ನಿಂತಿದ್ದ ಕಾರಿಗೆ ಡಿಕ್ಕಿ ಬಳಿಕ ಕಾರಿನವರ ಮೇಲೆ ಹಲ್ಲೆ ಆರೋಪ
ಚಿಕ್ಕಮಗಳೂರು: ರೈಲ್ವೇ ಗೇಟ್ ಹಾಕಿದ್ದರಿಂದ ನಿಂತಿದ್ದ ಕಾರಿಗೆ ಹಿಂದಿನಿಂದ ಮತ್ತೊಂದು ಕಾರು ಡಿಕ್ಕಿ ಹೊಡೆದ ಬಳಿಕ, ಕಾರಿನಲ್ಲಿದ್ದವರ ಮೇಲೆ ಸ್ಥಳೀಯರು ಮಾರಣಾಂತಿಕ ಹಲ್ಲೆ ನಡೆಸಿದ ಆರೋಪ ಕೇಳಿಬಂದಿದೆ.
ಚಿಕ್ಕಮಗಳೂರು ಜಿಲ್ಲೆ ಅಜ್ಜಂಪುರ ಪಟ್ಟಣದ ಹೊರವಲಯದ ರೈಲ್ವೇ ಗೇಟ್ ಬಳಿ ಘಟನೆ ನಡೆದಿದೆ. ಶಿವಮೊಗ್ಗ ಮೂಲದ ಕಾರಿನಲ್ಲಿದ್ದ ನಿತಿನ್ ಹಾಗೂ ನವನೀತ್ ಎಂಬುವರ ಮೇಲೆ ಸ್ಥಳೀಯರು ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ.
ಡಿಕ್ಕಿ ವಿಚಾರವಾಗಿ ಪ್ರಶ್ನಿಸಿದಾಗ ಮಾತಿಗೆ ಮಾತು ಬೆಳೆದು ಸ್ಥಳೀಯರು ಮಹಿಳೆಯರು ಹಾಗೂ ಪುರುಷರ ಮೇಲೂ ಕಲ್ಲುಗಳಿಂದ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ಕಾರಿನ ಗ್ಲಾಸ್‌ಗಳನ್ನು ಒಡೆದು, ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ ಎಂಬ ಆರೋಪವೂ ಕೇಳಿಬಂದಿದೆ.
ಘಟನೆಗೆ ಸಂಬಂಧಿಸಿದಂತೆ ಸ್ಥಳೀಯರಾದ ಭೋಜರಾಜ್, ನಿತಿನ್, ಮಿಥುನ್, ಪ್ರಶಾಂತ್ ಹಾಗೂ ಕರ್ಣ ವಿರುದ್ಧ ಅಜ್ಜಂಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆಗೊಳಗಾದ ನಿತಿನ್ ಹಾಗೂ ನವನೀತ್ ಅವರಿಗೆ ಗಾಯಗಳಾಗಿದ್ದು, ಘಟನೆ ಕುರಿತು ಅಜ್ಜಂಪುರ ಪೊಲೀಸರು ತನಿಖೆ ನಡೆಸುತ್ತಿದ್ದಾರೆ .



