ರೈತರ ನಡಿಗೆ ಅರಣ್ಯ ಇಲಾಖೆ ಕಡೆಗೆ: ಮಾರ್ಚ್ 18ಕ್ಕೆ ಚಿಕ್ಕಮಗಳೂರಿನಲ್ಲಿ ಬೃಹತ್ ಪ್ರತಿಭಟನೆ ​ಕೈಕೊಟ್ಟ ಪೋಡಿ ಮುಕ್ತ ಜಿಲ್ಲೆ ಭರವಸೆ: ಅರಣ್ಯ-ಕಂದಾಯ ಇಲಾಖೆ ಸಂಘರ್ಷದ ವಿರುದ್ಧ ರೈತರ ಕಿಡಿ

Spread the love
Spread the love

ಚಿಕ್ಕಮಗಳೂರು ಜಿಲ್ಲೆಯಲ್ಲಿ ರೈತರು ಎದುರಿಸುತ್ತಿರುವ ಕಂದಾಯ ಮತ್ತು ಅರಣ್ಯ ಇಲಾಖೆಗಳ ನಡುವಿನ ಸಂಘರ್ಷವನ್ನು ತಡೆದು, ರೈತರ ಜನಜೀವನ ರಕ್ಷಿಸಲು ಶಾಶ್ವತ ಪರಿಹಾರ ಒದಗಿಸಬೇಕೆಂದು ಆಗ್ರಹಿಸಿ ಜಿಲ್ಲಾ ನಾಗರೀಕ ಮತ್ತು ರೈತ ಹೋರಾಟ ಸಮಿತಿಯು ಮಾರ್ಚ್ 18ರ ಬುಧವಾರದಂದು ‘ರೈತರ ನಡಿಗೆ ಅರಣ್ಯ ಇಲಾಖೆ ಕಡೆಗೆ’ ಎಂಬ ಬೃಹತ್ ಪ್ರತಿಭಟನೆಯನ್ನು ಹಮ್ಮಿಕೊಂಡಿದೆ ಎಂದು ಜಿಲ್ಲಾ ನಾಗರೀಕ ಮತ್ತು ಹೋರಾಟ ಸಮಿತಿ ಅಧ್ಯಕ್ಷ ವಿಜಯಕುಮಾರ್ ತಿಳಿಸಿದ್ರು. ಸುದ್ದಿಗೋಷ್ಠಿ ಮಾತನಾಡಿದ ಅವರು ಅರಣ್ಯ ಮತ್ತು ಕಂದಾಯ ಇಲಾಖೆಗಳ ಸಮಸ್ಯೆಯಿಂದ ಜಿಲ್ಲೆಯ ಜನತೆ ಸಂಕಷ್ಟಕ್ಕೆ ಸಿಲುಕಿದ್ದು, ವನ್ಯಪ್ರಾಣಿಗಳ ಹಾವಳಿಯಿಂದ ಜೀವಹಾನಿ ಸಂಭವಿಸಿದಾಗ ಕೇವಲ ಚೆಕ್ ವಿತರಿಸಿ ಕೈತೊಳೆದುಕೊಳ್ಳುವ ಸರ್ಕಾರದ ಧೋರಣೆಯನ್ನು ಸಮಿತಿಯು ತೀವ್ರವಾಗಿ ಖಂಡಿಸಿದೆ. ಪೋಡಿ ಸಮಸ್ಯೆಗೆ ಸಂಬಂಧಿಸಿದಂತೆ 1 ರಿಂದ 5 ನಮೂನೆಯಡಿ ಈವರೆಗೆ 674 ಸರ್ವೆ ನಂಬರ್ ಕಡತಗಳನ್ನು ಡಿ.ಎಫ್.ಒ ಅವರಿಗೆ ಕಳುಹಿಸಿಕೊಡಲಾಗಿದ್ದರೂ, ಕೇವಲ 49 ಕಡತಗಳಿಗೆ ಮಾತ್ರ ಎನ್.ಒ.ಸಿ ನೀಡಲಾಗಿದ್ದು, 461 ಕಡತಗಳು ಇನ್ನೂ ಬಾಕಿ ಉಳಿದಿವೆ ಎಂದು ಸಮಿತಿ ಅಧ್ಯಕ್ಷ ಎಸ್. ವಿಜಯಕುಮಾರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ​ನಗರಸಭೆ ವ್ಯಾಪ್ತಿಯಿಂದ 5 ಕಿ.ಮೀ. ಗಾಳಿಮಾರ್ಗದಲ್ಲಿ ಅಳತೆ ಮಾಡಿ ಸ್ಕೆಚ್ ತಯಾರಿಸುತ್ತಿರುವುದರಿಂದ ಲಕ್ಷಾಂತರ ಜನರ ಸ್ವತ್ತಿನ ವ್ಯವಹಾರಕ್ಕೆ ಅಡ್ಡಿಯಾಗುತ್ತಿದ್ದು, ಜನರಲ್ಲಿ ಭೂಮಿ ಕಳೆದುಕೊಳ್ಳುವ ಭೀತಿ ಎದುರಾಗಿದೆ. ಈ ಹಿನ್ನೆಲೆಯಲ್ಲಿ ಸಮಿತಿಯು ಸರ್ಕಾರಕ್ಕೆ ಪ್ರಮುಖ ಬೇಡಿಕೆಗಳನ್ನು ಸಲ್ಲಿಸಿದ್ದು, ರೈತರ ಭೂ ಮಂಜೂರಾತಿಗೆ ನಗರಸಭೆ ವ್ಯಾಪ್ತಿಯಿಂದ ಭೂಮಾರ್ಗವಾಗಿ ಅಂತರವನ್ನು ಪರಿಗಣಿಸಬೇಕು ಮತ್ತು ಈಗಾಗಲೇ ಫಾರಂ 50, 53ರಡಿ ಮಂಜೂರಾದ ಭೂಮಿಗಳಿಗೆ ನಗರಸಭೆ ವ್ಯಾಪ್ತಿಯ ನೆಪ ಹೇಳದೆ ಯಥಾಸ್ಥಿತಿಯಲ್ಲಿ ಹಕ್ಕುಪತ್ರ ನೀಡಬೇಕು ಎಂದು ಒತ್ತಾಯಿಸಿದೆ. ಫಾರಂ 57ನ್ನು ನಮೂನೆ 53ಕ್ಕೆ ನಿಯಮ ಮಾರ್ಪಾಡು ಮಾಡಿ ಅರ್ಜಿ ಸಲ್ಲಿಸಿದವರಿಗೆ ಹಕ್ಕುಪತ್ರ ನೀಡಬೇಕು ಹಾಗೂ ಸೆಕ್ಷನ್ 4(1) ಅಧಿಸೂಚನೆಯನ್ನು ಅಂತಿಮಗೊಳಿಸುವ ಅರಣ್ಯ ಇಲಾಖೆಯ ಮಧ್ಯಪ್ರವೇಶವನ್ನು ತಡೆಯಬೇಕು ಎಂಬುದು ರೈತರ ಪ್ರಮುಖ ಆಗ್ರಹವಾಗಿದೆ.

Leave a Reply

Your email address will not be published. Required fields are marked *