मौसम क्रिकेट ऑपरेशन सिंदूर क्रिकेट स्पोर्ट्स बॉलीवुड जॉब - एजुकेशन बिजनेस लाइफस्टाइल देश विदेश राशिफल आध्यात्मिक अन्य

ಕಾಫಿನಾಡಿನ ಯುವಕನಿಗೆ ಜಾಗತಿಕ ಗೌರವ: ಚೀನಾದಲ್ಲಿ ನಡೆಯುವ ವಿಜ್ಞಾನ, ತಂತ್ರಜ್ಞಾನ ತರಬೇತಿಗೆ ಅವಿನಾಶ್ ಆಯ್ಕೆ

 

 

ಚಿಕ್ಕಮಗಳೂರು ಜಿಲ್ಲೆಯ ಯುವ ಪ್ರತಿಭೆಯೊಬ್ಬರು ಜಾಗತಿಕ ಮಟ್ಟದಲ್ಲಿ ಸಾಧನೆ ಮಾಡಿದ್ದು, ಚೀನಾದ ಬೀಜಿಂಗ್‌ನಲ್ಲಿ ನಡೆಯಲಿರುವ ಪ್ರತಿಷ್ಠಿತ ‘BRICS+’ ವಿಜ್ಞಾನ ಮತ್ತು ತಂತ್ರಜ್ಞಾನ ತರಬೇತಿ ಕಾರ್ಯಕ್ರಮಕ್ಕೆ ಆಯ್ಕೆಯಾಗಿದ್ದಾರೆ. ತಾಲೂಕಿನ ಯಲಗುಡಿಗೆ ಗ್ರಾಮದ ಶ್ರೀಮತಿ ವನಮಾಲ ಮತ್ತು ಶ್ರೀ ಮೃತ್ಯುಂಜಯ ದಂಪತಿಯ ಹಿರಿಯ ಪುತ್ರ ಬಿ.ಎಂ. ಅವಿನಾಶ್ ಈ ಅಪರೂಪದ ಗೌರವಕ್ಕೆ ಪಾತ್ರರಾದ ಯುವಕ. ಪ್ರಸ್ತುತ ದುಬೈನಲ್ಲಿ ಉದ್ಯೋಗಿಯಾಗಿರುವ ಇವರು, ಜಾಗತಿಕ ವೇದಿಕೆಯಲ್ಲಿ ಕಾಫಿನಾಡಿನ ಹೆಸರನ್ನು ಉನ್ನತ ಮಟ್ಟಕ್ಕೇರಿಸಿದ್ದಾರೆ.

ಬೀಜಿಂಗ್‌ನಲ್ಲಿ ಜೂನ್ 3ರಿಂದ ಜೂನ್ 17ರವರೆಗೆ “STI ಪಾರ್ಕ್ ಆಡಳಿತ ಮತ್ತು ಕ್ರಾಸ್-ಬಾರ್ಡರ್ ಇನ್ನೋವೇಶನ್ ಸಹಕಾರ” ಎಂಬ ವಿಶೇಷ ವಿಷಯದ ಅಡಿಯಲ್ಲಿ ಈ ಉನ್ನತ ಮಟ್ಟದ ತರಬೇತಿ ಕಾರ್ಯಕ್ರಮ ಆಯೋಜನೆಗೊಂಡಿದೆ. BRICS ಮತ್ತು “BRICS+” ರಾಷ್ಟ್ರಗಳಲ್ಲಿ ವಿಜ್ಞಾನ, ತಂತ್ರಜ್ಞಾನ ನೀತಿಗಳು ಹಾಗೂ ನಾವೀನ್ಯತೆ ಪರಿಸರ ವ್ಯವಸ್ಥೆಗಳ ಅಭಿವೃದ್ಧಿಗೆ ಪೂರಕವಾಗಿ ಈ ವೇದಿಕೆ ಕಾರ್ಯನಿರ್ವಹಿಸಲಿದೆ. ಪೀಪಲ್ಸ್ ರಿಪಬ್ಲಿಕ್ ಆಫ್ ಚೀನಾದ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯದ ಅಂತರರಾಷ್ಟ್ರೀಯ ಸಹಕಾರ ಇಲಾಖೆಯ ಬೆಂಬಲದೊಂದಿಗೆ, ಬೀಜಿಂಗ್ ಅಂತರಾಷ್ಟ್ರೀಯ ವಿನಿಮಯ ಸಂಘವು ಈ ಜಾಗತಿಕ ಕಾರ್ಯಕ್ರಮವನ್ನು ಆಯೋಜಿಸಿದೆ.

