मौसम क्रिकेट ऑपरेशन सिंदूर क्रिकेट स्पोर्ट्स बॉलीवुड जॉब - एजुकेशन बिजनेस लाइफस्टाइल देश विदेश राशिफल आध्यात्मिक अन्य

ಮಲೆನಾಡಲ್ಲಿ ಭಾರೀ ಗಾಳಿ-ಮಳೆ ಅಬ್ಬರ ಚಿಕ್ಕಮಗಳೂರು-ಬಾಳೆಹೊನ್ನೂರು ಮಾರ್ಗ ಸಂಪೂರ್ಣ ಬಂದ್

ಚಿಕ್ಕಮಗಳೂರು: ಕಾಫಿನಾಡಿನಲ್ಲಿ ಅಕಾಲಿಕ ಮಳೆ ಅಬ್ಬರಿಸಿದೆ. ಬೇಸಿಗೆ ಕಾಲದಲ್ಲೇ ಸುರಿದ ಭಾರೀ ಗಾಳಿ-ಮಳೆಯಿಂದ ದೊಡ್ಡ ಮಟ್ಟದ ಅನಾಹುತ ಸಂಭವಿಸಿದೆ.

ಚಿಕ್ಕಮಗಳೂರು ತಾಲೂಕಿನ ಆಲ್ದೂರು ಗ್ರಾಮದ ಬಳಿ ಬಿರುಗಾಳಿಗೆ 20ಕ್ಕೂ ಹೆಚ್ಚು ವಿದ್ಯುತ್ ಕಂಬಗಳು ಧರೆಗುರುಳಿವೆ. ಒಂದರ ಹಿಂದೆ ಒಂದರಂತೆ ರಾಜ್ಯ ಹೆದ್ದಾರಿಯಲ್ಲೇ ವಿದ್ಯುತ್ ಕಂಬಗಳು ಕುಸಿದು ಬಿದ್ದ ಪರಿಣಾಮ, ಚಿಕ್ಕಮಗಳೂರಿನಿಂದ ಬಾಳೆಹೊನ್ನೂರಿಗೆ ಸಾಗುವ ಮುಖ್ಯ ವಿದ್ಯುತ್ ಸಂಪರ್ಕ ಸಂಪೂರ್ಣ ಸ್ಥಗಿತಗೊಂಡಿದೆ.

ಆಲ್ದೂರು ಭಾಗದಲ್ಲಿ ಕಂಬಗಳು ಮುರಿದ ಕಾರಣ, ಮಲೆನಾಡಿನ ಹಲವೆಡೆ ಕತ್ತಲೆ ಆವರಿಸಿದೆ. ಚಿಕ್ಕಮಗಳೂರು–ಬಾಳೆಹೊನ್ನೂರು ಮಾರ್ಗದಲ್ಲಿರುವ ಹತ್ತಾರು ಹಳ್ಳಿಗಳು ವಿದ್ಯುತ್ ಇಲ್ಲದೆ ಸಂಕಷ್ಟ ಅನುಭವಿಸುತ್ತಿವೆ. ಸುಮಾರು 60 ಕಿಲೋಮೀಟರ್ ವ್ಯಾಪ್ತಿಯ ಈ ಮಾರ್ಗದ ಗ್ರಾಮಗಳಲ್ಲಿ ಜನರು ಕತ್ತಲಲ್ಲಿ ರಾತ್ರಿ ಕಳೆಯುವಂತಾಗಿದೆ.

ಭಾರೀ ಗಾಳಿ-ಮಳೆಯ ಪರಿಣಾಮವಾಗಿ ವಿದ್ಯುತ್ ಇಲಾಖೆ ಸಿಬ್ಬಂದಿ ದುರಸ್ತಿ ಕಾರ್ಯಕ್ಕೆ ಮುಂದಾಗಿದ್ದರೂ, ಹವಾಮಾನ ವ್ಯತ್ಯಯದಿಂದ ಕಾರ್ಯಾಚರಣೆ ನಿಧಾನಗತಿಯಲ್ಲಿದೆ. ಶೀಘ್ರದಲ್ಲಿ ವಿದ್ಯುತ್ ಸರಬರಾಜು ಪುನಃಸ್ಥಾಪನೆ ಮಾಡುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

ಮಲೆನಾಡು ಭಾಗದಲ್ಲಿ ವರುಣನ ಆರ್ಭಟ – ಅಸ್ತವ್ಯಸ್ತಗೊಂಡ ಜನಜೀವನ

 

​ಚಿಕ್ಕಮಗಳೂರು: ಕಾಫಿನಾಡ ಮಲೆನಾಡು ಭಾಗದಲ್ಲಿ ಕಳೆದ ಕೆಲವು ದಿನಗಳಿಂದ ಹವಾಮಾನದ ಏರುಪೇರು ಮುಂದುವರಿದಿದ್ದು, ಇಂದು ಸಂಜೆ ಸುರಿದ ಧಾರಾಕಾರ ಮಳೆಗೆ ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ಹಗಲಿನಲ್ಲಿ ಸುಡುತ್ತಿರುವ ಭಾರೀ ಬಿಸಿಲಿಗೆ ತತ್ತರಿಸಿದ್ದ ಜನತೆಗೆ ಸಂಜೆಯ ಮಳೆ ತಂಪು ನೀಡಿದರೂ, ಗಾಳಿ-ಮಳೆಯ ರೌದ್ರಾವತಾರ ಮಲೆನಾಡಿಗರನ್ನು ಕಂಗಾಲಾಗುವಂತೆ ಮಾಡಿದೆ.

