ಮೂಡಿಗೆರೆ ತಾಲೂಕಿನ ಬಿಳಗುಳ ಗ್ರಾಮದ ನಿತಿನ್ ಕುವೆಲ್ಲೊ ಅವರು ಸಿವಿಲ್ ನ್ಯಾಯಾಧೀಶರಾಗಿ ನೇಮಕಗೊಳ್ಳುವ ಮೂಲಕ ಗಮನಾರ್ಹ ಸಾಧನೆ ಮಾಡಿದ್ದಾರೆ. ರಾಜ್ಯ ಮಟ್ಟದಲ್ಲಿ ನಡೆದ ನ್ಯಾಯಾಧೀಶರ ನೇಮಕಾತಿ ಪರೀಕ್ಷೆಯಲ್ಲಿ ಅತ್ಯುತ್ತಮ ಶ್ರೇಣಿಯಲ್ಲಿ ಉತ್ತೀರ್ಣರಾದ ಒಟ್ಟು 83 ಅಭ್ಯರ್ಥಿಗಳಲ್ಲಿ ನಿತಿನ್ ಒಬ್ಬರಾಗಿ ಆಯ್ಕೆಯಾಗಿದ್ದಾರೆ. ಲಿಯೋ ಕುವೆಲ್ಲೊ ಮತ್ತು ಅನಿತ ಕುವೆಲ್ಲೊ ದಂಪತಿಯ ಪುತ್ರರಾದ ಇವರು, ಮೂಡಿಗೆರೆಯ ಸಂತ ಮಾರ್ಥಾಸ್ ಶಾಲೆಯಲ್ಲಿ ಶಾಲಾ ಶಿಕ್ಷಣ ಹಾಗೂ ಮಂಗಳೂರಿನ ಎಸ್.ಡಿ.ಎಂ ಕಾನೂನು ಕಾಲೇಜಿನಲ್ಲಿ ಪದವಿ ಪೂರೈಸಿದ್ದರು. 2021 ರಿಂದ ಮೂಡಿಗೆರೆ ನ್ಯಾಯಾಲಯದ ಹಿರಿಯ ವಕೀಲ ಡಿ.ಎಸ್. ಸುಧೀರ್ ಅವರ ಮಾರ್ಗದರ್ಶನದಲ್ಲಿ ಸಹಾಯಕ ವಕೀಲರಾಗಿ ವೃತ್ತಿಜೀವನ ಆರಂಭಿಸಿದ್ದರು. ಇವರ ಈ ಅಮೋಘ ಸಾಧನೆಯನ್ನು ಗುರುತಿಸಿ ಕರ್ನಾಟಕ ಕ್ರಿಶ್ಚಿಯನ್ ಸಮುದಾಯದ ಅಭಿವೃದ್ಧಿ ನಿಗಮದ ನಿರ್ದೇಶಕ ಹರ್ಷ ಮೆಲ್ವಿನ್ ಲಸ್ರಾದೊ ಅವರು ನಿತಿನ್ ಅವರ ಮನೆಗೆ ಭೇಟಿ ನೀಡಿ ನಿಗಮದ ವತಿಯಿಂದ ಆತ್ಮೀಯವಾಗಿ ಸನ್ಮಾನಿಸಿ ಗೌರವಿಸಿದರು. ಈ ಸಂದರ್ಭದಲ್ಲಿ ಬಣಕಲ್ ಕ್ರೈಸ್ತ ಅಭಿವೃದ್ಧಿ ಸಂಘದ ಪ್ರಮುಖರಾದ ಪೆಡ್ಡಿ ಲೋಬೊ ಮತ್ತು ವಿಕ್ಟರ್ ಮಾರ್ಟಿಸ್ ಉಪಸ್ಥಿತರಿದ್ದು ಶುಭ ಹಾರೈಸಿದರು.















Leave a Reply