ಜಿಲ್ಲೆಯಲ್ಲಿ ಗ್ಯಾಸ್ ಸಿಲಿಂಡರ್ ಕೊರತೆ ಇಲ್ಲ – ಜಿಲ್ಲಾಧಿಕಾರಿ ಎನ್.ಎಂ. ನಾಗರಾಜ್ ಭರವಸೆ 

 

ಚಿಕ್ಕಮಗಳೂರು: ಜಿಲ್ಲೆಯಲ್ಲಿ ಗ್ಯಾಸ್ ಸಿಲಿಂಡರ್ ಕೊರತೆ ಉಂಟಾಗಿದೆ ಎಂಬ ಸಾರ್ವಜನಿಕರ ಆತಂಕಕ್ಕೆ ತೆರೆ ಎಳೆದಿರುವ ಜಿಲ್ಲಾಧಿಕಾರಿ ಎನ್.ಎಂ. ನಾಗರಾಜ್ ಅವರು, ಜಿಲ್ಲೆಯಲ್ಲಿ ಯಾವುದೇ ರೀತಿಯ ಸಿಲಿಂಡರ್ ಅಭಾವವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ವಾಣಿಜ್ಯ ಹಾಗೂ ಗೃಹ ಬಳಕೆ ಸಿಲಿಂಡರ್ ಗಳು ಜಿಲ್ಲೆಯಲ್ಲಿ ಸಾಕಷ್ಟು ಪ್ರಮಾಣದಲ್ಲಿ ದಾಸ್ತಾನು ಇವೆ.ಗೃಹ ಬಳಕೆ ಸಿಲಿಂಡರ್: ಇನ್ನೂ ಒಂದು ತಿಂಗಳಿಗೆ ಆಗುವಷ್ಟು ಗೃಹ ಬಳಕೆ ಸಿಲಿಂಡರ್ ಗಳು ಲಭ್ಯವಿದ್ದು, ಗ್ರಾಹಕರು ಆತಂಕಪಡುವ ಅವಶ್ಯಕತೆ ಇಲ್ಲ.ವಾಣಿಜ್ಯ ಬಳಕೆ: ಪ್ರಸ್ತುತ ಜಿಲ್ಲೆಯಲ್ಲಿ 1442 ವಾಣಿಜ್ಯ ಬಳಕೆಯ ಸಿಲಿಂಡರ್ ಗಳು ಲಭ್ಯವಿದ್ದು, ಒಂದು ವಾರ ಸರಿದೂಗಿಸುವ ವ್ಯವಸ್ಥೆಯನ್ನು ಮಾಡಿಕೊಳ್ಳಲಾಗಿದೆ.ಗ್ರಾಹಕರ ಮಾಹಿತಿ: ಜಿಲ್ಲೆಯಲ್ಲಿ ಒಟ್ಟು 12,716 ಗೃಹ ಬಳಕೆ ಸಿಲಿಂಡರ್ ಗ್ರಾಹಕರು ಇದ್ದು, ಪ್ರತಿದಿನ ಸರಾಸರಿ 9 ಸಾವಿರ ಸಿಲಿಂಡರ್ ಗಳು ಬುಕಿಂಗ್ ಆಗುತ್ತಿವೆ. ಸಿಲಿಂಡರ್‌ಗಳ ಕೊರತೆಯ ನೆಪವನ್ನಿಟ್ಟುಕೊಂಡು ಯಾರಾದರೂ ಕಾಳಸಂತೆಯಲ್ಲಿ ಮಾರಾಟ ಮಾಡುವುದನ್ನು ಅಥವಾ ಹೆಚ್ಚಿನ ಬೆಲೆಗೆ ಮಾರಾಟ ಮಾಡುವುದನ್ನು ತಡೆಯಲು ಜಿಲ್ಲಾಡಳಿತ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ ಎಂದು ಅವರು ತಿಳಿಸಿದರು. 

ಗ್ರಾಹಕರು ಗಾಬರಿಯಿಂದ ಮುಗಿಬಿದ್ದು ಬುಕಿಂಗ್ ಮಾಡುವ ಅಗತ್ಯವಿಲ್ಲ. ಸರಬರಾಜು ವ್ಯವಸ್ಥೆ ಸುಗಮವಾಗಿದ್ದು, ನಿಗದಿತ ಅವಧಿಯಲ್ಲಿ ಸಿಲಿಂಡರ್ ಲಭ್ಯವಾಗಲಿದೆ ಎಂದು ಜಿಲ್ಲಾಧಿಕಾರಿಗಳು ಈ ಮೂಲಕ ಭರವಸೆ ನೀಡಿದ್ದಾರೆ.

ಯಜಮಾನ್ರೇ… ನಿಮ್ಮ ಟವೆಲ್ ಸರ್ಕಾರಕ್ಕೆ ಗಿಫ್ಟ್ ಇರಲಿ: ಚಿಕ್ಕಮಗಳೂರಿನಲ್ಲಿ ನಡೆದ ಅಪರೂಪದ ಘಟನೆ!

 

 

ಚಿಕ್ಕಮಗಳೂರು: ಸರ್ಕಾರಿ ಬಸ್‌ಗಳ ದುಸ್ಥಿತಿ ಮತ್ತು ಪ್ರಯಾಣಿಕರ ಹೈರಾಣಿನ ನಡುವೆ, ಚಿಕ್ಕಮಗಳೂರಿನಲ್ಲಿ ನಡೆದ ಒಂದು ಘಟನೆ ಈಗ ಎಲ್ಲರ ಗಮನ ಸೆಳೆಯುತ್ತಿದೆ. ಬಸ್ಸಿನ ಮುರಿದ ಸೀಟಿಗೆ ತನ್ನ ಟವೆಲ್ಲನ್ನೇ ಕಟ್ಟಿ, ವ್ಯವಸ್ಥೆಯ ಮೇಲೆ ವ್ಯಂಗ್ಯವಾಡುವುದರ ಜೊತೆಗೆ ಮುಂದಿನ ಪ್ರಯಾಣಿಕರಿಗೆ ನೆರವಾದ ರೈತನೊಬ್ಬನ ಕಥೆ ಇದು.