​ಆಲಿಕಲ್ಲು ಮಳೆಯ ಆರ್ಭಟ:

ಜಿಲ್ಲೆಯ ಕೊಟ್ಟಿಗೆಹಾರ, ಬಣಕಲ್, ಆಲ್ದೂರು ಮತ್ತು ಮತ್ತಿಕಟ್ಟೆ ಸೇರಿದಂತೆ ಸುತ್ತಮುತ್ತಲ ಪ್ರದೇಶಗಳಲ್ಲಿ ಗುಡುಗು, ಸಿಡಿಲು ಹಾಗೂ ರಣಭೀಕರ ಗಾಳಿಯೊಂದಿಗೆ ಮಳೆ ಸುರಿದಿದೆ. ವಿಶೇಷವಾಗಿ ಭಾರೀ ಗಾತ್ರದ ಆಲಿಕಲ್ಲುಗಳು ಬಿದ್ದಿದ್ದು, ಹಠಾತ್ ಮಳೆಯಿಂದಾಗಿ ರಸ್ತೆ ಬದಿಯ ವ್ಯಾಪಾರಿಗಳು ಹಾಗೂ ಸಾರ್ವಜನಿಕರು ಪರದಾಡುವಂತಾಯಿತು.

ಕಳೆದೊಂದು ವಾರದಿಂದ ಮಲೆನಾಡು ಭಾಗದಲ್ಲಿ ಆಗಾಗ್ಗೆ ಮಳೆ ಸುರಿಯುತ್ತಿರುವುದು ಕಾಫಿ ಮತ್ತು ಅಡಿಕೆ ಬೆಳೆಗಾರರಲ್ಲಿ ಆಶಾಭಾವನೆ ಮೂಡಿಸಿದೆ. ಬೇಸಿಗೆಯ ಬಿಸಿಲಿಗೆ ತತ್ತರಿಸಿ ಗಿಡಗಳಿಗೆ ನೀರು ಹಾಯಿಸಲು ಪರದಾಡುತ್ತಿದ್ದ ಬೆಳೆಗಾರರಿಗೆ ಈ ಮಳೆ ವರದಾನವಾಗಿ ಪರಿಣಮಿಸಿದ್ದು, ಕೃಷಿಕರ ಮೊಗದಲ್ಲಿ ಮಂದಹಾಸ ಮೂಡಿದೆ.

 

ಬಿ.ಹೆಚ್. ಕೈಮರ ಬಳಿ ಭೀಕರ ಅಪಘಾತ; ಪವಾಡಸದೃಶವಾಗಿ ಪಾರಾದ ನವದಂಪತಿ ಹಾಗೂ ಕುಟುಂಬ!

 

 

ಚಿಕ್ಕಮಗಳೂರು ಜಿಲ್ಲೆಯ ಎನ್.ಆರ್. ಪುರ ತಾಲ್ಲೂಕಿನ ಬಿ.ಹೆಚ್. ಕೈಮರ ಬಳಿ ಮದುವೆ ಮುಗಿಸಿ ಮರಳುತ್ತಿದ್ದ ಕುಟುಂಬವೊಂದು ಭೀಕರ ಅಪಘಾತದಿಂದ ಕೂದಲೆಳೆ ಅಂತರದಲ್ಲಿ ಪಾರಾಗಿದೆ. ಬಾಳೆಹೊನ್ನೂರಿನ ರಂಭಾಪುರಿ ಮಠದಲ್ಲಿ ಮದುವೆ ಮುಗಿಸಿಕೊಂಡು ದಾವಣಗೆರೆಗೆ ತೆರಳುತ್ತಿದ್ದ ಸಂದರ್ಭದಲ್ಲಿ ನಿಯಂತ್ರಣ ತಪ್ಪಿದ ಕಾರು ರಸ್ತೆ ಬದಿಯ ಅಂಗಡಿಯ ಕಟ್ಟೆ ಹಾಗೂ ಉಪ್ಪಿನ ಮೂಟೆಗಳಿಗೆ ಜೋರಾಗಿ ಡಿಕ್ಕಿ ಹೊಡೆದಿದೆ. ಅಪಘಾತದ ರಭಸಕ್ಕೆ ಕಾರು ವಿದ್ಯುತ್ ಮತ್ತು ಟೆಲಿಫೋನ್ ಕಂಬಗಳಿಗೂ ಅಪ್ಪಳಿಸಿ, ರಸ್ತೆಯಲ್ಲೇ ಪಲ್ಟಿಯಾಗಿ ಮತ್ತೆ ಬಾಳೆಹೊನ್ನೂರಿನ ಕಡೆಗೆ ಮುಖ ಮಾಡಿ ನಿಂತಿದೆ. ಸ್ವತಃ ಮದುಮಗನೇ ಚಾಲನೆ ಮಾಡುತ್ತಿದ್ದ ಈ ಕಾರಿನಲ್ಲಿ ನವವಧು ಸೇರಿದಂತೆ ಇಡೀ ಕುಟುಂಬ ಇತ್ತಾದರೂ, ಎಲ್ಲರೂ ಸಣ್ಣಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿರುವುದು ನೆರೆದಿದ್ದವರಲ್ಲಿ ಅಚ್ಚರಿ ಮೂಡಿಸಿದೆ.

