ಚಿಕ್ಕಮಗಳೂರು: ಭಾರತೀಯ ಕಾಫಿ ಮಂಡಳಿಗೆ ಹೊಸ ರೂಪ ನೀಡುವ ಮೂಲಕ ಕಾಫಿ ಉದ್ಯಮದ ಅಭಿವೃದ್ಧಿಗೆ ಶ್ರಮಿಸಿರುವ ಕಾಫಿ ಮಂಡಳಿ ಅಧ್ಯಕ್ಷ ದಿನೇಶ್ ದೇವವೃಂದ ಅವರ ಅಧಿಕಾರಾವಧಿ ನವೆಂಬರ್ನಲ್ಲಿ ಮುಕ್ತಾಯಗೊಳ್ಳಲಿದೆ. ಈ ಹಿನ್ನೆಲೆಯಲ್ಲಿ ಮುಂದಿನ ಅವಧಿಗೂ ದಿನೇಶ್ ದೇವವೃಂದ ಅವರನ್ನೇ ಅಧ್ಯಕ್ಷರಾಗಿ ಮುಂದುವರಿಸಬೇಕು ಎಂದು ಕಾಫಿ ಬೆಳೆಗಾರರ ಹಿತರಕ್ಷಣಾ ವೇದಿಕೆ ಮುಖಂಡ ಹೊಲದಗದ್ದೆ ಗಿರೀಶ್ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ದಿನೇಶ್ ದೇವವೃಂದ ಅವರು ಕಾಫಿ ಮಂಡಳಿ ಅಧ್ಯಕ್ಷರಾದ ಬಳಿಕ ಕಾಫಿ ಉದ್ಯಮಕ್ಕೆ ಹೊಸ ಬಲ ತುಂಬುವ ಕೆಲಸ ಮಾಡಿದ್ದಾರೆ. ಭಾರತೀಯ ಕಾಫಿಯನ್ನು ಜಾಗತಿಕ ಮಟ್ಟದಲ್ಲಿ ಬ್ರಾಂಡ್ ಮಾಡುವ ಉದ್ದೇಶದಿಂದ ಹಲವು ಮಹತ್ವದ ಕಾರ್ಯಗಳಿಗೆ ಚಾಲನೆ ನೀಡಿದ್ದಾರೆ. ಅಲ್ಲದೆ, ಕಾಫಿ ಮಂಡಳಿಯಲ್ಲಿ 32ಕ್ಕೂ ಹೆಚ್ಚು ಯೋಜನೆಗಳನ್ನು ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಿದ್ದಾರೆ ಎಂದು ಗಿರೀಶ್ ತಿಳಿಸಿದ್ದಾರೆ.

ಈ ಯೋಜನೆಗಳು ಸಮರ್ಪಕವಾಗಿ ಪೂರ್ಣಗೊಳ್ಳಬೇಕಾದರೆ ದಿನೇಶ್ ದೇವವೃಂದ ಅವರಿಗೆ ಮತ್ತೊಂದು ಅವಧಿಗೆ ಅಧ್ಯಕ್ಷ ಸ್ಥಾನ ನೀಡುವುದು ಅಗತ್ಯವಾಗಿದೆ. ಕಾಫಿ ಬೆಳೆಯಲ್ಲಿ ಆಧುನಿಕ ತಂತ್ರಜ್ಞಾನಗಳ ಅಳವಡಿಕೆ ಹಾಗೂ ಹೊಸ ಸಂಶೋಧನೆಗಳಿಗೆ ಅವರ ಅವಧಿಯಲ್ಲಿ ಹೆಚ್ಚಿನ ಆದ್ಯತೆ ನೀಡಲಾಗಿದೆ. ಕಾಫಿ ಮಂಡಳಿಯ ವಿಜ್ಞಾನಿಗಳು ಕೂಡ ಅವರ ಮಾರ್ಗದರ್ಶನದಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಹೇಳಿದ್ದಾರೆ.
ಕಾಫಿ ಇಳುವರಿ ಹೆಚ್ಚಿಸುವ ನಿಟ್ಟಿನಲ್ಲಿಯೂ ಹಲವು ಸಂಶೋಧನೆಗಳು ನಡೆಯುತ್ತಿವೆ. ನಾಗಾಲ್ಯಾಂಡ್, ಅಸ್ಸಾಂ, ಆಂಧ್ರಪ್ರದೇಶ ಸೇರಿದಂತೆ ಈಶಾನ್ಯ ರಾಜ್ಯಗಳಿಗೆ ಭೇಟಿ ನೀಡಿ ಅಲ್ಲಿನ ಸರ್ಕಾರಗಳ ಗಮನ ಸೆಳೆದ ಪರಿಣಾಮ, ಕಾಫಿ ಬೆಳೆಗೆ ಉತ್ತೇಜನ ನೀಡುವ ಪ್ರಯತ್ನಗಳು ನಡೆಯುತ್ತಿವೆ. ಅಲ್ಲಿನ ಸರ್ಕಾರಗಳು ಬೆಳೆಗಾರರಿಗೆ ಭೂಮಿ ಒದಗಿಸಿ ಕಾಫಿ ಕೃಷಿಗೆ ಪ್ರೋತ್ಸಾಹ ನೀಡುತ್ತಿವೆ ಎಂದು ತಿಳಿಸಿದ್ದಾರೆ.

