ಚಿಕ್ಕಮಗಳೂರು ಸಮಾಜ ಸೇವಕ ರೂಬೆನ್ ಮೊಸಸ್ ಅವರ ನಿಸ್ವಾರ್ಥ ಸೇವಾ ಪಯಣಕ್ಕೆ ಮತ್ತೊಂದು ಗರಿ ಸಿಕ್ಕಿದೆ. ನವದೆಹಲಿಯ ವರ್ಲ್ಡ್ ಚಾರಿಟಿ ವೆಲ್ಫೇರ್ ಫೌಂಡೇಶನ್ ವತಿಯಿಂದ ಇವರಿಗೆ ಪ್ರತಿಷ್ಠಿತ ‘ನ್ಯಾಷನಲ್ ಬೆಸ್ಟ್ ಸೋಷಿಯಲ್ ವರ್ಕರ್’ ಪ್ರಶಸ್ತಿ ಒಲಿದುಬಂದಿದ್ದು, ಬೆಂಗಳೂರಿನ ಗಾಂಧಿ ಭವನದಲ್ಲಿ ನಡೆದ ಅದ್ಧೂರಿ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಯಿತು.
ಸರ್ವ ಧರ್ಮ ಯುವಕ ಸಂಘದ ಮೂಲಕ ಸೇವಾ ಕ್ಷೇತ್ರಕ್ಕೆ ಕಾಲಿಟ್ಟ ರೂಬೆನ್ ಮೊಸಸ್, ಲಯನ್ಸ್, ರೋಟರಿ, ಅಡ್ವೆಂಚರ್ ಹಾಗೂ ನೇಚರ್ ಕ್ಲಬ್ಗಳಲ್ಲದೆ ಹಿಂದೂ-ಕ್ರಿಶ್ಚಿಯನ್ ಸ್ಮಶಾನ ಅಭಿವೃದ್ಧಿ ಸಮಿತಿ ಮತ್ತು ನಾಗರಿಕ ಹೋರಾಟ ವೇದಿಕೆಗಳಲ್ಲಿ ಸಕ್ರಿಯವಾಗಿ ಗುರುತಿಸಿಕೊಂಡಿದ್ದಾರೆ. ಪ್ರಸ್ತುತ ಬೇತೇಲ್ ಟ್ರಸ್ಟ್ ಹಾಗೂ ಸಹನಾ ಜೆ ರೂಬೆನ್ ಸಮಾಜ ಸೇವಾ ಟ್ರಸ್ಟ್ ಮೂಲಕ ನೊಂದವರ ಕಣ್ಣೀರು ಒರೆಸುವ ಕಾಯಕವನ್ನು ನಿರಂತರವಾಗಿ ಮುನ್ನಡೆಸಿಕೊಂಡು ಹೋಗುತ್ತಿದ್ದಾರೆ.
ನೈಸರ್ಗಿಕ ವಿಕೋಪಗಳು ಸಂಭವಿಸಿದಾಗಲೆಲ್ಲಾ ಆಪತ್ಬಾಂಧವರಂತೆ ಧಾವಿಸುವ ಇವರು, ಗುಜರಾತ್ ಭೂಕಂಪದ ಸಂದರ್ಭದಿಂದ ಹಿಡಿದು ಕೇರಳ, ರಾಯಚೂರಿನ ಮಾನ್ವಿ, ಮಡಿಕೇರಿ, ಮೂಡಿಗೆರೆ ಹಾಗೂ ಚಿಕ್ಕಮಗಳೂರಿನ ಪ್ರವಾಹ ಸಂತ್ರಸ್ತರ ನೆರವಿಗೆ ನಿಂತಿದ್ದಾರೆ. ಕೋವಿಡ್ ಭೀಕರತೆಯ ಸಮಯದಲ್ಲಿ ಸತತ ಎರಡು ವರ್ಷಗಳ ಕಾಲ ರಸ್ತೆ ಬದಿಯ ನಿರಾಶ್ರಿತರು, ಅನಾಥರು ಹಾಗೂ ಮಹಿಳೆ-ಮಕ್ಕಳಿಗೆ ಆಶ್ರಯ ಕೇಂದ್ರ ತೆರೆದು ಆಹಾರ, ನೆರವು ನೀಡುವ ಮೂಲಕ ಮನುಷ್ಯತ್ವ ಮೆರೆದಿದ್ದರು. ಸ್ವತಃ 48 ಬಾರಿ ರಕ್ತದಾನ ಮಾಡಿ ಮಾದರಿಯಾಗಿರುವ ರೂಬೆನ್ ಮೊಸಸ್, ಕೇವಲ ತಾವು ಮಾತ್ರವಲ್ಲದೆ ಇಡೀ ಕುಟುಂಬವನ್ನು ಸಾಮಾಜಿಕ ಕಾಯಕದಲ್ಲಿ ತೊಡಗಿಸಿಕೊಂಡಿದ್ದಾರೆ. ಮೂರು ವರ್ಷಗಳ ಹಿಂದೆ ಇವರ ಧರ್ಮಪತ್ನಿ ಸಹನಾ ಅವರು ಬ್ರೈನ್ ಟ್ಯೂಮರ್ನಿಂದ ನಿಧನರಾದಾಗ, ಅವರ ದೇಹದ ಪ್ರತಿಯೊಂದು ಅಂಗಾಂಗಗಳನ್ನು ದಾನ ಮಾಡುವ ಮೂಲಕ ಏಳೆಂಟು ಜನರ ಬಾಳಿಗೆ ಮರುಜೀವ ನೀಡಿದ ಅಪರೂಪದ ಮಾನವೀಯ ಉದಾಹರಣೆ ಇವರದ್ದಾಗಿದೆ. ಇವರ ಸುದೀರ್ಘ ಸೇವೆಯನ್ನು ಪರಿಗಣಿಸಿ ಈಗಾಗಲೇ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಯುವ ಪ್ರಶಸ್ತಿ, ಲಯನ್ಸ್ ಗವರ್ನರ್ ಡೈಮೆಂಡ್ ಸುಪ್ರೀಮ್ ಎಕ್ಸೆಲೆನ್ಸ್ ಅವಾರ್ಡ್, ರಾಜ್ಯ ಕ್ರೈಸ್ತ ರತ್ನ, ಬಸವ ಜ್ಯೋತಿ, ಮ್ಯಾಕ್ಸ್ ಲೈಫ್ ಸೇವಾ ರತ್ನ ಹಾಗೂ ಪ್ರಜಾವಾಣಿ ಕೊರೋನ ಸೇನಾ ಪ್ರಶಸ್ತಿಗಳು ಲಭಿಸಿವೆ. ಇದೀಗ ರಾಷ್ಟ್ರ ಮಟ್ಟದ ‘ಬೆಸ್ಟ್ ಸೋಷಿಯಲ್ ವರ್ಕರ್’ ಗೌರವ ದಕ್ಕಿರುವುದು ಕಾಫಿನಾಡಿನ ಹಿರಿಮೆಯನ್ನು ಮತ್ತಷ್ಟು ಹೆಚ್ಚಿಸಿದೆ.