ಮೂಡಿಗೆರೆ: ನಕಲಿ ದಾಖಲೆ ಸೃಷ್ಟಿಸಿ 9 ಎಕರೆ ಜಮೀನು ಅಕ್ರಮ ಮಂಜೂರು; ಸತ್ತ ನಿವೃತ್ತ ತಹಶೀಲ್ದಾರ್ ಸೇರಿ ಮೂವರ ವಿರುದ್ಧ ಕೇಸ್ ದಾಖಲು

ಮೂಡಿಗೆರೆ ತಾಲ್ಲೂಕಿನ ಗೋಣಿಬೀಡು ಹೋಬಳಿ ದೇವವೃಂದ ಗ್ರಾಮದಲ್ಲಿ ನಕಲಿ ದಾಖಲೆಗಳನ್ನು ಸೃಷ್ಟಿಸಿ ಸುಮಾರು 9 ಎಕರೆ ಸರ್ಕಾರಿ ಜಮೀನು ಅಕ್ರಮವಾಗಿ ಖಾಸಗಿ ವ್ಯಕ್ತಿಗಳ ಹೆಸರಿಗೆ ಮಂಜೂರು ಮಾಡಿರುವ ಆರೋಪ ಕೇಳಿಬಂದಿದೆ. ಈ ಸಂಬಂಧ ಮೂಡಿಗೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

2018-19ನೇ ಸಾಲಿನಲ್ಲಿ ನಡೆದಿದ್ದ ಈ ಅಕ್ರಮದಲ್ಲಿ, ಸರ್ವೇ ನಂ. 313ರ ಹೆಚ್.4 ಮತ್ತು ಹೆಚ್.5 ಭಾಗದಲ್ಲಿರುವ ಸರ್ಕಾರಿ ಭೂಮಿಯನ್ನು ನಿಯಮಾನುಸಾರ ಅರ್ಜಿ ಸಲ್ಲಿಸದೇ ನೇರವಾಗಿ ಖಾತೆ ಮಾಡಲಾಗಿದೆ ಎನ್ನಲಾಗಿದೆ. ಇನ್ನೊಂದು ಕಡತದ ಸಾಗುವಳಿ ಚೀಟಿಯನ್ನು ಅಪ್‌ಲೋಡ್ ಮಾಡಿ ದಾಖಲೆಗಳನ್ನು ತಿರುಚಿರುವುದಾಗಿ ತನಿಖೆಯಲ್ಲಿ ತಿಳಿದುಬಂದಿದೆ.

ಈ ಪ್ರಕರಣದಲ್ಲಿ ನಿವೃತ್ತ ತಹಶೀಲ್ದಾರ್ ಸೇರಿದಂತೆ ಮೂವರು ಅಧಿಕಾರಿಗಳ ವಿರುದ್ಧ ಪ್ರಕರಣ ದಾಖಲಾಗಿದೆ. ನಾಲ್ವರಲ್ಲಿ ಒಬ್ಬರು ಮೃತಪಟ್ಟಿದ್ದು, ಉಳಿದ ಮೂವರು ನಿವೃತ್ತರಾಗಿದ್ದಾರೆ ಎಂದು ತಿಳಿದುಬಂದಿದೆ.

ನಿಕೇಶ್ ಪೆರೇರಾ ಮತ್ತು ಅನೀಶ್ ಪೆರೇರಾ ಎಂಬುವರಿಗೆ ಈ ಜಮೀನು ಮಂಜೂರು ಮಾಡಲಾಗಿದೆ ಎಂಬ ಆರೋಪವೂ ಇದೆ. ಕರ್ನಾಟಕ ಭೂ ಕಂದಾಯ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಮುಂದಾಗಿದೆ.

ತಹಶೀಲ್ದಾರ್ ಅಶ್ವಿನಿ ಅವರು ಈ ಕುರಿತು ದೂರು ನೀಡಿ ತನಿಖೆಗೆ ಆದೇಶ ನೀಡಿದ್ದಾರೆ.

