ಮೂಡಿಗೆರೆ: ಬಣಕಲ್ ಕ್ರೈಸ್ತರ ಅಭಿವೃದ್ಧಿ ಸಂಘ (ರಿ.) ಮತ್ತು ವಿಮುಕ್ತಿ ಚಾರಿಟೇಬಲ್ ಟ್ರಸ್ಟ್ (ರಿ.) ಇವರುಗಳ ಸಂಯುಕ್ತಾಶ್ರಯದಲ್ಲಿ ಮಂಗಳೂರಿನ ಪ್ರಸಿದ್ಧ ಫಾದರ್ ಮುಲ್ಲರ್ ಮೆಡಿಕಲ್ ಕಾಲೇಜು ಆಸ್ಪತ್ರೆಯ ವತಿಯಿಂದ ಬಣಕಲ್ನಲ್ಲಿ ಬೃಹತ್ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಆಯೋಜಿಸಲಾಗಿದೆ. ಈ ಶಿಬಿರವು ಮಾರ್ಚ್ 29 ರ ಭಾನುವಾರದಂದು ಬೆಳಿಗ್ಗೆ 10.00 ಗಂಟೆಯಿಂದ ಮಧ್ಯಾಹ್ನ 3.30ರ ವರೆಗೆ ಬಣಕಲ್ನ ಚರ್ಚ್ ಸಭಾ ಭವನದಲ್ಲಿ ನಡೆಯಲಿದೆ.
ಶಿಬಿರದಲ್ಲಿ ಸಾರ್ವಜನಿಕರಿಗೆ ವೈವಿಧ್ಯಮಯ ವೈದ್ಯಕೀಯ ಸೇವೆಗಳು ಲಭ್ಯವಿದ್ದು, ಸಾಮಾನ್ಯ ಕಾಯಿಲೆಗಳ ತಪಾಸಣೆಯ ಜೊತೆಗೆ ಇ.ಸಿ.ಜಿ., ಬಿ.ಪಿ. ಹಾಗೂ ಸಕ್ಕರೆ ಕಾಯಿಲೆಯ ಪರೀಕ್ಷೆಗಳನ್ನು ಉಚಿತವಾಗಿ ಮಾಡಿಸಿಕೊಳ್ಳಬಹುದು. ಸ್ತ್ರೀ ರೋಗ ತಪಾಸಣೆ ಮತ್ತು ಸಂತಾನೋತ್ಪತ್ತಿ ಆರೋಗ್ಯಕ್ಕೆ ಸಂಬಂಧಿಸಿದ ಸಮಾಲೋಚನೆಗಳು ಮಧ್ಯಾಹ್ನ 12.30ರ ನಂತರ ಲಭ್ಯವಿರುತ್ತವೆ. ಇವುಗಳೊಂದಿಗೆ ಕಣ್ಣಿನ ತಪಾಸಣೆ ನಡೆಸಿ ಅಗತ್ಯವಿದ್ದಲ್ಲಿ ಕನ್ನಡಕಗಳನ್ನು ನೀಡಲಾಗುವುದು ಹಾಗೂ ಮಕ್ಕಳ ತಪಾಸಣೆ ಮತ್ತು ಚರ್ಮರೋಗ ತಪಾಸಣೆಗೂ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದೆ.
’ಉತ್ತಮ ಆರೋಗ್ಯ ಉತ್ತಮ ಜೀವನ’ ಎಂಬ ಧ್ಯೇಯದೊಂದಿಗೆ ಆಯೋಜಿಸಲಾಗಿರುವ ಈ ಶಿಬಿರದ ನೇತೃತ್ವವನ್ನು ಮಂಗಳೂರಿನ ಫಾದರ್ ಮುಲ್ಲರ್ ವೈದ್ಯಕೀಯ ಕಾಲೇಜು ಆಸ್ಪತ್ರೆಯ ಸಂಯೋಜಕರು ಹಾಗೂ ಕರ್ನಾಟಕ ಸರ್ಕಾರದ ಕರ್ನಾಟಕ ಕ್ರಿಶ್ಚಿಯನ್ ಸಮುದಾಯ ಅಭಿವೃದ್ಧಿ ನಿಗಮದ ನಿರ್ದೇಶಕರಾದ ಹರ್ಷ ಮೆಲ್ವಿನ್ ಲಸ್ರಾದೋ ಅವರು ವಹಿಸಿದ್ದಾರೆ. ಸ್ಥಳೀಯ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಈ ಉಚಿತ ಆರೋಗ್ಯ ಸೇವೆಯ ಸದುಪಯೋಗವನ್ನು ಪಡೆದುಕೊಳ್ಳಬೇಕೆಂದು ಆಯೋಜಕರು ವಿನಂತಿಸಿದ್ದಾರೆ.















Leave a Reply