ನೀತಿ ವಿನ್ಯಾಸ, ಪಾರ್ಕ್ ಆಡಳಿತ ಮತ್ತು ಗಡಿಯಾಚೆಗಿನ ತಂತ್ರಜ್ಞಾನ ಸಹಯೋಗವನ್ನು ಬಲಪಡಿಸುವ ಪ್ರಮುಖ ಉದ್ದೇಶವನ್ನು ಈ ತರಬೇತಿ ಹೊಂದಿದೆ. ಇಂತಹ ಪ್ರಭಾವಿ ಮತ್ತು ಅಂತರರಾಷ್ಟ್ರೀಯ ಮಟ್ಟದ ವೇದಿಕೆಯಲ್ಲಿ ಚಿಕ್ಕಮಗಳೂರಿನ ಯಲಗುಡಿಗೆಯ ಯುವಕ ಭಾಗವಹಿಸುತ್ತಿರುವುದು ಇಡೀ ಜಿಲ್ಲೆಗೆ ಹಾಗೂ ಅವರ ಹೆತ್ತವರಿಗೆ ಅಪಾರ ಹೆಮ್ಮೆಯ ಸಂಗತಿಯಾಗಿದೆ.

ಭದ್ರಾ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಅಕ್ರಮ ಜೀಪ್ ಸಫಾರಿ: ಆನೆಗೆ ಕಾಟ ಕೊಟ್ಟ ಯುವಕರು 

 

 

 

ಚಿಕ್ಕಮಗಳೂರಿನ ಭದ್ರಾ ಹುಲಿ ಸಂರಕ್ಷಿತ ಪ್ರದೇಶದ ಹೆಬ್ಬೆ ವಲಯದಲ್ಲಿ ಅರಣ್ಯ ಇಲಾಖೆಯ ಕಣ್ಣೆದುರೇ ನಿಯಮಗಳನ್ನು ಗಾಳಿಗೆ ತೂರಿ ಅಕ್ರಮವಾಗಿ ಜೀಪ್ ಸಫಾರಿ ನಡೆಸಿರುವ ಗಂಭೀರ ಆರೋಪ ಕೇಳಿಬಂದಿದೆ. ಖಾಸಗಿ ತೆರೆದ ಜೀಪಿನಲ್ಲಿ ರಾಜಕೀಯ ಪ್ರಭಾವ ಬಳಸಿ ಹುಲಿ ಸಂರಕ್ಷಿತ ಪ್ರದೇಶದೊಳಗೆ ಅಕ್ರಮ ಪ್ರವೇಶ ಪಡೆದಿರುವ ಯುವಕರ ತಂಡವೊಂದು, ಕಾಡಿನಲ್ಲಿ ಮೋಜು-ಮಸ್ತಿ ಮಾಡುತ್ತಾ ರೀಲ್ಸ್ ಚಿತ್ರೀಕರಣ ನಡೆಸಿದೆ. ವನ್ಯಜೀವಿ ಸಂರಕ್ಷಣಾ ನಿಯಮಗಳನ್ನು ಸಂಪೂರ್ಣವಾಗಿ ಉಲ್ಲಂಘಿಸಿರುವ ಈ ಯುವಕರ ಗುಂಪು, ಕಾಡಿನಲ್ಲಿದ್ದ ಆನೆಗಳ ತೀರಾ ಸಮೀಪಕ್ಕೆ ತೆರಳಿ ಕೂಗಾಟ ಮತ್ತು ಕಿರುಚಾಟ ನಡೆಸಿ ಅವುಗಳನ್ನು ಬೆದರಿಸಿದೆ. ಈ ಬೇಜವಾಬ್ದಾರಿತನದ ಹುಚ್ಚಾಟದ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರವಾಗಿ ವೈರಲ್ ಆಗಿದೆ.