ಚಿಕ್ಕಮಗಳೂರು ಡಿಪೋಗೆ ಸೇರಿದ ಮೈಸೂರು ಮಾರ್ಗದ ಬಸ್ಸಿನಲ್ಲಿ ಈ ಘಟನೆ ನಡೆದಿದೆ. ಚಿಕ್ಕಮಗಳೂರು ಮತ್ತು ಹಾಸನ ಮಾರ್ಗ ಮಧ್ಯೆ ಪ್ರಯಾಣಿಸುತ್ತಿದ್ದ ಈ ಬಸ್ಸಿನ ಒಂದು ಸೀಟು ಸಂಪೂರ್ಣವಾಗಿ ಮುರಿದು ಹೋಗಿತ್ತು. ಸೀಟಿನ ಹಿಂಭಾಗದ ಆಸರೆ ಇಲ್ಲದ ಕಾರಣ, ಯಾರೂ ಅಲ್ಲಿ ಕೂರಲು ಸಾಧ್ಯವಾಗುತ್ತಿರಲಿಲ್ಲ. ಬಸ್ ಚಲಿಸುವಾಗ ಆ ಸೀಟಿನಲ್ಲಿ ಕೂತರೆ ಹಿಂದೆ ಬೀಳುವ ಭಯ ಪ್ರಯಾಣಿಕರಲ್ಲಿತ್ತು.

ಬಸ್ ಹತ್ತಿದ ರೈತರೊಬ್ಬರು ಆ ಮುರಿದ ಸೀಟನ್ನು ಕಂಡು ಸುಮ್ಮನಾಗಲಿಲ್ಲ. ತಮ್ಮ ಹೆಗಲ ಮೇಲಿದ್ದ ಟವೆಲ್ ತೆಗೆದು, ಮುರಿದಿದ್ದ ಸೀಟಿನ ರಾಡ್‌ಗೆ ಭದ್ರವಾಗಿ ಕಟ್ಟಿದರು. ಆ ಟವೆಲ್ ಆಸರೆಯಲ್ಲೇ ಆರಾಮವಾಗಿ ಕುಳಿತು ಪ್ರಯಾಣ ಮಾಡಿದರು. ಅಚ್ಚರಿಯ ವಿಷಯವೆಂದರೆ, ಅವರು ತಮ್ಮ ಇಳಿಯುವ ನಿಲ್ದಾಣ ಬಂದಾಗ ಆ ಟವೆಲ್ ಬಿಚ್ಚದೆ, “ನಂತರ ಬರುವ ಪ್ರಯಾಣಿಕರಿಗೂ ಇದು ಆಸರೆಯಾಗಲಿ, ಸರ್ಕಾರಕ್ಕೆ ಇದು ನನ್ನ ಕಡೆಯಿಂದ ಗಿಫ್ಟ್” ಎಂಬಂತೆ ಅಲ್ಲಿಯೇ ಬಿಟ್ಟು ಹೋದರು.

ಈ ದೃಶ್ಯವನ್ನು ಕಂಡ ಸಹ ಪ್ರಯಾಣಿಕರು ಸರ್ಕಾರದ ‘ಉಚಿತ’ ಯೋಜನೆಗಳ ಬಗ್ಗೆ ವ್ಯಂಗ್ಯವಾಡಿದ್ದಾರೆ. “ಪುಕ್ಕಟ್ಟೆ ಪ್ರಯಾಣದ ಯೋಜನೆಗಳೇನೋ ಜಾರಿಯಾಗಿವೆ, ಆದರೆ ಬಸ್‌ಗಳ ಸ್ಥಿತಿ ಮಾತ್ರ ಶೋಚನೀಯವಾಗಿದೆ. ಬಸ್ಸು ಎಲ್ಲೂ ಕೆಟ್ಟು ನಿಲ್ಲದಿದ್ದರೆ ಸಾಕು ಎನ್ನುವಂತಾಗಿದೆ” ಎಂದು ಪ್ರಯಾಣಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಬೆಂಬಲ ಬೆಲೆಗೆ ಆಗ್ರಹಿಸಿ ತಂಬಾಕು ಬೆಳೆಗಾರರ ಬೃಹತ್ ಪ್ರತಿಭಟನೆ – ನಡುರಸ್ತೆಯಲ್ಲಿ ತಂಬಾಕಿಗೆ ಬೆಂಕಿ

 

 

ಹಾಸನ: ತಾವು ಕಷ್ಟಪಟ್ಟು ಬೆಳೆದ ತಂಬಾಕು ಬೆಳೆಗೆ ಸೂಕ್ತ ಬೆಂಬಲ ಬೆಲೆ ನೀಡದ ಅಧಿಕಾರಿಗಳ ಹಾಗೂ ಸರ್ಕಾರದ ಕ್ರಮವನ್ನು ಖಂಡಿಸಿ ನೂರಾರು ತಂಬಾಕು ಬೆಳೆಗಾರರು ನಡುರಸ್ತೆಯಲ್ಲಿ ಬೃಹತ್ ಪ್ರತಿಭಟನೆ ನಡೆಸಿದ ಘಟನೆ ಹಾಸನ ಜಿಲ್ಲೆ ಅರಕಲಗೂಡು ತಾಲೂಕಿನ ರಾಮನಾಥಪುರದಲ್ಲಿ ನಡೆದಿದೆ.

