ಚಿಕ್ಕಮಗಳೂರು: ಮಂತ್ರಾಲಯಕ್ಕೆ ಯಾತ್ರೆ ತೆರಳಿದ್ದ ಯಾತ್ರಿಗಳ ವಾಹನ ಭೀಕರ ಅಪಘಾತಕ್ಕೀಡಾಗಿದ್ದು, ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲೂಕಿನ ಇಬ್ಬರು ಹಾಗೂ ಹಾಸನ ಜಿಲ್ಲೆಯ ಬೇಲೂರು ತಾಲೂಕಿನ ಆರು ಮಂದಿ ಸೇರಿದಂತೆ ಒಟ್ಟು ಎಂಟು ಜನ ಸ್ಥಳದಲ್ಲೇ ಸಾವನ್ನಪ್ಪಿರುವ ಧಾರುಣ ಘಟನೆ ನಡೆದಿದೆ.
ನಿನ್ನೆ ಸಂಜೆ ತರೀಕೆರೆ ತಾಲೂಕಿನ ಉಡೆವಾ ಗ್ರಾಮದಿಂದ ಒಟ್ಟು 18 ಜನರ ತಂಡ ಮಂತ್ರಾಲಯ ಯಾತ್ರೆಗಾಗಿ ಪ್ರವಾಸ ಹಮ್ಮಿಕೊಂಡಿತ್ತು. ಇವರೆಲ್ಲರೂ ಸಂಬಂಧಿಕರಾಗಿದ್ದು, ಭಕ್ತಿಪೂರ್ವಕವಾಗಿ ರಾಯರ ದರ್ಶನಕ್ಕೆ ತೆರಳುತ್ತಿದ್ದರು. ಆದರೆ ವಿಧಿಯಾಟ ಬೇರೆಯೇ ಇತ್ತು. ಮಂತ್ರಾಲಯದ ಸಮೀಪವೇ ಇವರಿದ್ದ ವಾಹನ ಅಪಘಾತಕ್ಕೆ ಸಿಲುಕಿದೆ.
ಈ ಅಪಘಾತದಲ್ಲಿ ತರೀಕೆರೆ ತಾಲೂಕಿನ ಉಡೆವಾ ಗ್ರಾಮದ ಪುಟ್ಟಮ್ಮ (65) ಹಾಗೂ ಮೀನಾಕ್ಷಿ (50) ಮೃತಪಟ್ಟ ದುರ್ದೈವಿಗಳಾಗಿದ್ದಾರೆ. ಇನ್ನುಳಿದಂತೆ ಹಾಸನ ಜಿಲ್ಲೆಯ ಬೇಲೂರು ತಾಲೂಕಿನ ಶೆಟ್ಟಿಗೆರೆ ಗ್ರಾಮದ ಆರು ಜನ ಪ್ರಾಣ ಕಳೆದುಕೊಂಡಿದ್ದಾರೆ.
ಯಾತ್ರೆಗೆ ಹೋಗಿ ಸಂಭ್ರಮದಿಂದ ಬರುತ್ತಾರೆ ಎಂದು ಕಾಯುತ್ತಿದ್ದ ಉಡೆವಾ ಗ್ರಾಮಸ್ಥರಿಗೆ ಈ ಸುದ್ದಿ ಅತೀವ ಆಘಾತ ತಂದಿದೆ. ಒಂದೇ ಕುಟುಂಬದ ಸದಸ್ಯರು ಮತ್ತು ಸಂಬಂಧಿಕರು ಮೃತಪಟ್ಟಿರುವುದರಿಂದ ಗ್ರಾಮದಲ್ಲಿ ನೀರವ ಮೌನ ಆವರಿಸಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಉಳಿದ ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿದುಬಂದಿದೆ.
ಮಂತ್ರಾಲಯದ ಬಳಿ ಭೀಕರ ರಸ್ತೆ ಅಪಘಾತ: ತರೀಕೆರೆ ಹಾಗೂ ಬೇಲೂರಿನ 8 ಮಂದಿ ಸಾವು
By admin
On: April 16, 2026 4:21 AM
---Advertisement---


