ವತ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಪ್ರತಿಭಟನಾಕಾರರು ಕಟ್ಟುನಿಟ್ಟಿನ ಆಗ್ರಹ ಮಂಡಿಸಿದ್ದಾರೆ.

Join WhatsApp

Join Now

Join Telegram

Join Now