ಕಡೂರು ತಾಲೂಕಿನ ಎಮ್ಮೆದೊಡ್ಡಿ ಸಮೀಪದ ಸಗಣಿ ಬಸವನಹಳ್ಳಿಯಲ್ಲಿ ಜಮೀನಿಗೆ ಅಳವಡಿಸಿದ್ದ ಅಕ್ರಮ ವಿದ್ಯುತ್ ಬೇಲಿಗೆ ಸುಮಾರು 15 ವರ್ಷದ ಗಂಡು ಕಾಡಾನೆಯೊಂದು ಬಲಿಯಾಗಿದೆ. ಜಿಲ್ಲೆಯಲ್ಲಿ ಒಂದೆಡೆ ಕಾಡಾನೆಗಳ ಉಪಟಳ ಮತ್ತು ಸ್ಥಳಾಂತರದ ಚರ್ಚೆ ಜೋರಾಗಿರುವ ಬೆನ್ನಲ್ಲೇ ಈ ದುರಂತ ಸಂಭವಿಸಿದೆ.
ಆಹಾರ ಅರಸುತ್ತಾ ಗ್ರಾಮದ ಜೋಳದ ಹೊಲಕ್ಕೆ ನುಗ್ಗಿದ್ದ ಸಲಗಕ್ಕೆ, ವನ್ಯಜೀವಿಗಳ ಹಾವಳಿ ತಡೆಯಲು ಜಮೀನು ಮಾಲೀಕರು ಅಕ್ರಮವಾಗಿ ಹರಿಸಿದ್ದ ವಿದ್ಯುತ್ ತಂತಿ ತಗುಲಿದೆ. ವಿದ್ಯುತ್ ಶಾಕ್ ತೀವ್ರತೆಗೆ ಆನೆ ಸ್ಥಳದಲ್ಲೇ ಮೃತಪಟ್ಟಿದೆ.
ಸುದ್ದಿ ತಿಳಿಯುತ್ತಿದ್ದಂತೆಯೇ ಕಡೂರು ವಲಯ ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಘಟನೆಯ ಬಳಿಕ ವಿದ್ಯುತ್ ಸಂಪರ್ಕ ಕಲ್ಪಿಸಿದ್ದ ಜಮೀನು ಮಾಲೀಕ ತಲೆಮರೆಸಿಕೊಂಡಿದ್ದು, ಅರಣ್ಯ ಇಲಾಖೆಯು ಪ್ರಕರಣ ದಾಖಲಿಸಿಕೊಂಡು ಆರೋಪಿಯ ಬಂಧನಕ್ಕೆ ಶೋಧ ಕಾರ್ಯಾಚರಣೆ ಮುಂದುವರಿಸಿದೆ.