ಅರಣ್ಯ ಇಲಾಖೆಯ ತೀವ್ರ ನಿರ್ಲಕ್ಷ್ಯದಿಂದಾಗಿ ಯುವಕರ ಜೀವಕ್ಕೂ ಅಪಾಯ ತಂದೊಡ್ಡುವ ಹಾಗೂ ವನ್ಯಜೀವಿಗಳಿಗೆ ತೊಂದರೆ ಕೊಡುವ ಇಂತಹ ಘಟನೆ ನಡೆದಿದ್ದು, ಭದ್ರಾ ಟೈಗರ್ ರಿಸರ್ವ್‌ನ ಭದ್ರತೆಯ ಬಗ್ಗೆ ಸಾರ್ವಜನಿಕ ವಲಯದಲ್ಲಿ ದೊಡ್ಡ ಪ್ರಶ್ನೆಗಳು ಎದ್ದಿವೆ. ಅತಿ ಸೂಕ್ಷ್ಮ ಪ್ರದೇಶವಾದ ಹೆಬ್ಬೆ ವಲಯದಲ್ಲಿ ಅಕ್ರಮ ಪ್ರವೇಶಕ್ಕೆ ಅವಕಾಶ ಸಿಕ್ಕಿದ್ದು ಹೇಗೆ ಎಂದು ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಸದ್ಯ ವನ್ಯಜೀವಿಗಳಿಗೆ ಕಿರುಕುಳ ನೀಡಿ ನಿಯಮ ಉಲ್ಲಂಘಿಸಿರುವ ಯುವಕರ ನಡೆಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಪರಿಸರವಾದಿಗಳು, ತಕ್ಷಣವೇ ಅಕ್ರಮ ಸಫಾರಿಗೆ ಬಳಸಿದ ಜೀಪನ್ನು ವಶಕ್ಕೆ ಪಡೆದು, ಸಂಬಂಧಪಟ್ಟ ಯುವಕರ ವಿರುದ್ಧ ಕಠಿಣ ಪ್ರಕರಣ ದಾಖಲಿಸಿ ಕಾನೂನು ಕ್ರಮ ಜರುಗಿಸಬೇಕು ಎಂದು ಅರಣ್ಯ ಇಲಾಖೆಯನ್ನು ಒತ್ತಾಯಿಸಿದ್ದಾರೆ.

ಬೆಳ್ಳಿ ಮಾರಿದ ಹಣ ಕೊಡದೆ ಎಸ್ಕೇಪ್ ಆಗಿದ್ದ ಆರೋಪಿ ಬಂಧನ: 41 ಲಕ್ಷಕ್ಕೂ ಅಧಿಕ ನಗದು ವಶಪಡಿಸಿಕೊಂಡ ಖಾಕಿ

 

 

ಚಿಕ್ಕಮಗಳೂರು: ಬೆಳ್ಳಿ ಮಾರಾಟದ ಹೆಸರಿನಲ್ಲಿ ನಡೆದಿದ್ದ ಬರೋಬ್ಬರಿ 45 ಲಕ್ಷ ರೂಪಾಯಿ ವಂಚನೆ ಪ್ರಕರಣವನ್ನು ಭೇದಿಸುವಲ್ಲಿ ನಗರ ಪೊಲೀಸರು ಯಶಸ್ವಿಯಾಗಿದ್ದಾರೆ. ನಂಬಿಸಿ ಹಣ ದೋಚಿ ತಲೆಮರೆಸಿಕೊಂಡಿದ್ದ ಮುಖ್ಯ ಆರೋಪಿಯನ್ನು ಸಿನಿಮೀಯ ಶೈಲಿಯಲ್ಲಿ ಅರೆಸ್ಟ್ ಮಾಡಿರುವ ಖಾಕಿ ಪಡೆ, ಆತನಿಂದ 41.90 ಲಕ್ಷ ರೂಪಾಯಿ ನಗದನ್ನು ಜಪ್ತಿ ಮಾಡಿದೆ.