ಬಸ್ ಅಡ್ಡಗಟ್ಟಿ ಕುಡುಕರ ಅಟ್ಟಹಾಸ: ಮಧ್ಯರಾತ್ರಿ ರಸ್ತೆ ಮಧ್ಯೆ ಆಟೋ ಚಾಲಕರ ಸೆಲ್ಫಿ ರೌಡಿಸಂ!

ಚಿಕ್ಕಮಗಳೂರು: ಕಾಫಿನಾಡಿನ ಜನದಟ್ಟಣೆಯ ರಸ್ತೆಯಲ್ಲಿ ಕಳೆದ ರಾತ್ರಿ ಕುಡುಕರ ಕಿಡಿಗೇಡಿತನ ಮಿತಿಮೀರಿದ್ದು, ಸರ್ಕಾರಿ ಬಸ್ಸನ್ನು ಅಡ್ಡಗಟ್ಟಿ ಚಾಲಕನೊಂದಿಗೆ ರೌಡಿಸಂ ಮಾಡಿರುವ ಘಟನೆ ನಡೆದಿದೆ.

​ಕಡೂರಿನಿಂದ ಚಿಕ್ಕಮಗಳೂರು ನಗರಕ್ಕೆ ಬರುತ್ತಿದ್ದ ಸರ್ಕಾರಿ ಬಸ್ಸನ್ನು ಮಧ್ಯರಾತ್ರಿ ಸುಮಾರು 12 ಗಂಟೆಯ ವೇಳೆಗೆ ನಗರದ ಟೆಂಟರ್ ಚಿಕನ್ ಬಳಿ ಕಿಡಿಗೇಡಿಗಳು ತಡೆದಿದ್ದಾರೆ. ಕುಡಿದ ಮತ್ತಿನಲ್ಲಿದ್ದ ಆಟೋ ಚಾಲಕರು, ರಸ್ತೆಯ ಮಧ್ಯದಲ್ಲೇ ತಮ್ಮ ಆಟೋವನ್ನು ನಿಲ್ಲಿಸಿ ಬಸ್ ಮುಂದೆ ಅಡ್ಡಾದಿಡ್ಡಿಯಾಗಿ ವರ್ತಿಸಿದ್ದಾರೆ.

​ಸೆಲ್ಫಿ ಕ್ರೇಜ್: ಬಸ್ಸನ್ನು ಅಡ್ಡಗಟ್ಟಿದ್ದಲ್ಲದೆ, ಬಸ್ಸಿನ ಮುಂದೆ ನಿಂತು ಅಟ್ಟಹಾಸದಿಂದ ಸೆಲ್ಫಿ ಕ್ಲಿಕ್ಕಿಸಿಕೊಂಡಿದ್ದಾರೆ.

​ ದಾರಿ ಬಿಡುವಂತೆ ಬಸ್ ಚಾಲಕ ಎಷ್ಟು ಮನವಿ ಮಾಡಿದರೂ ಕೇಳದ ಕಿಡಿಗೇಡಿಗಳು, ಏಕವಚನದಲ್ಲಿ ಕೂಗಾಡುತ್ತಾ ರೌಡಿಸಂ ಪ್ರದರ್ಶಿಸಿದ್ದಾರೆ.

​ಕುಡುಕರ ಈ ಎಲ್ಲಾ ಕೃತ್ಯಗಳನ್ನು ಬಸ್ಸಿನಲ್ಲಿದ್ದ ಪ್ರಯಾಣಿಕರು ತಮ್ಮ ಮೊಬೈಲ್ ಫೋನ್‌ಗಳಲ್ಲಿ ಸೆರೆಹಿಡಿದಿದ್ದಾರೆ.

​”ಮಧ್ಯರಾತ್ರಿ ಹೊತ್ತಿನಲ್ಲಿ ಸಾರ್ವಜನಿಕ ಸಾರಿಗೆಗೆ ಅಡ್ಡಿಪಡಿಸಿ, ಪ್ರಯಾಣಿಕರಲ್ಲಿ ಭೀತಿ ಹುಟ್ಟಿಸುವ ಇಂತಹ ಕಿಡಿಗೇಡಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು,” ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

​ಈ ಘಟನೆಯು ಚಿಕ್ಕಮಗಳೂರು ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ವಿಡಿಯೋ ಸಾಕ್ಷ್ಯಗಳ ಆಧಾರದ ಮೇಲೆ ಕಿಡಿಗೇಡಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ. ಮಧ್ಯರಾತ್ರಿಯಲ್ಲಿ ಅರಾಜಕತೆ ಸೃಷ್ಟಿಸುವ ಇಂತಹ ವ್ಯಕ್ತಿಗಳಿಗೆ ಪೊಲೀಸರು ಬಿಸಿ ಮುಟ್ಟಿಸಬೇಕಿದೆ.

