ಚಿಕ್ಕಮಗಳೂರು: ಕಾಫಿನಾಡು ಚಿಕ್ಕಮಗಳೂರಿನಲ್ಲಿ ಪಾಕಿಸ್ತಾನದ ರಿಯಾಜ್ ಅಹ್ಮದ್ ಗೋಹರ್ ಶಾಹಿ ವಿಚಾರವಾಗಿ ಹೊಸ ವಿವಾದ ಭುಗಿಲೆದ್ದಿದೆ. ನಗರದ ಹೊರವಲಯದ ಇಂದಾವರ ಗ್ರಾಮದ ಖಬರಸ್ಥಾನದಲ್ಲಿರುವ ರಿಜ್ವಾನ್ ಎಂಬುವವರ ಸಮಾಧಿ ಬಳಿ ಹಸಿರು ಬಟ್ಟೆ ಹಾಕಿ, ಕಲ್ಮಾ ವಿರೋಧಿ ಬರಹ ಬರೆಯಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಈ ಘಟನೆ ಮುಸ್ಲಿಂ ಸಮುದಾಯದ ಮುಖಂಡರ ಆಕ್ರೋಶಕ್ಕೆ ಕಾರಣವಾಗಿದೆ.
ಕಳೆದ ವರ್ಷ ಮೃತಪಟ್ಟಿದ್ದ ರಿಜ್ವಾನ್ ಅವರ ಅಂತ್ಯಕ್ರಿಯೆಯನ್ನು ಇಂದಾವರದ ಖಬರಸ್ಥಾನದಲ್ಲಿ ನೆರವೇರಿಸಲಾಗಿತ್ತು. ಇದೀಗ ವರ್ಷದ ಬಳಿಕ ಅವರ ಸಮಾಧಿಗೆ ಹಸಿರು ಬಟ್ಟೆ ಹಾಕಿ ಗೋರಿ ನಿರ್ಮಾಣ ಮಾಡಲು ಪ್ರಯತ್ನಿಸಲಾಗಿದೆ ಎನ್ನಲಾಗಿದೆ. ಅಲ್ಲದೆ, ಸಮಾಧಿ ಬಳಿ ಕಲ್ಮಾವನ್ನು ತಿದ್ದುಪಡಿ ಮಾಡಿ ವಿರೋಧಿ ಬರಹ ಬರೆಯಲಾಗಿದೆ ಎಂಬ ಆರೋಪವೂ ಕೇಳಿಬಂದಿದೆ.
ರಿಜ್ವಾನ್ ಅವರು ಪಾಕಿಸ್ತಾನದ ರಿಯಾಜ್ ಅಹ್ಮದ್ ಗೋಹರ್ ಶಾಹಿ ಅವರ ಅನುಯಾಯಿಯಾಗಿದ್ದರು ಎನ್ನಲಾಗಿದ್ದು, ಗೋಹರ್ ಶಾಹಿ ಹಾಗೂ ಅವರ ಬೆಂಬಲಿಗರನ್ನು ಮುಸ್ಲಿಂ ಸಮುದಾಯದ ಕೆಲವು ಮುಖಂಡರು ಇಸ್ಲಾಂ ವಿರೋಧಿಗಳೆಂದು ಪರಿಗಣಿಸುತ್ತಾರೆ. ಈ ಹಿನ್ನೆಲೆಯಲ್ಲಿ ಸಮಾಧಿ ಬಳಿ ನಡೆದಿರುವ ಕೃತ್ಯಕ್ಕೆ ತೀವ್ರ ಆಕ್ಷೇಪ ವ್ಯಕ್ತವಾಗಿದೆ.
ಸಮಾಧಿಯನ್ನು ಪರಿಶೀಲಿಸಿದ ಮುಸ್ಲಿಂ ಸಮುದಾಯದ ಮುಖಂಡರು, ಈ ಹಿಂದೆಯೇ ರಿಜ್ವಾನ್ ಅವರ ಅಂತ್ಯಕ್ರಿಯೆಗೆ ಖಬರಸ್ಥಾನದಲ್ಲಿ ವಿರೋಧ ವ್ಯಕ್ತವಾಗಿತ್ತು ಎಂದು ತಿಳಿಸಿದ್ದಾರೆ. ಇದೀಗ ಮತ್ತೆ ಸಮಾಧಿ ಬಳಿ ವಿವಾದಾತ್ಮಕ ಬರಹ ಬರೆಯಲಾಗಿದೆ ಎಂದು ಆರೋಪಿಸಿ ಆಕ್ರೋಶ ಹೊರಹಾಕಿದ್ದಾರೆ.
ಈ ಸಂಬಂಧ ಚಿಕ್ಕಮಗಳೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿತೇಂದ್ರ ಕುಮಾರ್ ದಯ್ಮಾ ಅವರಿಗೆ ದೂರು ಸಲ್ಲಿಸಿರುವ ಮುಖಂಡರು, ಸಮಾಧಿ ಬಳಿ ಇರುವ ಹಸಿರು ಬಟ್ಟೆ ಹಾಗೂ ವಿವಾದಾತ್ಮಕ ಬರಹವನ್ನು ತೆರವುಗೊಳಿಸುವಂತೆ ಒತ್ತಾಯಿಸಿದ್ದಾರೆ.
ಇದೇ ವೇಳೆ ರಿಜ್ವಾನ್ ಅವರ ಸಹೋದರ ಹಾಗೂ ಡಿ.ಎ.ಆರ್. ಪೊಲೀಸ್ ಸಿಬ್ಬಂದಿ ಬರ್ಕತ್ ಮತ್ತು ಮುಸ್ಲಿಂ ಸಮುದಾಯದ ಮುಖಂಡರ ನಡುವೆ ಮಾತಿನ ಚಕಮಕಿ ನಡೆದಿರುವುದಾಗಿ ತಿಳಿದುಬಂದಿದೆ.
ಒಟ್ಟಿನಲ್ಲಿ ನಗರದ ಹೊರವಲಯದ ಇಂದಾವರದಲ್ಲಿ ನಡೆದಿರುವ ಈ ಘಟನೆ ಕಾಫಿನಾಡಿನಲ್ಲಿ ಧಾರ್ಮಿಕ ವಿವಾದಕ್ಕೆ ಕಾರಣವಾಗಿದ್ದು, ಪೊಲೀಸ್ ಇಲಾಖೆ ಯಾವ ಕ್ರಮ ಕೈಗೊಳ್ಳಲಿದೆ ಎಂಬುದನ್ನು ಕಾದುನೋಡಬೇಕಿದೆ.