ಕಲ್ಯಾಣ ನಗರದ ನಿವಾಸಿ ರಮೇಶ್ ಎಂಬುವವರು ತಮಗೆ ಪರಿಚಯವಿದ್ದ ನಾಗರಾಜ್ ಮತ್ತು ಪ್ರಸಾದ್ ಎಂಬುವವರನ್ನು ನಂಬಿ ಮಾರಾಟಕ್ಕಾಗಿ ಬೆಳ್ಳಿ ನೀಡಿದ್ದರು. ಆದರೆ ಆ ಬೆಳ್ಳಿಯನ್ನು ಮಾರಿ ಬಂದ 45.20 ಲಕ್ಷ ರೂಪಾಯಿ ಹಣದೊಂದಿಗೆ ಆರೋಪಿಗಳು ಎಸ್ಕೇಪ್ ಆಗಿದ್ದರು. ಮೋಸ ಹೋದದ್ದನ್ನು ಅರಿತ ರಮೇಶ್ ತಕ್ಷಣವೇ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಪ್ರಕರಣದ ಗಂಭೀರತೆ ಅರಿತ ಜಿಲ್ಲಾ ಪೊಲೀಸ್ ಅಧೀಕ್ಷಕ ಜೀತೇಂದ್ರ ಕುಮಾರ್ ದಯಾಮ ಅವರು ಆರೋಪಿಗಳ ಬೇಟೆಗೆ ತಕ್ಷಣವೇ ವಿಶೇಷ ತಂಡವನ್ನು ರಚಿಸಿದ್ದರು.

ಹೆಚ್ಚುವರಿ ಪೊಲೀಸ್ ಅಧೀಕ್ಷಕ ಜಯಕುಮಾರ ಹಾಗೂ ಉಪಾಧೀಕ್ಷಕ ನಾಗರಾಜ್ ಅವರ ಮಾರ್ಗದರ್ಶನದಲ್ಲಿ ಅಖಾಡಕ್ಕಿಳಿದ ಇನ್ಸ್‌ಪೆಕ್ಟರ್ ಅಭಯ್ ಪ್ರಕಾಶ್ ಸೋಮನಾಳ್‌ ನೇತೃತ್ವದ ಟೀಮ್, ವೈಜ್ಞಾನಿಕ ಹಾಗೂ ತಾಂತ್ರಿಕ ಆಯಾಮಗಳಲ್ಲಿ ತನಿಖೆ ತೀವ್ರಗೊಳಿಸಿತ್ತು. ಪೊಲೀಸರ ಹದ್ದಿನ ಕಣ್ಣಿನ ಕಾರ್ಯಾಚರಣೆಗೆ ಕೊನೆಗೂ ಯಶಸ್ಸು ಸಿಕ್ಕಿದ್ದು, ಮೂಡಿಗೆರೆ ತಾಲೂಕಿನ ಬಣಕಲ್ ಕೋಡಳ್ಳಿಯ ನಿವಾಸಿ ನಾಗರಾಜ ಎಂಬಾತನನ್ನು ಕದ್ದುಕುಳಿತಿದ್ದ ಜಾಗದಲ್ಲೇ ದಸ್ತಗಿರಿ ಮಾಡಲಾಗಿದೆ. ಸದ್ಯ ಬಂಧಿತನಿಂದ ಸಿಂಹಪಾಲು ಹಣವನ್ನು ರಿಕವರಿ ಮಾಡಲಾಗಿದ್ದು, ತಲೆಮರೆಸಿಕೊಂಡಿರುವ ಮತ್ತೊಬ್ಬ ಆರೋಪಿಗಾಗಿ ತನಿಖೆ ಚುರುಕುಗೊಂಡಿದೆ. ಕೇವಲ ಕೆಲವೇ ದಿನಗಳಲ್ಲಿ ಪ್ರಕರಣದ ಬೆನ್ನುಹತ್ತಿ ಆರೋಪಿಯನ್ನು ಹಳೇ ಸ್ಯಾಂಪಲ್ ಸಮೇತ ಲಾಕ್ ಮಾಡಿದ ಇಡೀ ಕ್ರೈಂ ಟೀಮ್ ಕಾರ್ಯಕ್ಷಮತೆಗೆ ಎಸ್ಪಿ ಮೆಚ್ಚುಗೆ ವ್ಯಕ್ತಪಡಿಸಿದ್ದು, ಸೂಕ್ತ ಬಹುಮಾನವನ್ನೂ ಘೋಷಿಸಿದ್ದಾರೆ.

