ಸಿನಿಮೀಯ ಶೈಲಿಯಲ್ಲಿ ದನಗಳ್ಳರ ಕಾರು ಚೇಸ್ ಮಾಡಿ ಹಸು ರಕ್ಷಿಸಿದ ಕಳಸ ಪೊಲೀಸರು!

Spread the love

 

​ಕಳಸ: ಜಿಲ್ಲೆಯ ಕಳಸ ತಾಲೂಕಿನಲ್ಲಿ ಚಿತ್ರಾನ್ನ ಸಿನೆಮಾವನ್ನು ನೆನಪಿಸುವಂತಹ ರೋಚಕ ಘಟನೆಯೊಂದು ನಡೆದಿದೆ. ಅಕ್ರಮವಾಗಿ ಹಸುಗಳನ್ನು ಸಾಗಿಸುತ್ತಿದ್ದ ದನಗಳ್ಳರ ಕಾರನ್ನು ಕಳಸ ಪೊಲೀಸರು ಸಿನಿಮೀಯ ಶೈಲಿಯಲ್ಲಿ ಬೆನ್ನಟ್ಟಿ, ಹಸುಗಳನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ.

​ಕಳಸದಿಂದ ಹೊರನಾಡು ಮಾರ್ಗವಾಗಿ ಇನೋವಾ ಕಾರಿನಲ್ಲಿ ಹಸುಗಳನ್ನು ಅಕ್ರಮವಾಗಿ ಸಾಗಿಸಲಾಗುತ್ತಿದೆ ಎಂಬ ಖಚಿತ ಮಾಹಿತಿ ಪೊಲೀಸರಿಗೆ ಲಭ್ಯವಾಗಿತ್ತು. ತಕ್ಷಣ ಕಾರ್ಯಪ್ರವೃತ್ತರಾದ ಕಳಸ ಪೊಲೀಸರು ಕಾರನ್ನು ಬೆನ್ನಟ್ಟಿದ್ದಾರೆ. ಪೊಲೀಸರು ತಮ್ನನ್ನು ಹಿಡಿಯಲು ಬರುತ್ತಿರುವುದನ್ನು ಗಮನಿಸಿದ ದನಗಳ್ಳರು, ಹೆದರಿ ತಮ್ಮ ಇನೋವಾ ಕಾರನ್ನು ರಸ್ತೆಯ ಪಕ್ಕದಲ್ಲಿದ್ದ ತೋಟವೊಂದಕ್ಕೆ ನುಗ್ಗಿಸಿದ್ದಾರೆ.

​ತೋಟದಲ್ಲೇ ಕಾರು ಬಿಟ್ಟು ಕಳ್ಳರು ಪರಾರಿ!

ಪೊಲೀಸರ ಕೈಗೆ ಸಿಕ್ಕಿಬೀಳುವ ಭೀತಿಯಿಂದ ದನಗಳ್ಳರು ಕಾರನ್ನು ತೋಟದ ಮಧ್ಯದಲ್ಲೇ ಬಿಟ್ಟು, ಕತ್ತಲಲ್ಲಿ ಕಾಲ್ಕಿತ್ತಿದ್ದಾರೆ. ಸದ್ಯ ಆರೋಪಿಗಳಿಗಾಗಿ ಪೊಲೀಸರು ಜಾಲ ಬೀಸಿದ್ದಾರೆ.

​ಪೊಲೀಸರ ವಶಕ್ಕೆ ಹಸು, ಇನೋವಾ ಕಾರು

​ಕಾರನ್ನು ಪರಿಶೀಲಿಸಿದ ಪೊಲೀಸರು ಅದರಲ್ಲಿದ್ದ ಹಸುವನ್ನು ಸುರಕ್ಷಿತವಾಗಿ ರಕ್ಷಿಸಿದ್ದು, ಕೃತ್ಯಕ್ಕೆ ಬಳಸಿದ ಇನೋವಾ ಕಾರನ್ನು ವಶಪಡಿಸಿಕೊಂಡಿದ್ದಾರೆ. ಸದ್ಯ ರಕ್ಷಿಸಲಾದ ಹಸುವನ್ನು ಕಳಸ ಪೊಲೀಸ್ ಠಾಣೆಯ ಆವರಣದಲ್ಲೇ ಕಟ್ಟಿ ಹಾಕಿ, ಆರೈಕೆ ಮಾಡಲಾಗುತ್ತಿದೆ.

​ಈ ಸಂಬಂಧ ಕಳಸ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತಲೆಮರೆಸಿಕೊಂಡಿರುವ ದನಗಳ್ಳರ ಪತ್ತೆಗೆ ಪೊಲೀಸರು ತನಿಖೆ ತೀವ್ರಗೊಳಿಸಿದ್ದಾರೆ. ಪೊಲೀಸರ ಈ ಸಮಯಪ್ರಜ್ಞೆ ಮತ್ತು ಸಾಹಸಿಕ ಕಾರ್ಯಾಚರಣೆಗೆ ಸಾರ್ವಜನಿಕ ವಲಯದಲ್ಲಿ ಭಾರಿ ಶ್ಲಾಘನೆ ವ್ಯಕ್ತವಾಗುತ್ತಿದೆ.

Leave a Reply

Your email address will not be published. Required fields are marked *