ಬೆಂಬಲ ಬೆಲೆ ಸಿಗದೆ ಕಂಗೆಟ್ಟಿರುವ ನೂರಾರು ರೈತರು ಏಕಾಏಕಿ ರಸ್ತೆಗಿಳಿದು ಹೋರಾಟದ ಹಾದಿ ಹಿಡಿದಿದ್ದಾರೆ. ನಡುರಸ್ತೆಯಲ್ಲಿಯೇ ತಂಬಾಕು ಬ್ಯಾರೆಲ್‌ಗಳನ್ನು ತಂದಿಟ್ಟು, ಅವುಗಳಿಗೆ ಬೆಂಕಿ ಹಚ್ಚುವ ಮೂಲಕ ತಮ್ಮ ತೀವ್ರ ಆಕ್ರೋಶವನ್ನು ಹೊರಹಾಕಿದರು. ರಸ್ತೆಯ ಮಧ್ಯೆ ತಂಬಾಕು ಹೊತ್ತಿ ಉರಿದ ಪರಿಣಾಮ ಸ್ಥಳದಲ್ಲಿ ಕೆಲಕಾಲ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು.

ಸೂಕ್ತ ಬೆಲೆ ಕಲ್ಪಿಸುವಲ್ಲಿ ವಿಫಲರಾಗಿರುವ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ವಿರುದ್ಧ ಪ್ರತಿಭಟನಾ ನಿರತ ರೈತರು ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. “ನಾವು ಹಗಲಿರುಳು ಕಷ್ಟಪಟ್ಟು ಬೆಳೆದ ಬೆಳೆಗೆ ಕನಿಷ್ಠ ಬೆಂಬಲ ಬೆಲೆಯೂ ಸಿಗುತ್ತಿಲ್ಲ, ಅಧಿಕಾರಿಗಳು ನಮ್ಮ ನೆರವಿಗೆ ಬರುತ್ತಿಲ್ಲ” ಎಂದು ರೈತರು ಕಿಡಿಕಾರಿದರು.

 

 

ಕಳೆದ ಕೆಲವು ಸಮಯದಿಂದ ಮಾರುಕಟ್ಟೆಯಲ್ಲಿ ತಂಬಾಕಿಗೆ ನಿರೀಕ್ಷಿತ ಬೆಲೆ ಸಿಗದೆ ರೈತರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ಸರ್ಕಾರ ಹಾಗೂ ತಂಬಾಕು ಮಂಡಳಿ  ಕೂಡಲೇ ಮಧ್ಯಪ್ರವೇಶಿಸಿ, ತಂಬಾಕಿಗೆ ವೈಜ್ಞಾನಿಕ ಹಾಗೂ ಯೋಗ್ಯ ಬೆಂಬಲ ಬೆಲೆಯನ್ನು ನಿಗದಿಪಡಿಸಬೇಕು ಎಂದು ಆಗ್ರಹಿಸಿದರು. ಬೇಡಿಕೆ ಈಡೇರದಿದ್ದರೆ ಮುಂದಿನ ದಿನಗಳಲ್ಲಿ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸುವುದಾಗಿ ರೈತರು ಎಚ್ಚರಿಕೆ ನೀಡಿದ್ದಾರೆ.

 

 

ಕ್ಯಾಂಟೀನ್‌ನಲ್ಲಿ ಬೆಂಕಿಯ ಅವಘಡ ; ಮಹಿಳೆಗೆ ಗಾಯ ಗಾಯ, ಲಕ್ಷಾಂತರ ಮೌಲ್ಯದ ವಸ್ತುಗಳು ಭಸ್ಮ

 

ಚಿಕ್ಕಮಗಳೂರು ನಗರದ ಟೌನ್ ಪೊಲೀಸ್ ಠಾಣೆಯ ಹತ್ತಿರದಲ್ಲೇ ಇರುವ ಮನೆಯೊಂದರಲ್ಲಿ ನಡೆಸುತ್ತಿದ್ದ ಕ್ಯಾಂಟೀನ್‌ನಲ್ಲಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡಿದೆ. ಸುರೇಶ್ ಮತ್ತು ಅವರ ಪತ್ನಿ ವೆಳ್ಳಿ ಎಂಬುವವರು ಜೀವನೋಪಾಯಕ್ಕಾಗಿ ನಡೆಸುತ್ತಿದ್ದ ಈ ಕ್ಯಾಂಟೀನ್ ಕ್ಷಣಮಾತ್ರದಲ್ಲಿ ಬೆಂಕಿಯ ಕೆನ್ನಾಲಿಗೆಗೆ ತುತ್ತಾಗಿದೆ. ಈ ಭೀಕರ ಅನಾಹುತದಲ್ಲಿ ಕ್ಯಾಂಟೀನ್‌ನಲ್ಲಿದ್ದ ದಿನಸಿ ಪದಾರ್ಥಗಳು ಹಾಗೂ ಪೀಠೋಪಕರಣಗಳು ಸಂಪೂರ್ಣವಾಗಿ ಸುಟ್ಟು ಭಸ್ಮವಾಗಿದ್ದು, ಮಾಲೀಕರಿಗೆ ಲಕ್ಷಾಂತರ ರೂಪಾಯಿಗಳ ನಷ್ಟ ಉಂಟಾಗಿದೆ.