ಮುಂಗಾರುಪೂರ್ವ ಮಳೆಯ ಆರ್ಭಟ: ಬಸ್ ನಿಲ್ದಾಣದ ಬಳಿ ಸಿಡಿಲು ಅಪ್ಪಳಿಸಿ ದಂಪತಿಗೆ ಗಾಯ!

 

 

ಕಾಫಿನಾಡು ಚಿಕ್ಕಮಗಳೂರು ಜಿಲ್ಲೆಯಲ್ಲಿ ಮುಂಗಾರುಪೂರ್ವ ಮಳೆಯ ಅಬ್ಬರ ಜೋರಾಗಿದ್ದು, ಗುಡುಗು ಹಾಗೂ ಸಿಡಿಲಿನ ಆರ್ಭಟಕ್ಕೆ ದಂಪತಿ ಗಾಯಗೊಂಡಿರುವ ಆತಂಕಕಾರಿ ಘಟನೆ ನರಸಿಂಹರಾಜಪುರ ತಾಲೂಕಿನ ಸೀಗುವಾನಿ ಗ್ರಾಮದಲ್ಲಿ ಸಂಭವಿಸಿದೆ. ಮಂಜುನಾಥ ಮತ್ತು ಮಮತಾ ಎಂಬ ದಂಪತಿ ಎನ್.ಆರ್.ಪುರ ಪಟ್ಟಣದಿಂದ ತಮ್ಮ ಕೆಲಸ ಮುಗಿಸಿಕೊಂಡು ಮನೆಗೆ ಹಿಂತಿರುಗುತ್ತಿದ್ದಾಗ ಹಠಾತ್ ಆಗಿ ಜೋರಾದ ಮಳೆ ಸುರಿಯಲಾರಂಭಿಸಿದೆ. ಮಳೆಯಿಂದ ರಕ್ಷಣೆ ಪಡೆಯುವ ಸಲುವಾಗಿ ಅವರು ದಾರಿಯಲ್ಲಿದ್ದ ಸೀಗುವಾನಿ ಗ್ರಾಮದ ಬಸ್ ತಂಗುದಾಣದಲ್ಲಿ ಆಶ್ರಯ ಪಡೆದು ನಿಂತಿದ್ದರು.

ದಂಪತಿಗಳು ಬಸ್ ನಿಲ್ದಾಣದಲ್ಲಿ ನಿಂತಿದ್ದ ಸಂದರ್ಭದಲ್ಲಿಯೇ ಅದರ ಪಕ್ಕದಲ್ಲಿ ಭೀಕರವಾಗಿ ಸಿಡಿಲು ಅಪ್ಪಳಿಸಿದೆ. ಅದೃಷ್ಟವಶಾತ್ ಸಿಡಿಲು ನೇರವಾಗಿ ದಂಪತಿಗಳ ಮೇಲೆ ಬಡಿಯದ ಕಾರಣ ಅವರು ಕೂದಲೆಳೆಯ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಆದರೆ ಸಿಡಿಲು ಅಪ್ಪಳಿಸಿದ ಭೀಕರ ತೀವ್ರತೆಗೆ ಇಬ್ಬರಿಗೂ ಸಣ್ಣಪುಟ್ಟ ಗಾಯಗಳಾಗಿದ್ದು, ತೀವ್ರ ಆಘಾತಕ್ಕೆ ಒಳಗಾಗಿದ್ದಾರೆ. ಘಟನೆ ನಡೆದ ತಕ್ಷಣವೇ ಸ್ಥಳೀಯರ ನೆರವಿನೊಂದಿಗೆ ಗಾಯಾಳುಗಳನ್ನು ಎನ್.ಆರ್.ಪುರ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದು ಪ್ರಾಥಮಿಕ ಚಿಕಿತ್ಸೆ ಕೊಡಿಸಲಾಗಿದೆ. ಬಳಿಕ ಹೆಚ್ಚಿನ ಚಿಕಿತ್ಸೆ ಹಾಗೂ ತಪಾಸಣೆಗಾಗಿ ದಂಪತಿಗಳನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಮುಂದುವರಿಸಲಾಗಿದೆ.