ಕಾಫಿನಾಡಿನ ಬೃಂದಾ ರಾಜ್ಯಕ್ಕೆ ಟಾಪರ್: ಸೆಂಟ್ ಮೇರಿಸ್ ಶಾಲೆಗೆ ಐತಿಹಾಸಿಕ ಕೀರ್ತಿ

ಚಿಕ್ಕಮಗಳೂರು: ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ ಪ್ರಕಟಿಸಿರುವ ಎಸ್‌ಎಸ್‌ಎಲ್‌ಸಿ ಫಲಿತಾಂಶದಲ್ಲಿ ಜಿಲ್ಲೆಯ ವಿದ್ಯಾರ್ಥಿನಿ ಬೃಂದಾ ಅಪೂರ್ವ ಸಾಧನೆ ಮಾಡಿದ್ದಾರೆ. ಸೆಂಟ್ ಮೇರಿಸ್ ಶಾಲೆಯ ವಿದ್ಯಾರ್ಥಿನಿಯಾಗಿರುವ ಅವರು ಒಟ್ಟು 625 ಅಂಕಗಳಿಗೆ 625 ಅಂಕಗಳನ್ನು ಪಡೆದು ರಾಜ್ಯ ಮಟ್ಟದಲ್ಲಿ ಅಗ್ರಸ್ಥಾನದಲ್ಲಿದ್ದಾರೆ.
ಬೃಂದಾ ಅವರು ಮೊದಲಿನಿಂದಲೇ ಓದಿನ ಬಗ್ಗೆ ಅಪಾರ ಆಸಕ್ತಿ ಹೊಂದಿದ್ದು, ಶಿಕ್ಷಕರ ಮಾರ್ಗದರ್ಶನ ಹಾಗೂ ಪೋಷಕರ ಬೆಂಬಲದೊಂದಿಗೆ ಈ ಅಸಾಧಾರಣ ಗುರಿಯನ್ನು ಸಾಧಿಸಿದ್ದಾರೆ. ವಿಷಯವಾರು ಶೇಕಡಾ 100 ಅಂಕಗಳನ್ನು ಗಳಿಸಿರುವುದು ಇವರ ಸಾಧನೆಗೆ ಮತ್ತಷ್ಟು ಮೆರುಗು ತಂದಿದೆ.
ಫಲಿತಾಂಶ ಪ್ರಕಟವಾದ ತಕ್ಷಣವೇ ಸೆಂಟ್ ಮೇರಿಸ್ ಶಾಲೆಯಲ್ಲಿ ಸಂಭ್ರಮದ ವಾತಾವರಣ ನಿರ್ಮಾಣವಾಗಿದ್ದು, ಶಿಕ್ಷಕರು ಮತ್ತು ಪೋಷಕರು ಪರಸ್ಪರ ಸಿಹಿ ಹಂಚಿಕೊಂಡು ಸಂಭ್ರಮಾಚರಣೆ ನಡೆಸಿದರು.
ಬೃಂದಾ ಅವರ ಸಾಧನೆ ಜಿಲ್ಲೆಯ ಶೈಕ್ಷಣಿಕ ಇತಿಹಾಸದಲ್ಲಿ ಸುವರ್ಣ ಅಕ್ಷರಗಳಲ್ಲಿ ದಾಖಲಾಗಿದ್ದು, ಇತರ ವಿದ್ಯಾರ್ಥಿಗಳಿಗೆ ದೊಡ್ಡ ಪ್ರೇರಣೆಯಾಗಿದೆ. ಕಾಫಿನಾಡಿನ ಜನತೆ ಸಾಮಾಜಿಕ ಜಾಲತಾಣಗಳ ಮೂಲಕ ಅಭಿನಂದನೆಗಳ ಸುರಿಮಳೆಯನ್ನೇ ಹರಿಸುತ್ತಿದ್ದಾರೆ.

ಮೂಗುತಿ ಬಿಚ್ಚಲು ಸಾಧ್ಯವಾಗದೆ ಪರೀಕ್ಷಾರ್ಥಿಗಳ ಹೈರಾಣು; ಸಿಬ್ಬಂದಿಯಿಂದ ಮೂಗಿಗೆ ಟೇಪ್

 

 

