ಚಿಕ್ಕಮಗಳೂರಿನ ಹಿಂದೂ ಮಹಾಗಣಪತಿ ವಿಸರ್ಜನೆಯ ಸಂದರ್ಭದಲ್ಲಿ ಭಕ್ತರು ಹಾಗೂ ಸಂಘಟಕರು ಮಳೆಗಾಗಿ ಸಲ್ಲಿಸಿದ್ದ ವಿಶೇಷ ಪ್ರಾರ್ಥನೆಗೆ ವರುಣದೇವ ತಕ್ಷಣವೇ ಸ್ಪಂದಿಸಿದ್ದಾನೆ. ಬರ ಹಾಗೂ ನೀರಿನ ಅಭಾವ ಎದುರಿಸುತ್ತಿದ್ದ ಮಳಲೂರು ಸೇರಿದಂತೆ ಸುತ್ತಮುತ್ತಲ ಗ್ರಾಮಸ್ಥರು, ಗಣೇಶನ ವಿಸರ್ಜನಾ ಮಹೋತ್ಸವದ ವೇಳೆ ಉತ್ತಮ ಮಳೆಯಾಗಲಿ ಎಂದು ವಿಘ್ನವಿನಾಶಕನಲ್ಲಿ ಭಕ್ತಿಪೂರ್ವಕವಾಗಿ ಮೊರೆಹೋಗಿದ್ದರು. ವಿಸರ್ಜನೆ ಮುಗಿದು ಕೇವಲ ಎರಡೇ ದಿನ ಕಳೆಯುವುದರೊಳಗೆ ಮೂಡಿಗೆರೆ ತಾಲ್ಲೂಕು ಹಾಗೂ ಮಳಲೂರು ಸುತ್ತಮುತ್ತಲಿನ ಭಾಗಗಳಲ್ಲಿ ಮಳೆರಾಯ ಅಬ್ಬರಿಸಿ ಬೊಬ್ಬಿರಿದಿದ್ದಾನೆ. ಗುಡುಗು-ಮಿಂಚಿನ ಸಮೇತ ಸುರಿದ ಧಾರಾಕಾರ ಮಳೆಗೆ ಇಡೀ ಪರಿಸರ ತಂಪಾಗಿದ್ದು, ಭಕ್ತರ ಕೋರಿಕೆಗೆ ಗಣಪತಿ ಕರುಣೆ ತೋರಿದ್ದಾನೆ ಎಂದು ಗ್ರಾಮಸ್ಥರು ಸಂತಸ ವ್ಯಕ್ತಪಡಿಸಿದ್ದಾರೆ.




