ಚಿಕ್ಕಮಗಳೂರು: ಮಲೆನಾಡು ಭಾಗದಲ್ಲಿ ಮತ್ತೆ ಮಳೆ ಅಬ್ಬರ ಜೋರಾಗಿದೆ. ಕಳೆದೊಂದು ಗಂಟೆಯಿಂದ ಧಾರಾಕಾರವಾಗಿ ಸುರಿಯುತ್ತಿರುವ ಮಳೆಗೆ ಜನರು ತತ್ತರಿಸಿದ್ದಾರೆ. ಮಳೆಯೊಂದಿಗೆ ಭಾರೀ ಪ್ರಮಾಣದಲ್ಲಿ ಆಲಿಕಲ್ಲು ಸುರಿದಿದೆ.
ಕೊಪ್ಪ, ಜಯಪುರ, ಬಾಳೆಹೊನ್ನೂರು ಹಾಗೂ ಶೃಂಗೇರಿ ಭಾಗಗಳಲ್ಲಿ ಮಳೆ ತೀವ್ರಗೊಂಡಿದ್ದು, ಹಲವೆಡೆ ಗಾಳಿ ಸಹ ಭಾರೀ ಪ್ರಮಾಣದಲ್ಲಿ ಬೀಸುತ್ತಿದೆ. ಗಾಳಿ-ಮಳೆಯ ಅಬ್ಬರಕ್ಕೆ ಕೊಪ್ಪ ತಾಲೂಕಿನ ಕೊಗ್ರೆ ಭಾಗದಲ್ಲಿ ಒಂದು ಬೃಹತ್ ಮರ ಧರೆಗುರುಳಿದೆ.
ಶೃಂಗೇರಿ-ಕೊಪ್ಪ ಮುಖ್ಯರಸ್ತೆಯ ಗುಡ್ಡೆತೋಟದ ಬಳಿ ಮರ ರಸ್ತೆಗೆ ಬಿದ್ದ ಪರಿಣಾಮ ವಾಹನ ಸಂಚಾರಕ್ಕೆ ಅಡಚಣೆ ಉಂಟಾಗಿ ಟ್ರಾಫಿಕ್ ಜಾಮ್ ಕಂಡುಬಂದಿದೆ. ಸ್ಥಳೀಯರು ಮತ್ತು ಅಧಿಕಾರಿಗಳು ಮರವನ್ನು ತೆರವುಗೊಳಿಸುವ ಕಾರ್ಯದಲ್ಲಿ ತೊಡಗಿದ್ದಾರೆ.
ಇದ್ದಕ್ಕಿದ್ದಂತೆ ಆರಂಭವಾದ ಮಳೆಯಿಂದ ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದ್ದು, ಮುಂದಿನ ಎರಡು ದಿನ ಮಳೆ ಮುಂದುವರಿಯುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.