ರಾಜ್ಯಾದ್ಯಂತ ಇಂದಿನಿಂದ ಸಿಇಟಿ ಪರೀಕ್ಷೆಗಳು ಆರಂಭವಾಗಿದ್ದು ಪರೀಕ್ಷಾ ಅಕ್ರಮ ತಡೆಯಲು ಲೋಹದ ಆಭರಣಗಳಿಗೆ ಕಟ್ಟುನಿಟ್ಟಿನ ನಿಷೇಧವಿದ್ದ ಕಾರಣ, ಮೂಗುತಿ ಧರಿಸಿದ್ದ ನೂರಾರು ವಿದ್ಯಾರ್ಥಿನಿಯರನ್ನು ತಪಾಸಣೆ ವೇಳೆ ಚಿಕ್ಕಮಗಳೂರಿನ ಎಂಇಎಸ್ ಕಾಲೇಜಿನಲ್ಲಿ ತಡೆಹಿಡಿಯಲಾಯಿತು. ಆಭರಣಗಳನ್ನು ಬಿಚ್ಚಲು ಸಾಧ್ಯವಾಗದ ಅನಿವಾರ್ಯ ಪರಿಸ್ಥಿತಿ ನಿರ್ಮಾಣವಾದಾಗ, ಪರೀಕ್ಷಾ ಸಿಬ್ಬಂದಿಯೇ ವಿದ್ಯಾರ್ಥಿನಿಯರ ಮೂಗಿನ ಮೇಲೆ ಗಮ್ ಟೇಪ್ ಅಂಟಿಸಿ ಪರೀಕ್ಷಾ ಕೊಠಡಿಯೊಳಗೆ ಕಳುಹಿಸಿದ ವಿಚಿತ್ರ ಘಟನೆ ನಡೆದಿದೆ. ನಿಯಮಗಳ ಕಟ್ಟುನಿಟ್ಟಿನ ಪಾಲನೆಯ ಹೆಸರಿನಲ್ಲಿ ಏಕಾಏಕಿ ಮೂಗಿಗೆ ಟೇಪ್ ಅಂಟಿಸಿರುವುದು ಪೋಷಕರು ಮತ್ತು ಅಭ್ಯರ್ಥಿಗಳ ಅಸಮಾಧಾನಕ್ಕೆ ಕಾರಣವಾಯಿತು. ಪರೀಕ್ಷೆಯ ಒತ್ತಡದ ನಡುವೆ ಈ ವಿಚಿತ್ರ ಸನ್ನಿವೇಶವು ವಿದ್ಯಾರ್ಥಿನಿಯರಲ್ಲಿ ಕೆಲಕಾಲ ಗೊಂದಲವನ್ನು ಸೃಷ್ಟಿಸಿತ್ತು. ಪರೀಕ್ಷೆ ಸುಗಮವಾಗಿ ನಡೆಯಬೇಕು ಎಂಬ ಉದ್ದೇಶದಿಂದ ಸಿಬ್ಬಂದಿಗಳು ಈ ಕ್ರಮಕ್ಕೆ ಮುಂದಾದರೂ, ಇದು ಟೀಕೆಗೆ ಗುರಿಯಾಗಿದೆ. ಅಂತಿಮವಾಗಿ ಯಾವುದೇ ಅಹಿತಕರ ಘಟನೆ ನಡೆಯದೆ ಪರೀಕ್ಷೆಯು ಮುಂದುವರಿಯಿತು.

ಮೂಡಿಗೆರೆ: ವನ್ಯಜೀವಿ ಬೇಟೆಗಾರರ ಮೇಲೆ ಅರಣ್ಯ ಇಲಾಖೆ ದಾಳಿ; ಇಬ್ಬರ ಬಂಧನ,

 

​ಮೂಡಿಗೆರೆ: ಅಕ್ರಮವಾಗಿ ವನ್ಯಜೀವಿಗಳನ್ನು ಬೇಟೆಯಾಡಿ ಸಾಗಿಸುತ್ತಿದ್ದ ಇಬ್ಬರು ಆರೋಪಿಗಳನ್ನು ಮೂಡಿಗೆರೆ ಪ್ರಾದೇಶಿಕ ಅರಣ್ಯ ಉಪವಿಭಾಗದ ಅಧಿಕಾರಿಗಳು ಸಿನಿಮೀಯ ರೀತಿಯಲ್ಲಿ ಬೆನ್ನಟ್ಟಿ ಬಂಧಿಸಿದ್ದಾರೆ. ಬಂಧಿತರಿಂದ ಮೂರು ಪುನುಗು ಬೆಕ್ಕುಗಳ ಶವ ಹಾಗೂ ಬೇಟೆಗೆ ಬಳಸಿದ್ದ ಮಾರಕಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ.

​ 22-04-2026ರಂದು ಜನ್ನಾಪುರದಿಂದ ಮೂಡಿಗೆರೆ ಕಡೆಗೆ ಬೊಲೆರೋ ಪಿಕ್‌ಅಪ್ ವಾಹನದಲ್ಲಿ ಕಾಡುಪ್ರಾಣಿಗಳ ಮಾಂಸ ಸಾಗಾಟವಾಗುತ್ತಿದೆ ಎಂಬ ಖಚಿತ ಮಾಹಿತಿ ಅರಣ್ಯ ಇಲಾಖೆಗೆ ಲಭಿಸಿತ್ತು. ಈ ಹಿನ್ನೆಲೆಯಲ್ಲಿ ಗೋಣಬೀಡು ಶಾಖೆಯ ಅರಣ್ಯ ಸಿಬ್ಬಂದಿ ಹಾಲೂರು ಜೋಗಣ್ಣನಕೆರೆ ಬಸ್‌ಸ್ಟಾಂಡ್ ಬಳಿ ಹೊಂಚು ಹಾಕಿದ್ದರು.

