ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ಮತ್ತು ಹರಿಹರಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ಸರಣಿ ಮನೆಗಳ್ಳತನ ಪ್ರಕರಣಗಳನ್ನು ಭೇದಿಸುವಲ್ಲಿ ಜಿಲ್ಲಾ ಪೊಲೀಸ್ ತಂಡ ಯಶಸ್ವಿಯಾಗಿದೆ. ಬೆಂಗಳೂರಿನ ಬನ್ನೇರುಘಟ್ಟ ಮೂಲದ ಆರೋಪಿ ಮಹಮದ್ ಹನೀಫ್ ಎಂಬಾತನನ್ನು ಬಂಧಿಸಿರುವ ಪೊಲೀಸರು, ಆತನಿಂದ ಸುಮಾರು 11,45,000 ರೂಪಾಯಿ ಮೌಲ್ಯದ ಚಿನ್ನ ಮತ್ತು ಬೆಳ್ಳಿ ಆಭರಣಗಳು ಹಾಗೂ ಕೃತ್ಯಕ್ಕೆ ಬಳಸಿದ್ದ 5 ಲಕ್ಷ ರೂಪಾಯಿ ಮೌಲ್ಯದ ಕಾರನ್ನು ವಶಪಡಿಸಿಕೊಂಡಿದ್ದಾರೆ. ಒಟ್ಟು 16,45,000 ರೂಪಾಯಿ ಮೌಲ್ಯದ ಸ್ವತ್ತನ್ನು ಜಪ್ತಿ ಮಾಡಲಾಗಿದ್ದು, ಈ ಕಾರ್ಯಾಚರಣೆಯ ಮೂಲಕ ಕೊಪ್ಪ ಮತ್ತು ಹರಿಹರಪುರ ಠಾಣೆಗಳಲ್ಲಿ ದಾಖಲಾಗಿದ್ದ ನಾಲ್ಕು ಪ್ರಮುಖ ಕಳ್ಳತನ ಪ್ರಕರಣಗಳು ಪತ್ತೆಯಾದಂತಾಗಿದೆ.
ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಜಿತೇಂದ್ರ ಕುಮಾರ್ ದಾಮ್ಮಾ ಮತ್ತು ಹೆಚ್ಚುವರಿ ಪೊಲೀಸ್ ಅಧೀಕ್ಷಕ ಸಿ.ಟಿ. ಜಯಕುಮಾರ್ ಅವರ ಮಾರ್ಗದರ್ಶನದಲ್ಲಿ, ಕೊಪ್ಪ ಉಪವಿಭಾಗದ ಡಿವೈಎಸ್‌ಪಿ ಬಾಲಾಜಿ ಸಿಂಗ್ ಹಾಗೂ ಸಿಪಿಐ ಅಬ್ದುಲ್ ಖಾದರ್ ನೇತೃತ್ವದ ವಿಶೇಷ ತಂಡವು ವೈಜ್ಞಾನಿಕ ತನಿಖೆಯ ಮೂಲಕ ಆರೋಪಿಯನ್ನು ಸೆರೆಹಿಡಿದಿದೆ. ಬಂಧಿತ ಆರೋಪಿಯು ಕದ್ದ ಕೆಲವು ಆಭರಣಗಳನ್ನು ಬೆಂಗಳೂರಿನ ಗೋಲ್ಡ್ ಕಂಪನಿಗಳಲ್ಲಿ ಮಾರಾಟ ಮಾಡಿರುವುದು ತಿಳಿದುಬಂದಿದ್ದು, ಅವುಗಳನ್ನು ವಶಪಡಿಸಿಕೊಳ್ಳಲು ತನಿಖೆ ಮುಂದುವರಿದಿದೆ. ಈ ಯಶಸ್ವಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದ ಅಧಿಕಾರಿಗಳು ಮತ್ತು ಸಿಬ್ಬಂದಿಯ ಕಾರ್ಯವನ್ನು ಶ್ಲಾಘಿಸಿರುವ ಪೊಲೀಸ್ ಅಧೀಕ್ಷಕರು ಅವರಿಗೆ ಬಹುಮಾನ ಘೋಷಿಸಿದ್ದಾರೆ.
ಇದೇ ಸಂದರ್ಭದಲ್ಲಿ ಸಾರ್ವಜನಿಕರ ಸುರಕ್ಷತೆಗಾಗಿ ಪೊಲೀಸ್ ಇಲಾಖೆಯು ಕೆಲವು ಮುನ್ನೆಚ್ಚರಿಕೆಗಳನ್ನು ನೀಡಿದ್ದು, ಮನೆಯಲ್ಲಿ ಹೆಚ್ಚಿನ ನಗದು ಅಥವಾ ಚಿನ್ನಾಭರಣಗಳನ್ನು ಇಡದೆ ಬ್ಯಾಂಕ್ ಲಾಕರ್‌ಗಳನ್ನು ಬಳಸುವಂತೆ ಸೂಚಿಸಿದೆ. ಜನರು ಊರಿಗೆ ಅಥವಾ ಹೊರಗಡೆ ಹೋಗುವಾಗ ಸ್ಥಳೀಯ ಪೊಲೀಸ್ ಠಾಣೆಗೆ ಮಾಹಿತಿ ನೀಡಬೇಕು ಹಾಗೂ ಮನೆಗಳ ಸುರಕ್ಷತೆಗಾಗಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಿಕೊಳ್ಳುವುದು ಸೂಕ್ತ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
















Leave a Reply