ಚಿಕ್ಕಮಗಳೂರು: ಮನೆಯಲ್ಲಿ ಜೋಕಾಲಿ ಆಡುತ್ತಿದ್ದ ಬಾಲಕಿಯೊಬ್ಬಳು ಆಕಸ್ಮಿಕವಾಗಿ ಸೀರೆ ಕೊರಳಿಗೆ ಬಿಗಿದು ಮೃತಪಟ್ಟಿರುವ ಅತ್ಯಂತ ವಿಷಾದನೀಯ ಘಟನೆ ಜಿಲ್ಲೆಯ ತಾಲೂಕಿನ ಹೆಬ್ಬಳ್ಳಿ ಗ್ರಾಮದಲ್ಲಿ ನಡೆದಿದೆ. ಹತ್ತು ವರ್ಷದ ಲೇಖನಾ ಮೃತಪಟ್ಟ ದುರ್ದೈವಿ ಬಾಲಕಿಯಾಗಿದ್ದಾಳೆ.
ಮನೆಯಲ್ಲಿ ಪೋಷಕರು ಇಲ್ಲದ ಸಮಯದಲ್ಲಿ ಲೇಖನಾ ಸೀರೆಯಿಂದ ಮಾಡಿದ ಜೋಕಾಲಿಯಲ್ಲಿ ಆಟವಾಡುತ್ತಿದ್ದಳು ಎನ್ನಲಾಗಿದೆ. ಈ ವೇಳೆ ಆಕಸ್ಮಿಕವಾಗಿ ಸೀರೆಯು ಉರುಳಾಗಿ ಕತ್ತಿಗೆ ಬಿಗಿದಿದ್ದರಿಂದ ಉಸಿರುಗಟ್ಟಿ ಬಾಲಕಿ ಸ್ಥಳದಲ್ಲೇ ಪ್ರಾಣ ಕಳೆದುಕೊಂಡಿದ್ದಾಳೆ. ವಿಷಯ ತಿಳಿಯುತ್ತಿದ್ದಂತೆಯೇ ಚಿಕ್ಕಮಗಳೂರು ಗ್ರಾಮಾಂತರ ಪೊಲೀಸ್ ಠಾಣೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮಗುವನ್ನು ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.













Leave a Reply