​ಶಂಕಾಸ್ಪದವಾಗಿ ಬಂದ ಮಹೀಂದ್ರ ಬೊಲೆರೋ ಮ್ಯಾಕ್ಸ್ ಟ್ರಕ್ (KA-46-6330) ಅನ್ನು ತಪಾಸಣೆಗಾಗಿ ನಿಲ್ಲಿಸಲು ಸೂಚಿಸಿದಾಗ, ಆರೋಪಿಗಳು ವಾಹನ ನಿಲ್ಲಿಸದೆ ಪರಾರಿಯಾಗಲು ಯತ್ನಿಸಿದ್ದಾರೆ. ತಕ್ಷಣ ಎಚ್ಚೆತ್ತ ಅಧಿಕಾರಿಗಳು ವಾಹನವನ್ನು ಬೆನ್ನಟ್ಟಿ ತಡೆಹಿಡಿದು ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ.

​ಬಂಧಿತರು: ಎ.ಜೆ.ನಂದನ್ (38), ಅಬಚೂರು ಗ್ರಾಮ ಮತ್ತು ಹೆಚ್.ಜಿ.ಆದರ್ಶ (33), ಹಾಲೂರು ಗ್ರಾಮ.

​ವಶಪಡಿಸಿಕೊಂಡ ಸೊತ್ತು: 03 ಸತ್ತ ಪುನುಗು ಬೆಕ್ಕುಗಳು, 02 ಒಂಟಿನಳಿಕೆ ಬಂದೂಕುಗಳು, 04 ಜೀವಂತ ಗುಂಡುಗಳು, 01 ಸರ್ಚ್ ಲೈಟ್, 02 ಮೊಬೈಲ್ ಫೋನ್‌ಗಳು ಹಾಗೂ ಕೃತ್ಯಕ್ಕೆ ಬಳಸಿದ ಬೊಲೆರೋ ವಾಹನ.

​ವಿಚಾರಣೆ ವೇಳೆ, ಆರೋಪಿಗಳು ಕಳಸಾಪುರ ಮತ್ತು ಮರ್ಲೆ ಗ್ರಾಮದ ಅರಣ್ಯ ಪ್ರದೇಶದಲ್ಲಿ ರಾತ್ರಿ ವೇಳೆ ಸರ್ಚ್ ಲೈಟ್ ಬಳಸಿ ಈ ಪ್ರಾಣಿಗಳನ್ನು ಬೇಟೆಯಾಡಿರುವುದಾಗಿ ಒಪ್ಪಿಕೊಂಡಿದ್ದಾರೆ. ಮಾಂಸದ ಉದ್ದೇಶಕ್ಕಾಗಿ ಈ ಬೇಟೆ ನಡೆದಿರುವುದು ತಿಳಿದುಬಂದಿದೆ.

​ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರೀತಮ್, ಚಿದಾನಂದ, ಕೃಷ್ಣಪ್ಪ ಹಾಗೂ ಬೇಟೆಗೆ ಬಂದೂಕು ನೀಡಿ ಸಹಕರಿಸಿದ ಹೆಚ್.ಜಿ.ಕರುಣಾಕರಮೂರ್ತಿ ಎಂಬುವವರು ತಲೆಮರೆಸಿಕೊಂಡಿದ್ದು, ಅರಣ್ಯ ಇಲಾಖೆ ಅಧಿಕಾರಿಗಳು ಅವರಿಗಾಗಿ ಶೋಧ ಮುಂದುವರಿಸಿದ್ದಾರೆ. ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ಕಾಡುಕೋಣಗಳ ಕಾಳಗಕ್ಕೆ ಕಾಟಿ ಬಲಿ: ಅರಣ್ಯ ಇಲಾಖೆಯ ಚಿಕಿತ್ಸೆ ಫಲಕಾರಿಯಾಗದೆ ಸಾವು

 

 

 