​ದುರದೃಷ್ಟವಶಾತ್ ಬೆಂಕಿ ನಂದಿಸಲು ಹೋದ ಸುರೇಶ್ ಅವರ ಪತ್ನಿ ವೆಳ್ಳಿಯವರಿಗೆ ಸುಟ್ಟ ಗಾಯಗಳಾಗಿದ್ದು, ಅವರನ್ನು ತಕ್ಷಣವೇ ನಗರದ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಘಟನಾ ಸ್ಥಳಕ್ಕೆ ಕೂಡಲೇ ಧಾವಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಬೆಂಕಿಯನ್ನು ನಿಯಂತ್ರಣಕ್ಕೆ ತಂದಿದ್ದಾರೆ.

ಶಾಸಕರಿಲ್ಲದಿದ್ದರೂ ಅವರ ಸೀಟಿನಲ್ಲಿ ಕುಳಿತು ಸಭೆ ನಡೆಸಿದ ಆಪ್ತ ಸಹಾಯಕ

ಕಡೂರು ತಾಲ್ಲೂಕಿನಲ್ಲಿ ಶಾಸಕರ ಅನುಪಸ್ಥಿತಿಯಲ್ಲಿ ಅವರ ಆಪ್ತ ಸಹಾಯಕರು ಸರ್ಕಾರಿ ಸಭೆಯ ವಹಿಸಿರುವುದು ತೀವ್ರ ಚರ್ಚೆಗೆ ಹಾಗೂ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ತಾಲ್ಲೂಕು ಕಚೇರಿಯಲ್ಲಿ ತಹಶೀಲ್ದಾರ್ ಅವರು ಕಂದಾಯ ಗ್ರಾಮ ಹಾಗೂ ತಾಲ್ಲೂಕಿನ ಅಭಿವೃದ್ಧಿ ಕುರಿತು ಪ್ರಮುಖ ಸಭೆಯನ್ನು ಆಯೋಜಿಸಿದ್ದರು. ಈ ಸಭೆಯಲ್ಲಿ ಭೂ ದಾಖಲೆಗಳ ಉಪನಿರ್ದೇಶಕರು, ಉಪ ತಹಶೀಲ್ದಾರ್, ರಾಜಸ್ವ ನಿರೀಕ್ಷಕರು ಹಾಗೂ ಪಿಡಿಓಗಳಂತಹ ಉನ್ನತ ಮಟ್ಟದ ಅಧಿಕಾರಿಗಳು ಭಾಗವಹಿಸಿದ್ದರು.

​ಸಭೆಯಲ್ಲಿ ಕಡೂರು ಶಾಸಕರಾದ ಕೆ.ಎಸ್. ಆನಂದ್ ಅವರು ಉಪಸ್ಥಿತರಿರಬೇಕಿತ್ತು, ಆದರೆ ಶಾಸಕರ ಗೈರುಹಾಜರಿಯಲ್ಲಿ ಅವರ ಆಪ್ತ ಸಹಾಯಕ ಮಂಜುನಾಥ್ ಅವರು ಶಾಸಕರಿಗಾಗಿ ಮೀಸಲಾದ ಜಾಗದಲ್ಲಿ ಕುಳಿತು ಅಧಿಕಾರಿಗಳಿಗೆ ಸೂಚನೆಗಳನ್ನು ನೀಡುವ ಮೂಲಕ ಸಭೆ ನಡೆಸಿದ್ದಾರೆ. ಸರ್ಕಾರದ ಅಧಿಕೃತ ಸಭೆಯನ್ನು ಶಾಸಕರ ಬದಲಿಗೆ ಅವರ ಪಿಎ ನಡೆಸಿರುವುದು ಸಾರ್ವಜನಿಕ ವಲಯದಲ್ಲಿ ‘ಸೂಪರ್ ಸಿಎಂ’ ಮಾದರಿಯ ದರ್ಬಾರ್ ಎಂದು ಟೀಕೆಗೆ ಒಳಗಾಗಿದೆ. ಜನಪ್ರತಿನಿಧಿಗಳ ಜವಾಬ್ದಾರಿಯನ್ನು ಅವರ ಆಪ್ತ ಸಹಾಯಕರು ಚಲಾಯಿಸುತ್ತಿರುವುದು ಆಡಳಿತಾತ್ಮಕ ಶಿಷ್ಟಾಚಾರದ ಉಲ್ಲಂಘನೆ ಎಂಬ ಮಾತುಗಳು ಕೇಳಿಬರುತ್ತಿವೆ.

ಮೂಡಿಗೆರೆ: ರಸ್ತೆ ತಿರುವಿನಲ್ಲಿ 50 ಅಡಿ ಆಳಕ್ಕೆ ಉರುಳಿದ ಲಾರಿ; ಕ್ಯಾಬಿನ್‌ನಲ್ಲಿ ಸಿಲುಕಿದ್ದ ಚಾಲಕನ ಸಾಹಸಮಯ ರಕ್ಷಣೆ

 

 

