ತರೀಕೆರೆ ತಾಲೂಕಿನ ಹೆಚ್. ರಂಗಾಪುರದಲ್ಲಿರುವ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯಲ್ಲಿ ಗೋಧಿ ದುರ್ಬಳಕೆಯ ಗಂಭೀರ ಪ್ರಕರಣ ಬೆಳಕಿಗೆ ಬಂದಿದೆ. ಜೆಸಿಬಿ ಯಂತ್ರದ ಮೂಲಕ ನಡೆದ ಉತ್ಖನನದಲ್ಲಿ ಸುಮಾರು 70 ರಿಂದ 80 ಚೀಲ ಗೋಧಿಯನ್ನು ಮಣ್ಣಿನೊಳಗೆ ಹೂತು ಹಾಕಿರುವುದು ಪತ್ತೆಯಾಗಿದೆ.
ಈ ವಸತಿ ಶಾಲೆ ಸಮಾಜ ಕಲ್ಯಾಣ ಇಲಾಖೆಯ ಕ್ರೈಸ್ (KREIS) ವ್ಯಾಪ್ತಿಗೆ ಸೇರಿದ್ದು, ವಿದ್ಯಾರ್ಥಿಗಳಿಗೆ ನೀಡಬೇಕಾಗಿದ್ದ ಗೋಧಿಯನ್ನು ಅಕ್ರಮವಾಗಿ ಮಣ್ಣುಪಾಲು ಮಾಡಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಪ್ರಕರಣ ಸಂಬಂಧಿಸಿದಂತೆ ವಸತಿ ಶಾಲಾ ಸಿಬ್ಬಂದಿ ಮೇಲಾಧಿಕಾರಿಗಳ ಗಮನಕ್ಕೆ ತರದೆ ಈ ಕೃತ್ಯ ಎಸಗಿದ್ದಾರೆ ಎನ್ನಲಾಗಿದೆ.
ಪ್ರಾಥಮಿಕ ತನಿಖೆಯ ಪ್ರಕಾರ, ಸುಮಾರು 2 ವರ್ಷಗಳ ಹಿಂದೆ “ಬಳಕೆಗೆ ಯೋಗ್ಯವಿಲ್ಲ” ಎಂಬ ಕಾರಣ ನೀಡಿ ಗೋಧಿಯನ್ನು ಹೂತು ಹಾಕಲಾಗಿದೆ ಎಂದು ಹೇಳಲಾಗುತ್ತಿದೆ. ಆದರೆ ಇತ್ತೀಚೆಗೆ ನಡೆದ ಉತ್ಖನನದಲ್ಲಿ ದೊಡ್ಡ ಪ್ರಮಾಣದ ಗೋಧಿ ಚೀಲಗಳು ಪತ್ತೆಯಾಗಿರುವುದರಿಂದ ಈ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದೆ.
2023-24ರ ಬೇಸಿಗೆ ರಜೆ ಅವಧಿಯಲ್ಲಿ ಈ ಘಟನೆ ನಡೆದಿದೆ ಎಂದು ಶಂಕಿಸಲಾಗಿದ್ದು, ಸುಮಾರು ಎರಡು ವರ್ಷಗಳ ನಂತರ ಪ್ರಕರಣ ಬೆಳಕಿಗೆ ಬಂದಿದೆ. ಈ ಘಟನೆ ಮೂಲಕ ಎಸ್ಸಿ/ಎಸ್ಟಿ ವಿದ್ಯಾರ್ಥಿಗಳಿಗೆ ಮೀಸಲಾದ ಅನುದಾನದ ದುರ್ಬಳಕೆ ನಡೆದಿರುವುದು ಬಹಿರಂಗವಾಗಿದೆ.
















Leave a Reply