ಕಾಫಿನಾಡಿನ ಮಲೆನಾಡು ಭಾಗದಲ್ಲಿ ಕಾಡುಕೋಣಗಳ ಅಬ್ಬರ ಮಿತಿಮೀರುತ್ತಿದ್ದು, ಎರಡು ಕಾಡುಕೋಣಗಳ ನಡುವಿನ ಭೀಕರ ಕಾಳಗವೊಂದು ದುರಂತದಲ್ಲಿ ಅಂತ್ಯಗೊಂಡಿದೆ. ಎರಡು ಬಲಿಷ್ಠ ಕಾಟಿಗಳ ನಡುವೆ ನಡೆದ ಸಂಘರ್ಷದಲ್ಲಿ, ಒಂದು ಕಾಡುಕೋಣ ನಿಯಂತ್ರಣ ತಪ್ಪಿ ಸುಮಾರು 50 ಅಡಿ ಆಳದ ಪ್ರಪಾತಕ್ಕೆ ಬಿದ್ದಿದೆ. ಬಿದ್ದ ರಭಸಕ್ಕೆ ಕಾಟಿಯು ಗಂಭೀರವಾಗಿ ಗಾಯಗೊಂಡು ಸಾವು-ಬದುಕಿನ ನಡುವೆ ಹೋರಾಟ ನಡೆಸುತ್ತಿತ್ತು. ವಿಷಯ ತಿಳಿಯುತ್ತಿದ್ದಂತೆಯೇ ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ, ತಜ್ಞ ವೈದ್ಯರ ಮೂಲಕ ತುರ್ತು ಚಿಕಿತ್ಸೆ ನೀಡುವ ಪ್ರಯತ್ನ ಮಾಡಿದರಾದರೂ, ತೀವ್ರವಾಗಿ ನರಳುತ್ತಿದ್ದ ಕಾಡುಕೋಣ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದೆ.

​ಮಲೆನಾಡು ಭಾಗದಲ್ಲಿ ಕಾಡುಕೋಣಗಳ ಸಂಖ್ಯೆ ಗಣನೀಯವಾಗಿ ಹೆಚ್ಚಾಗುತ್ತಿರುವುದು ಜನರಲ್ಲಿ ತೀವ್ರ ಆತಂಕ ಮೂಡಿಸಿದೆ. ಕೇವಲ ಮೂರು ದಿನಗಳ ಹಿಂದಷ್ಟೇ ಕಾಡುಕೋಣದ ದಾಳಿಗೆ ಸಿಲುಕಿ ಯುವಕನೊಬ್ಬ ಪ್ರಾಣ ಕಳೆದುಕೊಂಡ ಘಟನೆ ಹಸಿರಾಗಿರುವಾಗಲೇ ಈ ಅನಾಹುತ ಸಂಭವಿಸಿದೆ. ನಿರಂತರವಾಗಿ ನಡೆಯುತ್ತಿರುವ ಕಾಟಿಗಳ ಹಾವಳಿಯಿಂದ ರೈತರು ಮತ್ತು ತೋಟದ ಮಾಲೀಕರು ಹೈರಾಣಾಗಿದ್ದು, ಸರ್ಕಾರ ಮತ್ತು ಅರಣ್ಯ ಇಲಾಖೆ ತಕ್ಷಣವೇ ಎಚ್ಚೆತ್ತುಕೊಂಡು ಇವುಗಳ ನಿಯಂತ್ರಣಕ್ಕೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.

ಅಯ್ಯನಕೆರೆಯಲ್ಲಿ ಈಜಲು ಹೋದ 13 ವರ್ಷದ ಬಾಲಕ ಜಲಸಮಾಧಿ!

 

 

ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಐತಿಹಾಸಿಕ ಅಯ್ಯನಕೆರೆಯಲ್ಲಿ ಘೋರ ದುರಂತವೊಂದು ಸಂಭವಿಸಿದ್ದು, ಈಜಲು ತೆರಳಿದ್ದ 13 ವರ್ಷದ ಬಾಲಕ ನೀರಿನಲ್ಲಿ ಮುಳುಗಿ ದಾರುಣವಾಗಿ ಸಾವನ್ನಪ್ಪಿದ್ದಾನೆ. ಚಿಕ್ಕಮಗಳೂರು ನಗರದ ದಂಟರಮಕ್ಕಿ ನಿವಾಸಿಯಾದ ಪೃಥ್ವಿರಾಜ್ ಎಂಬಾತ ಮೃತಪಟ್ಟ ದುರ್ದೈವಿಯಾಗಿದ್ದು, ಈತ ತನ್ನ ದೊಡ್ಡಮ್ಮ ಹಾಗೂ ನಾಲ್ವರು ಸ್ನೇಹಿತರೊಂದಿಗೆ ಕೆರೆಗೆ ಈಜಲು ಹೋಗಿದ್ದ ವೇಳೆ ಈ ಅವಘಡ ಸಂಭವಿಸಿದೆ. ಸ್ನೇಹಿತರೊಂದಿಗೆ ಸೇರಿ ಈಜುತ್ತಿದ್ದ ಪೃಥ್ವಿರಾಜ್ ಆಕಸ್ಮಿಕವಾಗಿ ನೀರಿನ ಸೆಳೆತಕ್ಕೆ ಸಿಲುಕಿ ಮುಳುಗಿದ್ದಾನೆ ಈ ವೇಳೆ ಉಳಿದವರು ರಕ್ಷಿಸಲು ಪ್ರಯತ್ನಿಸಿದರೂ ಫಲಕಾರಿಯಾಗಲಿಲ್ಲ. ಘಟನೆಯ ಬಗ್ಗೆ ಮಾಹಿತಿ ಲಭಿಸುತ್ತಿದ್ದಂತೆಯೇ ಸಖರಾಯಪಟ್ಟಣ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ.