ಚಿಕ್ಕಮಗಳೂರು ಜಿಲ್ಲೆಯ ಕಳಸ ತಾಲ್ಲೂಕಿನ ಮೈದಾಡಿ ಗ್ರಾಮದ ಯಮಗೊಂಡ ಎಸ್ಟೇಟ್ನಲ್ಲಿ ಕಾಡುಕೋಣ ದಾಳಿ ನಡೆಸಿದ ಪರಿಣಾಮ 30 ವರ್ಷದ ಎಸ್ಟೇಟ್ ಕಾರ್ಮಿಕ ಚೇತನ್ ಎಂಬ ಯುವಕ ಮೃತಪಟ್ಟಿದ್ದಾರೆ. ಕೆಲಸದಲ್ಲಿದ್ದ ಸಂದರ್ಭದಲ್ಲಿ ಏಕಾಏಕಿ ದಾಳಿ ಮಾಡಿದ ಕಾಡುಕೋಣದಿಂದಾಗಿ ತೀವ್ರವಾಗಿ ಗಾಯಗೊಂಡಿದ್ದ ಅವರನ್ನು ತಕ್ಷಣವೇ ಕಳಸ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ಈ ಘಟನೆಯಿಂದ ಆಸ್ಪತ್ರೆಯ ಆವರಣದಲ್ಲಿ ಮೃತರ ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿದ್ದು, ಮಗನನ್ನು ಕಳೆದುಕೊಂಡ ತಾಯಿಯ ಗೋಳಾಟ ಮನಕಲಕುವಂತಿತ್ತು. ಮಲೆನಾಡು ಭಾಗದಲ್ಲಿ ಇತ್ತೀಚಿನ ದಿನಗಳಲ್ಲಿ ಕಾಡುಪ್ರಾಣಿ ಹಾಗೂ ಮಾನವ ಸಂಘರ್ಷ ಮಿತಿಮೀರಿದ್ದು, ಈ ಹಿಂದೆಯೂ ಕಾಡುಕೋಣಗಳ ದಾಳಿಯಿಂದ ಹಲವರು ಪ್ರಾಣ ಕಳೆದುಕೊಂಡಿದ್ದಾರೆ ಮತ್ತು ಅನೇಕರು ಗಂಭೀರವಾಗಿ ಗಾಯಗೊಂಡಿದ್ದಾರೆ. ಪದೇ ಪದೇ ಇಂತಹ ಘಟನೆಗಳು ಮರುಕಳಿಸುತ್ತಿರುವುದರಿಂದ ಆತಂಕಗೊಂಡಿರುವ ಸ್ಥಳೀಯ ನಿವಾಸಿಗಳು, ಜನವಸತಿ ಪ್ರದೇಶಗಳಿಗೆ ಕಾಡುಪ್ರಾಣಿಗಳು ಬರದಂತೆ ಅರಣ್ಯ ಇಲಾಖೆ ಶಾಶ್ವತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ. ಪ್ರಸ್ತುತ ಈ ದುರ್ಘಟನೆಗೆ ಸಂಬಂಧಿಸಿದಂತೆ ಕಳಸ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.















Leave a Reply