ತರೀಕೆರೆ ತಾಲೂಕಿನ ಶಾಂತವೇರಿ ಘಾಟಿ ಪ್ರದೇಶದಲ್ಲಿ ಸಂಭವಿಸಿದ ಭೀಕರ ಅಗ್ನಿ ಅವಘಡದಲ್ಲಿ ಚಲಿಸುತ್ತಿದ್ದ ಕ್ಯಾಂಟರ್ ವಾಹನವೊಂದು ಸಂಪೂರ್ಣವಾಗಿ ಸುಟ್ಟು ಕರಕಲಾಗಿದೆ. ಚಿಕ್ಕಮಗಳೂರು ಕಡೆಗೆ ತೆರಳುತ್ತಿದ್ದ ಈ ವಾಹನದಲ್ಲಿ ಶಾರ್ಟ್ ಸರ್ಕ್ಯೂಟ್ ಉಂಟಾಗಿ ಏಕಾಏಕಿ ಬೆಂಕಿ ಕಾಣಿಸಿಕೊಂಡಿದೆ. ಅದೃಷ್ಟವಶಾತ್, ವಾಹನ ಚಲಾಯಿಸುವಾಗಲೇ ಜ್ವಾಲೆಯನ್ನು ಗಮನಿಸಿದ ಚಾಲಕ, ಸಮಯಪ್ರಜ್ಞೆ ಮೆರೆದು ತಕ್ಷಣವೇ ವಾಹನದಿಂದ ಕೆಳಗೆ ಹಾರಿ ತನ್ನ ಪ್ರಾಣವನ್ನು ಉಳಿಸಿಕೊಂಡಿದ್ದಾನೆ.
ವಿಷಯ ತಿಳಿದ ತಕ್ಷಣ ಘಟನಾ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಕಾರ್ಯಾಚರಣೆಗಿಳಿದಿದ್ದಾರೆ. ಬೆಂಕಿ ನಂದಿಸುವ ಕಾರ್ಯ ಭರದಿಂದ ಸಾಗುತ್ತಿದ್ದಾಗಲೇ, ಉಷ್ಣಾಂಶದ ತೀವ್ರತೆಗೆ ವಾಹನದ ಟೈರ್ ರಭಸದಿಂದ ಸ್ಫೋಟಗೊಂಡಿದೆ. ಇದರ ಪರಿಣಾಮವಾಗಿ ಕಾರ್ಯಾಚರಣೆಯಲ್ಲಿದ್ದ ಅಗ್ನಿಶಾಮಕ ಸಿಬ್ಬಂದಿ ಶಿವಪ್ರಸಾದ್ ಅವರ ಕೈ, ಮುಖ ಹಾಗೂ ಎದೆಯ ಭಾಗಕ್ಕೆ ಗಾಯಗಳಾಗಿವೆ. ತಕ್ಷಣವೇ ಅವರನ್ನು ತರೀಕೆರೆಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಘಟನೆಯು ಲಿಂಗದಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.



