🏠 Home ದೇಶ ಜಿಲ್ಲಾ ಸುದ್ದಿ ತಾಲ್ಲೂಕು ರಾಜ್ಯ ರಾಜಕೀಯ  ಆರೋಗ್ಯ  ಕ್ರೈಮ್  ಪ್ರವಾಸ ಶಿಕ್ಷಣ

 

Breaking News
---Advertisement---
 

ಚಿಕ್ಕಮಗಳೂರು: ನಿವೇಶನ ರಹಿತರಿಗೆ ಒಂದು ನ್ಯಾಯ, ಪ್ರಭಾವಿಗಳಿಗೆ ಮತ್ತೊಂದು ನ್ಯಾಯವೇ? ಅರಣ್ಯ ಇಲಾಖೆ ವಿರುದ್ಧ ಆಕ್ರೋಶ!

---Advertisement---

 

ಚಿಕ್ಕಮಗಳೂರು: ನಿವೇಶನ ರಹಿತರಿಗೆ ನಿವೇಶನ ನೀಡಲು ಅಡ್ಡಿಪಡಿಸುತ್ತಿರುವ ಅರಣ್ಯ ಇಲಾಖೆ, ಅದೇ ಪ್ರದೇಶದಲ್ಲಿ ಪ್ರಭಾವಿಗಳು ಕಾಫಿ ತೋಟ ನಿರ್ಮಿಸುತ್ತಿದ್ದರೂ ಕ್ರಮ ಕೈಗೊಳ್ಳುತ್ತಿಲ್ಲ ಎಂಬ ಆರೋಪ ಕೇಳಿಬಂದಿದೆ. ಈ ಸಂಬಂಧ ಚಿಕ್ಕಮಗಳೂರು ತಾಲೂಕಿನ ಮಾಚಗೊಂಡನಹಳ್ಳಿ ಗ್ರಾಮದಲ್ಲಿ ಆಕ್ರೋಶ ವ್ಯಕ್ತವಾಗಿದೆ.

ಮೂಡಿಗೆರೆ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಮಾಚಗೊಂಡನಹಳ್ಳಿಯ ತೋಳೂರು ಗುಡ್ಡದಲ್ಲಿ ಈ ಘಟನೆ ನಡೆದಿದೆ. ಗ್ರಾಮದ ಸರ್ವೆ ನಂಬರ್ 167ರಲ್ಲಿ ನಿವೇಶನ ರಹಿತರಿಗೆ ನಿವೇಶನ ನೀಡುವುದಾಗಿ ಈ ಹಿಂದೆ ಗ್ರಾಮ ಪಂಚಾಯಿತಿ ಭರವಸೆ ನೀಡಿತ್ತು. ಆದರೆ, ಈ ಪ್ರದೇಶ ಡಿಮ್ಡ್ ಫಾರೆಸ್ಟ್ ವ್ಯಾಪ್ತಿಗೆ ಬರುತ್ತದೆ ಎಂಬ ಕಾರಣಕ್ಕೆ ಅರಣ್ಯ ಇಲಾಖೆ ನಿವೇಶನ ಹಂಚಿಕೆಗೆ ತಡೆ ವಿಧಿಸಿತ್ತು ಎನ್ನಲಾಗಿದೆ.

ಇದೀಗ ಇದೇ ಪ್ರದೇಶದಲ್ಲಿ ಕೆಲ ಪ್ರಭಾವಿಗಳು ಮರಗಳನ್ನು ಕಡಿದು ಕಾಫಿ ಗಿಡಗಳನ್ನು ನೆಟ್ಟು ಕಾಫಿ ತೋಟ ನಿರ್ಮಿಸುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ನಿವೇಶನ ರಹಿತರು ಗುಡಿಸಲು ಹಾಕಲು ಮುಂದಾದರೆ ಅರಣ್ಯ ಕಾಯ್ದೆಯ ನೆಪದಲ್ಲಿ ತಡೆಯಲಾಗುತ್ತದೆ. ಆದರೆ, ಅದೇ ಪ್ರದೇಶದಲ್ಲಿ ಕಾಫಿ ತೋಟ ನಿರ್ಮಾಣವಾಗುತ್ತಿದ್ದರೂ ಅಧಿಕಾರಿಗಳು ಮೌನವಾಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಲಾಗಿದೆ.

ಪ್ರಭಾವಿಗಳ ವಿರುದ್ಧ ಎಫ್‌ಐಆರ್ ದಾಖಲಿಸಲು ಪಟ್ಟು

ಡಿಮ್ಡ್ ಫಾರೆಸ್ಟ್ ಪ್ರದೇಶದಲ್ಲಿ ಮರಗಳನ್ನು ಕಡಿದು ಕಾಫಿ ಗಿಡಗಳನ್ನು ನೆಟ್ಟಿರುವವರ ವಿರುದ್ಧ ಅರಣ್ಯ ಇಲಾಖೆ ತಕ್ಷಣ ಕ್ರಮ ಕೈಗೊಳ್ಳಬೇಕು. ಅಕ್ರಮ ಒತ್ತುವರಿ ಹಾಗೂ ಮರಗಳ ಕಡಿತಲೆ ಕುರಿತು ಪ್ರಕರಣ ದಾಖಲಿಸಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

ನಿವೇಶನ ರಹಿತರಿಗೆ ನ್ಯಾಯ ಒದಗಿಸುವುದರ ಜೊತೆಗೆ, ಅರಣ್ಯ ಭೂಮಿ ಒತ್ತುವರಿ ಆರೋಪದ ಬಗ್ಗೆ ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕೆಂಬ ಒತ್ತಾಯ ಕೇಳಿಬಂದಿದೆ.

ಒಂದೇ ಪ್ರದೇಶದಲ್ಲಿ ಬಡವರಿಗೆ ಒಂದು ಕಾನೂನು, ಪ್ರಭಾವಿಗಳಿಗೆ ಮತ್ತೊಂದು ಕಾನೂನುವೇ? ಎಂಬ ಪ್ರಶ್ನೆಯನ್ನು ಮುಂದಿಟ್ಟಿರುವ ಗ್ರಾಮಸ್ಥರು, ಅರಣ್ಯ ಇಲಾಖೆ ಮತ್ತು ಸಂಬಂಧಪಟ್ಟ ಅಧಿಕಾರಿಗಳು ಈ ಬಗ್ಗೆ ಸ್ಪಷ್ಟನೆ ನೀಡಬೇಕು ಎಂದು ಆಗ್ರಹಿಸಿದ್ದಾರೆ.