ಮೂಡಿಗೆರೆ ತಾಲೂಕಿನ ಕೆಳಗೂರು ಟೀ ಎಸ್ಟೇಟ್ ಬಳಿ ಇಂದು ಬೆಳ್ಳಂಬೆಳಗ್ಗೆ ಭೀಕರ ಲಾರಿ ಅಪಘಾತ ಸಂಭವಿಸಿದ್ದು, ಸಾವಿನ ದವಡೆಯಿಂದ ಕ್ಲೀನರ್ ಅದೃಷ್ಟವಶಾತ್ ಪಾರಾಗಿದ್ದಾರೆ. ದೊಡ್ಡಬಳ್ಳಾಪುರದಿಂದ ಹಿರೇಬೈಲು ಗ್ರಾಮಕ್ಕೆ ಸಿಮೆಂಟ್ ಸಾಗಿಸುತ್ತಿದ್ದ 12 ಚಕ್ರದ ಲಾರಿಯು ರಸ್ತೆಯ ಕಡಿದಾದ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಸುಮಾರು 50 ಅಡಿ ಆಳದ ಪ್ರಪಾತಕ್ಕೆ ಉರುಳಿದೆ. ಈ ವೇಳೆ ಲಾರಿಯು ಎಸ್ಟೇಟ್ ಕಾರ್ಮಿಕರ ಲೈನ್ ಮನೆಗಳ ಅಂಗಳಕ್ಕೇ ಬಂದು ಬಿದ್ದಿದ್ದು, ಇನ್ನೊಂದು ಪಲ್ಟಿಯಾಗಿದ್ದಲ್ಲಿ ದೊಡ್ಡ ಮಟ್ಟದ ಸಾವು-ನೋವು ಸಂಭವಿಸುವ ಸಾಧ್ಯತೆಯಿತ್ತು.

​ಅಪಘಾತದ ತೀವ್ರತೆಗೆ ಲಾರಿಯ ಕ್ಯಾಬಿನ್ ಸಂಪೂರ್ಣ ಜಜ್ಜಲ್ಪಟ್ಟಿದ್ದು, ಅದರೊಳಗೆ ಸಿಲುಕಿಕೊಂಡಿದ್ದ ಕ್ಲೀನರ್ ಸುಮಾರು ಎರಡು ಗಂಟೆಗಳ ಕಾಲ ಹೊರಬರಲಾಗದೆ ನರಕಯಾತನೆ ಅನುಭವಿಸಿದ್ದಾರೆ. ತಕ್ಷಣ ಕಾರ್ಯಪ್ರವೃತ್ತರಾದ ಬಾಳೂರು ಪೊಲೀಸರು, ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ಸ್ಥಳೀಯರು ಸತತ ಕಾರ್ಯಾಚರಣೆ ನಡೆಸಿ ಕ್ರೇನ್ ನೆರವಿನಿಂದ ಲಾರಿಯನ್ನು ಪಕ್ಕಕ್ಕೆ ಸರಿಸಿ ಕ್ಲೀನರ್‌ನನ್ನು ರಕ್ಷಿಸಿದ್ದಾರೆ. ತೀವ್ರವಾಗಿ ಗಾಯಗೊಂಡಿರುವ ಕ್ಲೀನರ್‌ನನ್ನು ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಘಟನಾ ಸ್ಥಳಕ್ಕೆ ಹೋಗಲು ಸರಿಯಾದ ರಸ್ತೆ ಇಲ್ಲದ ಕಾರಣ ಜೆಸಿಬಿ ಮೂಲಕ ತಾತ್ಕಾಲಿಕ ದಾರಿ ನಿರ್ಮಿಸಿ ಲಾರಿಯನ್ನು ಮೇಲೆತ್ತಲು ಪೊಲೀಸರು ಕ್ರಮ ಕೈಗೊಂಡಿದ್ದಾರೆ. ಅತಿ ವೇಗ ಹಾಗೂ ಅಜಾಗರೂಕತೆಯ ಚಾಲನೆಯೇ ಈ ಘಟನೆಗೆ ಕಾರಣ ಎನ್ನಲಾಗುತ್ತಿದ್ದು, ಬಾಳೂರು ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ತನಿಖೆ ಮುಂದುವರಿದಿದೆ.

ಪೊಲೀಸ್ ಕ್ವಾಟ್ರಸ್ ಮುಂದೆ ಕಾರು ನಿಲ್ಲಿಸಿದ್ದಕ್ಕೆ ಕಿಡಿಗೇಡಿಯ ಅಮಾನವೀಯ ವಿಕೃತಿ

 

ಚಿಕ್ಕಮಗಳೂರು: ಪೊಲೀಸ್ ವಸತಿ ಗೃಹದ ಮುಂಭಾಗ ಕಾರು ನಿಲ್ಲಿಸಿದ ಕ್ಷುಲ್ಲಕ ಕಾರಣಕ್ಕೆ ವ್ಯಕ್ತಿಯೊಬ್ಬರು ಅಮಾನವೀಯವಾಗಿ ನಡೆದುಕೊಂಡಿರುವ ಘಟನೆ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಕೂದುವಳ್ಳಿ ಗ್ರಾಮದ ಅರವಿಂದ್ ಎಂಬುವರಿಗೆ ಸೇರಿದ ಕಾರನ್ನು ಶರತ್ ಎಂಬುವವರು ಕಲ್ಲಿನಿಂದ ಜಜ್ಜಿ ಹಾನಿ ಮಾಡಿದ್ದಲ್ಲದೆ, ಕಾರಿನ ಬಾನೆಟ್ ಮೇಲೆ ‘ಡೋಂಟ್ ಪಾರ್ಕ್ ಹಿಯರ್’ ಎಂದು ಕಲ್ಲಿನಿಂದ ಗೀಚಿ ತಮ್ಮ ವಿಕೃತಿ ಮೆರೆದಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಈ ಕೃತ್ಯ ಎಸಗಿದ ಶರತ್ ಜಿಲ್ಲಾ ಪೊಲೀಸ್ ಕಚೇರಿಯಲ್ಲೇ ಸಿಬ್ಬಂದಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಎನ್ನಲಾಗಿದ್ದು, ಇದೇ ಕಾರಣಕ್ಕೆ ಸ್ಥಳೀಯ ಪೊಲೀಸರು ದೂರು ದಾಖಲಿಸಿಕೊಳ್ಳಲು ಹಿಂದೇಟು ಹಾಕಿದ್ದಾರೆ ಎಂದು ಕಾರಿನ ಮಾಲೀಕ ಅರವಿಂದ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

