🏠 Home ದೇಶ ಜಿಲ್ಲಾ ಸುದ್ದಿ ತಾಲ್ಲೂಕು ರಾಜ್ಯ ರಾಜಕೀಯ  ಆರೋಗ್ಯ  ಕ್ರೈಮ್  ಪ್ರವಾಸ ಶಿಕ್ಷಣ

 

Breaking News
---Advertisement---
 

ಮಾನವೀಯತೆ ಮರೆತ ಹೆತ್ತವರು: ಒಂದು ದಿನದ ಹಸುಗೂಸನ್ನು ಪೊದೆಗೆ ಎಸೆದ ಪಾಪಿಗಳು

---Advertisement---

 

ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರ ತಾಲೂಕಿನ ಮುತ್ತಿನಕೊಪ್ಪ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಮಾನವೀಯತೆ ಮರೆತ ಘಟನೆಯೊಂದು ಬೆಳಕಿಗೆ ಬಂದಿದ್ದು, ಕೇವಲ ಒಂದು ದಿನದ ಹಸುಗೂಸನ್ನು ಪೊದೆಯೊಂದರಲ್ಲಿ ಅನಾಥವಾಗಿ ಬಿಟ್ಟು ಹೋಗಲಾಗಿದೆ. ಕುಮಾರ ದೇವಸ್ಥಾನದ ಸಮೀಪ ಎಂದಿನಂತೆ ನೀರು ಬಿಡಲು ತೆರಳುತ್ತಿದ್ದ ನೀರುಗಂಟಿ ಶ್ರೀನಿವಾಸ್ ಅವರಿಗೆ ಮಗುವಿನ ರೋದನ ಕೇಳಿಸಿದೆ. ತಕ್ಷಣ ಅವರು ಹತ್ತಿರ ಹೋಗಿ ನೋಡಿದಾಗ ರಕ್ತಸಿಕ್ತ ಸ್ಥಿತಿಯಲ್ಲಿ ಟವಲ್‌ನಲ್ಲಿ ಸುತ್ತಿಟ್ಟಿದ್ದ ನವಜಾತ ಹೆಣ್ಣು ಶಿಶು ಪತ್ತೆಯಾಗಿದ್ದು, ತಕ್ಷಣವೇ ಈ ವಿಷಯವನ್ನು ಸ್ಥಳೀಯ ಗ್ರಾಮಸ್ಥರಿಗೆ ತಲುಪಿಸಿದ್ದಾರೆ.
ವಿಷಯ ತಿಳಿಯುತ್ತಿದ್ದಂತೆ ಎಚ್ಚೆತ್ತ ಗ್ರಾಮಸ್ಥರು ಸ್ಥಳೀಯ ಅಂಗನವಾಡಿ ಕಾರ್ಯಕರ್ತೆ ಪ್ರಮೀಳಾ ಅವರಿಗೆ ಮಾಹಿತಿ ನೀಡಿದ್ದು, ಅವರು ತಕ್ಷಣವೇ ಸಿಡಿಪಿಓ ವೀರೇಶ್ ಅವರ ಗಮನಕ್ಕೆ ತಂದಿದ್ದಾರೆ. ತಕ್ಷಣವೇ ಕಾರ್ಯಪ್ರವೃತ್ತರಾದ ಪೊಲೀಸ್ ಇಲಾಖೆ, ಆರೋಗ್ಯ ಇಲಾಖೆ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಿಬ್ಬಂದಿ ಜಂಟಿಯಾಗಿ ಸ್ಥಳಕ್ಕೆ ಧಾವಿಸಿ ಮಗುವನ್ನು ರಕ್ಷಿಸಿದ್ದಾರೆ. ಎನ್.ಆರ್.ಪುರದ ಸರ್ಕಾರಿ ಆಸ್ಪತ್ರೆಯಲ್ಲಿ ಮಗುವಿಗೆ ಪ್ರಥಮ ಚಿಕಿತ್ಸೆ ನೀಡಿದ ಬಳಿಕ ಹೆಚ್ಚಿನ ಆರೈಕೆಗಾಗಿ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ರವಾನಿಸಲಾಗಿದೆ.
ಪ್ರಸ್ತುತ ಚಿಕ್ಕಮಗಳೂರಿನ ಸರ್ಕಾರಿ ವಿಶೇಷ ದತ್ತು ಸಂಸ್ಥೆಯ ಉಸ್ತುವಾರಿಯಲ್ಲಿ ಮಗುವಿಗೆ ಉತ್ತಮ ಚಿಕಿತ್ಸೆ ಕೊಡಿಸಲಾಗುತ್ತಿದ್ದು, ಕಂದಮ್ಮ ಸದ್ಯ ಸುರಕ್ಷಿತವಾಗಿದೆ. ಮಗು ಸಂಪೂರ್ಣವಾಗಿ ಚೇತರಿಸಿಕೊಂಡ ನಂತರ ಚಿಕ್ಕಮಗಳೂರಿನ ಸರ್ಕಾರಿ ವಿಶೇಷ ದತ್ತು ಸಂಸ್ಥೆಗೆ ಹಸ್ತಾಂತರಿಸಿ, ಅಲ್ಲಿಯೇ ಮುಂದಿನ ಲಾಲನೆ-ಪೋಷಣೆ ಮಾಡಲಾಗುವುದು ಎಂದು ಸಿಡಿಪಿಓ ವೀರೇಶ್ ತಿಳಿಸಿದ್ದಾರೆ. ಮತ್ತೊಂದೆಡೆ ಹೆಣ್ಣು ಮಗುವನ್ನು ನಿರ್ದಕ್ಷಿಣ್ಯವಾಗಿ ಪೊದೆಯಲ್ಲಿ ಬಿಟ್ಟು ಹೋದ ಪಾಲಕರನ್ನು ಪತ್ತೆ ಹಚ್ಚಲು ಕಾನೂನು ಕ್ರಮ ಕೈಗೊಳ್ಳಲಾಗಿದ್ದು, ಈ ಸಂಬಂಧ ದೂರು ದಾಖಲಾಗಿದೆ.

Join WhatsApp

Join Now

Join Telegram

Join Now