ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಬಂಡೀಗಡಿ ಬಳಿ ರಸ್ತೆ ಬದಿಯಲ್ಲಿ ಅಳವಡಿಸಿರುವ ಬ್ಯಾನರ್ ಇದೀಗ ಗಮನ ಸೆಳೆಯುತ್ತಿದೆ. “ಓಟು ಬೇಡಿದವರ ಸ್ಮಾರಕ ಹೊಂಡಗಳಿವೆ, ನಿಧಾನವಾಗಿ ಚಲಿಸಿ” ಎಂಬ ವ್ಯಂಗ್ಯಭರಿತ ಸಂದೇಶದ ಮೂಲಕ ರಸ್ತೆಗಳ ದುಸ್ಥಿತಿಯ ಬಗ್ಗೆ ಸ್ಥಳೀಯರು ತಮ್ಮ ಅಸಮಾಧಾನ ಹೊರಹಾಕಿದ್ದಾರೆ.
ಶೃಂಗೇರಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೆ ಬರುವ ಕೊಪ್ಪ ತಾಲೂಕಿನಲ್ಲಿ ರಸ್ತೆಗಳಲ್ಲಿನ ಆಳವಾದ ಗುಂಡಿಗಳು ವಾಹನ ಸವಾರರು ಹಾಗೂ ಸಾರ್ವಜನಿಕರಿಗೆ ತೀವ್ರ ತೊಂದರೆ ಉಂಟುಮಾಡುತ್ತಿವೆ. ಮಳೆಗಾಲ ಮುಗಿದ ಬಳಿಕ ರಸ್ತೆ ದುರಸ್ತಿ ಮಾಡಿಸುವುದಾಗಿ ನಿರೀಕ್ಷಿಸಿದ್ದ ಜನರಿಗೆ ನಿರಾಸೆಯಾಗಿದೆ. ಸರ್ಕಾರ ಕೊಟ್ಟ ಮಾತನ್ನೇ ಮರೆತಿದೆಯೇ ಎಂಬ ಪ್ರಶ್ನೆಯನ್ನೂ ಸ್ಥಳೀಯರು ಎತ್ತಿದ್ದಾರೆ.
ರಸ್ತೆಗಳಲ್ಲಿನ ಗುಂಡಿಗಳಿಂದ ಬೇಸತ್ತ ಮಲೆನಾಡಿನ ಹಲವು ಗ್ರಾಮಗಳ ಜನರು, ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳಿಗಾಗಿ ಕಾಯದೆ ತಾವೇ ರಸ್ತೆ ದುರಸ್ತಿಗೆ ಮುಂದಾಗಿದ್ದಾರೆ. ಹತ್ತಾರು ಹಳ್ಳಿಗಳಲ್ಲಿ ಗ್ರಾಮಸ್ಥರು ಸ್ವಂತ ಪ್ರಯತ್ನದಿಂದ ರಸ್ತೆ ಗುಂಡಿಗಳನ್ನು ಮುಚ್ಚಿಕೊಂಡಿದ್ದಾರೆ ಎನ್ನಲಾಗಿದೆ.
ಮಳೆಗಾಲದ ಬಳಿಕವೂ ರಸ್ತೆಗಳ ಸ್ಥಿತಿ ಸುಧಾರಿಸದಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಪ್ರತಿಬಾರಿ ಚುನಾವಣೆ ವೇಳೆ ಮತ ಕೇಳಲು ಬರುವ ಜನಪ್ರತಿನಿಧಿಗಳು, ಜನರ ದೈನಂದಿನ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸುವಲ್ಲಿ ವಿಫಲರಾಗಿದ್ದಾರೆ ಎಂಬ ಅಸಮಾಧಾನ ವ್ಯಕ್ತವಾಗುತ್ತಿದೆ.
ರಸ್ತೆಗಳ ದುರವಸ್ಥೆಯಿಂದ ವಾಹನ ಸವಾರರು ಪರದಾಡುವಂತಾಗಿದೆ. ಗುಂಡಿಗಳಿಂದ ಅಪಘಾತದ ಅಪಾಯವೂ ಹೆಚ್ಚಿದ್ದು, ಜನರ ಸುರಕ್ಷತೆಯ ಬಗ್ಗೆ ಆತಂಕ ವ್ಯಕ್ತವಾಗಿದೆ. ಈ ಹಿನ್ನೆಲೆಯಲ್ಲಿ ಕೊಪ್ಪ ತಾಲೂಕಿನ ಬಂಡೀಗಡಿ ಬಳಿ ಅಳವಡಿಸಿರುವ ವ್ಯಂಗ್ಯಭರಿತ ಬ್ಯಾನರ್, ರಸ್ತೆ ಸಮಸ್ಯೆಯ ವಿರುದ್ಧದ ಸಾರ್ವಜನಿಕ ಆಕ್ರೋಶಕ್ಕೆ ಸಾಕ್ಷಿಯಾಗಿದೆ.
ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ತಕ್ಷಣವೇ ರಸ್ತೆ ದುರಸ್ತಿಗೆ ಕ್ರಮ ಕೈಗೊಂಡು, ಮಲೆನಾಡಿನ ಜನರ ಸಮಸ್ಯೆಗೆ ಪರಿಹಾರ ಒದಗಿಸಬೇಕೆಂಬುದು ಸ್ಥಳೀಯರ ಆಗ್ರಹವಾಗಿದೆ.