 


ಅಲ್ಲದೇ ಸ್ಥಳದಲ್ಲಿ ಯುವಕರ ಗುಂಪು ಜಮಾಯಿಸಿ ಪ್ರತಿಭಟನೆ ನಡೆಸಲು ಮುಂದಾಗುತ್ತಿದಂತೆ. ಅರಿತ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಜಯಕುಮಾರ್ ಆಕ್ರೋಶಗೊಂಡಿದ್ದ ಯುವಕರನ್ನು ಸಮಾಧಾನಪಡಿಸಿ ನಗರ ಠಾಣೆಯ ಪೊಲೀಸರಿಗೆ ಪ್ರಕರಣ ದಾಖಲಿಸಿಕೊಳ್ಳಲು ಸೂಚನೆ ನೀಡಿದ್ರು ಘಟನೆಯ ಸಂಬಂಧ ಚಿಕ್ಕಮಗಳೂರು ನಗರ ಪೊಲೀಸ್ ಠಾಣೆಯಲ್ಲಿ ಶರತ್ ವಿರುದ್ಧ ಪ್ರಕರಣ ದಾಖಲಾಗಿದೆ.

ಮಳೆ ನೀರು ಕೊಯ್ಲು ಮತ್ತು ಅಂತರ್ಜಲ ನಿರ್ವಹಣೆಯಲ್ಲಿ ರಾಷ್ಟ್ರೀಯ ಮನ್ನಣೆ ಪಡೆದ ಫಾರ್ಮ್‌ ಲ್ಯಾಂಡ್ ರೈನ್ ವಾಟರ್ ಹಾರ್ವೆಸ್ಟಿಂಗ್ ಸಿಸ್ಟಮ್ಸ್*

 

 

 

ಚಿಕ್ಕಮಗಳೂರು: ಕಾಫಿನಾಡಿನ ಕೀರ್ತಿ ಪತಾಕೆ ಈಗ ರಾಷ್ಟ್ರ ರಾಜಧಾನಿಯಲ್ಲಿ ರಾರಾಜಿಸುತ್ತಿದೆ. ಮಳೆ ನೀರು ಕೊಯ್ಲು ಮತ್ತು ಅಂತರ್ಜಲ ನಿರ್ವಹಣೆಯಲ್ಲಿ ಕ್ರಾಂತಿಕಾರಿ ಬದಲಾವಣೆ ತಂದಿರುವ ನಗರದ ಹೆಸರಾಂತ ‘ಫಾರ್ಮ್‌ ಲ್ಯಾಂಡ್ ರೈನ್ ವಾಟರ್ ಹಾರ್ವೆಸ್ಟಿಂಗ್ ಸಿಸ್ಟಮ್ಸ್’ ಸಂಸ್ಥೆಯು 2026ರ ಪ್ರತಿಷ್ಠಿತ ‘ವಾಟರ್ ಟ್ರಾನ್ಸ್‌ರ್ವಲಿಟಿ ಗ್ಲೋಬಲ್’ ರಾಷ್ಟ್ರೀಯ ಪ್ರಶಸ್ತಿಗೆ ಭಾಜನವಾಗುವ ಮೂಲಕ ಜಿಲ್ಲೆಗೆ ಹೆಮ್ಮೆ ತಂದಿದೆ.

ನವದೆಹಲಿಯ ಇಂಡಿಯಾ ಇಂಟರ್‌ನ್ಯಾಷನಲ್ ಸೆಂಟರ್‌ನಲ್ಲಿ ಆಯೋಜಿಸಲಾಗಿದ್ದ ಅದ್ಧೂರಿ ಕಾರ್ಯಕ್ರಮದಲ್ಲಿ ಲೋಕಸಭಾಧ್ಯಕ್ಷರಾದ ಓಂ ಬಿರ್ಲಾ ಅವರು ಸಂಸ್ಥೆಯ ನಿರ್ದೇಶಕರಾದ ವರುಣ್ ರಿನಾಲ್ಗೊ ಬ್ಯಾಪ್ಟಿಸ್ಟ್ ಅವರಿಗೆ ಈ ಪ್ರಶಸ್ತಿಯನ್ನು ಪ್ರದಾನ ಮಾಡಿದರು. ಸುಸ್ಥಿರ ನೀರಿನ ಪರಿಹಾರಗಳಲ್ಲಿ ನವೀನ ತಂತ್ರಜ್ಞಾನವನ್ನು ಅಳವಡಿಸಿಕೊಂಡಿರುವ ಈ ಸಂಸ್ಥೆಯು, ವಸತಿ, ವಾಣಿಜ್ಯ ಹಾಗೂ ಸಾರ್ವಜನಿಕ ವಲಯಗಳಲ್ಲಿ ಮಳೆ ನೀರು ಕೊಯ್ಲು ವ್ಯವಸ್ಥೆಯನ್ನು ಅತ್ಯಂತ ಪರಿಣಾಮಕಾರಿಯಾಗಿ ಜಾರಿಗೆ ತಂದಿದೆ. ಕೇವಲ ಮೇಲ್ಛಾವಣಿಯ ನೀರನ್ನು ಸಂಗ್ರಹಿಸುವುದು ಮಾತ್ರವಲ್ಲದೆ, ವೈಜ್ಞಾನಿಕ ಹರಿವಿನ ಮೂಲಕ ಅಂತರ್ಜಲ ಮರುಪೂರಣ ಮಾಡುವಲ್ಲಿ ಸಂಸ್ಥೆ ತೋರಿರುವ ಬದ್ಧತೆಯನ್ನು ಕೇಂದ್ರ ಸರ್ಕಾರ ಮತ್ತು ಜಾಗತಿಕ ವೇದಿಕೆ ಮುಕ್ತಕಂಠದಿಂದ ಶ್ಲಾಘಿಸಿದೆ.

ನೀರಿನ ಕೊರತೆಯ ಸವಾಲುಗಳನ್ನು ಎದುರಿಸಲು ಪ್ರಾಯೋಗಿಕ ಹಾಗೂ ಸುಲಭವಾಗಿ ವಿಸ್ತರಿಸಬಹುದಾದ ತಂತ್ರಜ್ಞಾನವನ್ನು ಪರಿಚಯಿಸಿರುವುದು ಈ ಸಂಸ್ಥೆಯ ವಿಶೇಷತೆಯಾಗಿದೆ. ದೀರ್ಘಕಾಲಿನ ನೀರಿನ ಸಂರಕ್ಷಣೆಯ ದೃಷ್ಟಿಯಿಂದ ಸಂಸ್ಥೆ ರೂಪಿಸಿರುವ ವಿನ್ಯಾಸಗಳು ಇಂದು ರಾಷ್ಟ್ರೀಯ ಮಟ್ಟದ ಮನ್ನಣೆಗೆ ಪಾತ್ರವಾಗಿವೆ. ಈ ಸುಸಂದರ್ಭದಲ್ಲಿ ಗ್ಲೋಬಲ್ ಅಲೈಯನ್ಸ್ ಫಾರ್ ಎ ಸಸ್ಟೈನೇಬಲ್ ಪ್ಲಾನೆಟ್ ಅಧ್ಯಕ್ಷ ಡಾ. ಸತ್ಯತ್ರಿಪಾಠಿ ಹಾಗೂ ಇಂಡಿಯನ್ ವಾಟರ್ ಫೌಂಡೇಷನ್‌ನ ಡಾ. ಅರವಿಂದ್ ಕುಮಾರ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದು, ಚಿಕ್ಕಮಗಳೂರಿನ ಈ ಸಾಧಕ ಸಂಸ್ಥೆಯ ಕಾರ್ಯವೈಖರಿಯನ್ನು ಅಭಿನಂದಿಸಿದರು. ಪರಿಸರ ಸ್ನೇಹಿ ಮತ್ತು ಸುಸ್ಥಿರ ಅಭಿವೃದ್ಧಿಯ ಹಾದಿಯಲ್ಲಿ ಫಾರ್ಮ್‌ ಲ್ಯಾಂಡ್ ಸಂಸ್ಥೆಯ ಈ ಸಾಧನೆ ಇತರರಿಗೂ ಮಾದರಿಯಾಗಿದೆ.

ಕೊಲ್ಲಿ ರಾಷ್ಟ್ರಗಳಲ್ಲಿ ಯುದ್ಧದ ಎಫೆಕ್ಟ್ ಕುವೈತ್‌ನಲ್ಲಿ ಸಿಲುಕಿದ ಶೃಂಗೇರಿ ತಾಯಿ-ಮಗಳು

 

 

ಶೃಂಗೇರಿ: ಕೊಲ್ಲಿ ರಾಷ್ಟ್ರಗಳಲ್ಲಿ ನಡೆಯುತ್ತಿರುವ ಯುದ್ಧದ ಭೀಕರತೆ ಮತ್ತು ವಿಮಾನ ಹಾರಾಟದ ವ್ಯತ್ಯಯದಿಂದಾಗಿ, ಶೃಂಗೇರಿ ಮೂಲದ ಗರ್ಭಿಣಿ ಮಹಿಳೆ ಮತ್ತು ಆಯುಷಿ ಎಂಬ ಪುಟ್ಟ ಮಗು ಕುವೈತ್‌ನಲ್ಲಿ ಸಿಲುಕಿದ್ದಾರೆ. ಏಳು ತಿಂಗಳ ಗರ್ಭಿಣಿಯಾದ ಅಪೂರ್ವ ಅವರು ತಾಯ್ನಾಡಿಗೆ ಮರಳಲು ಸಾಧ್ಯವಾಗದೆ ಸಂಕಷ್ಟಕ್ಕೆ ಸಿಲುಕಿದ್ದಾರೆ. ಮಾರ್ಚ್ 8ರಂದು ಅವರು ಭಾರತಕ್ಕೆ ಬರಲು ವಿಮಾನದ ಟಿಕೆಟ್ ಕಾಯ್ದಿರಿಸಿದ್ದರೂ, ಯುದ್ಧದ ಉದ್ವಿಗ್ನತೆಯಿಂದಾಗಿ ಪ್ರಯಾಣ ರದ್ದಾಗಿರುವುದು ಅವರ ಕುಟುಂಬದಲ್ಲಿ ಆತಂಕ ಮೂಡಿಸಿದೆ.

​ಈ ಹಿನ್ನೆಲೆಯಲ್ಲಿ ಶೃಂಗೇರಿಯ ಅವರ ಪೋಷಕರು ತಮ್ಮ ಮಗಳು ಮತ್ತು ಮೊಮ್ಮಗಳ ರಕ್ಷಣೆಗಾಗಿ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರ ಮೊರೆ ಹೋಗಿದ್ದಾರೆ. ಜೆಡಿಎಸ್ ವಕ್ತಾರ ಸುಧಾಕರ್ ಶೆಟ್ಟಿ ಅವರ ಮೂಲಕ ಕುಮಾರಸ್ವಾಮಿ ಅವರಿಗೆ ಪತ್ರ ಬರೆಯಲಾಗಿದ್ದು, ಕುವೈತ್‌ನಲ್ಲಿರುವ ಭಾರತೀಯ ರಾಯಭಾರಿ ಕಚೇರಿಯ ನೆರವಿನೊಂದಿಗೆ ಅವರನ್ನು ತುರ್ತಾಗಿ ಭಾರತಕ್ಕೆ ಕರೆತರಲು ಕ್ರಮ ಕೈಗೊಳ್ಳುವಂತೆ ವಿನಂತಿಸಲಾಗಿದೆ. ಗರ್ಭಿಣಿಯಾಗಿರುವ ಅಪೂರ್ವ ಅವರ ಆರೋಗ್ಯದ ದೃಷ್ಟಿಯಿಂದ ಕೇಂದ್ರ ಸರ್ಕಾರ ಈ ಕೂಡಲೇ ಮಧ್ಯಪ್ರವೇಶಿಸಿ ಅವರಿಗೆ ಸುರಕ್ಷಿತ ಹಾದಿ ಮಾಡಿಕೊಡಬೇಕೆಂದು ಕುಟುಂಬಸ್ಥರು ಭರವಸೆಯಿಂದ ಕಾಯುತ್ತಿದ್ದಾರೆ.

ಶ್ರೀ ಚೈತನ್ಯ ಟೆಕ್ನೋ ಶಾಲೆಯ ವಿದ್ಯಾರ್ಥಿಗಳಿಂದ ಒಲಿಂಪಿಯಾಡ್‌ನಲ್ಲಿ ಐತಿಹಾಸಿಕ ಸಾಧನೆ

 

 

ಶ್ರೀ ಚೈತನ್ಯ ಟೆಕ್ನೋ ಶಾಲೆಯ ವಿದ್ಯಾರ್ಥಿಗಳು ಈ ವರ್ಷದ ಇಂಡಿಯನ್ ನ್ಯಾಷನಲ್ ಟ್ಯಾಲೆಂಟ್ ಸರ್ಚ್ ಒಲಿಂಪಿಯಾಡ್ (INTSO) ಪರೀಕ್ಷೆಯಲ್ಲಿ ಅತ್ಯುತ್ತಮ ಸಾಧನೆ ಮಾಡುವ ಮೂಲಕ ಶಾಲೆಯ ಕೀರ್ತಿ ಪತಾಕೆಯನ್ನು ಮತ್ತಷ್ಟು ಎತ್ತರಕ್ಕೆ ಏರಿಸಿದ್ದಾರೆ. ಕಳೆದ ನಾಲ್ಕು ವರ್ಷಗಳಿಂದಲೂ ಈ ಪ್ರತಿಷ್ಠಿತ ಸ್ಪರ್ಧೆಯಲ್ಲಿ ನಿರಂತರವಾಗಿ ಲ್ಯಾಪ್‌ಟಾಪ್ ಹಾಗೂ ಟ್ಯಾಬ್‌ಗಳಂತಹ ಆಕರ್ಷಕ ಬಹುಮಾನಗಳನ್ನು ಗೆಲ್ಲುತ್ತಾ ಬಂದಿರುವ ಶಾಲೆಯ ಪರಂಪರೆಯನ್ನು ಈ ಬಾರಿಯೂ ವಿದ್ಯಾರ್ಥಿಗಳು ಯಶಸ್ವಿಯಾಗಿ ಮುಂದುವರಿಸಿದ್ದಾರೆ. ಪ್ರಸಕ್ತ ಸಾಲಿನಲ್ಲಿ 4ನೇ ತರಗತಿಯ ವಿದ್ಯಾರ್ಥಿನಿ ಲಹರಿ ಅಮೀನ್ ಅವರು ಟ್ಯಾಬ್ ಬಹುಮಾನಕ್ಕೆ ಭಾಜನರಾಗಿದ್ದರೆ, 6ನೇ ತರಗತಿಯ ವಿದ್ಯಾರ್ಥಿ ಅನೀಶ್ ಶಂಕರ್ ಮಥೂರ್ ಅವರು ಅಮೋಘ ಸಾಧನೆಯೊಂದಿಗೆ ಲ್ಯಾಪ್‌ಟಾಪ್ ಬಹುಮಾನವನ್ನು ತಮ್ಮದಾಗಿಸಿಕೊಂಡಿದ್ದಾರೆ.

 

 

ವಿದ್ಯಾರ್ಥಿಗಳ ಈ ಗಮನಾರ್ಹ ಸಾಧನೆಯನ್ನು ಶಾಲೆಯ ವ್ಯವಸ್ಥಾಪಕ ಮಂಡಳಿ, ಪ್ರಾಂಶುಪಾಲರು ಹಾಗೂ ಶಿಕ್ಷಕ ವೃಂದದವರು ಮುಕ್ತಕಂಠದಿಂದ ಶ್ಲಾಘಿಸಿದ್ದು, ವಿಜೇತ ವಿದ್ಯಾರ್ಥಿಗಳಿಗೆ ಅಭಿನಂದನೆ ಸಲ್ಲಿಸುವುದರ ಜೊತೆಗೆ ಅವರ ಮುಂದಿನ ಶೈಕ್ಷಣಿಕ ಜೀವನವು ಇನ್ನಷ್ಟು ಯಶಸ್ಸಿನಿಂದ ಕೂಡಿರಲಿ ಎಂದು ಶುಭ ಹಾರೈಸಿದ್ದಾರೆ.