ಚಿಕ್ಕಮಗಳೂರು ನಗರದ ಐಜಿ ರಸ್ತೆಯಲ್ಲಿ ಇರುವ ಫರ್ನಿಚರ್ ಅಂಗಡಿಯಲ್ಲಿ ಅಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡಿದ್ದು, ಕ್ಷಣಾರ್ಧದಲ್ಲೇ ವ್ಯಾಪಕವಾಗಿ ಹರಡಿದೆ. ಅಂಗಡಿಯಲ್ಲಿ ಸಂಗ್ರಹಿಸಿದ್ದ ಹಾಸಿಗೆ, ಬೀರು, ಕುಷನ್, ಸೋಫಾಸೆಟ್, ದಿವಾನ್ ಕಾಟ್ ಸೇರಿದಂತೆ ಬಹುತೇಕ ಫರ್ನಿಚರ್ ವಸ್ತುಗಳು ಬೆಂಕಿಗಾಹುತಿಯಾಗಿವೆ.
ಸ್ಥಳೀಯರು ಹಾಗೂ ಅಂಗಡಿ ಮಾಲೀಕರು ಸಾಧ್ಯವಾದಷ್ಟು ವಸ್ತುಗಳನ್ನು ಹೊರತೆಗೆದು ರಸ್ತೆಗೆ ಇಡುವ ಮೂಲಕ ಹಾನಿಯನ್ನು ಕಡಿಮೆ ಮಾಡಲು ಪ್ರಯತ್ನಿಸಿದ್ದಾರೆ. ಆದರೆ ಹಾಸಿಗೆ ಮತ್ತು ಕುಷನ್‌ಗಳಂತಹ ಸುಲಭವಾಗಿ ಹೊತ್ತಿ ಉರಿಯುವ ವಸ್ತುಗಳಿದ್ದ ಬೆಂಕಿ ವೇಗವಾಗಿ ವ್ಯಾಪಿಸಿದೆ.
ಇಡೀ ರಾತ್ರಿ ಸಾಧಾರಣ ಮಳೆಯಾಗಿದ್ದ ಹಿನ್ನೆಲೆಯಲ್ಲಿ ದೊಡ್ಡ ಮಟ್ಟದ ಅನಾಹುತ ತಪ್ಪಿದಂತಾಗಿದೆ ಎಂದು ಹೇಳಲಾಗಿದೆ. ಮಾಹಿತಿ ಪಡೆದ ತಕ್ಷಣ ಅಗ್ನಿಶಾಮಕ ದಳದ ಸಿಬ್ಬಂದಿಗಳು ಸ್ಥಳಕ್ಕೆ ಧಾವಿಸಿ ಬೆಂಕಿಯನ್ನು ನಂದಿಸಿದ್ದಾರೆ.
ಘಟನಾ ಸ್ಥಳದಲ್ಲಿ ಎರಡು ಅಗ್ನಿಶಾಮಕ ವಾಹನಗಳನ್ನು ನಿಯೋಜಿಸಲಾಗಿದ್ದು, ಪರಿಸ್ಥಿತಿಯನ್ನು ಸಂಪೂರ್ಣ ನಿಯಂತ್ರಣಕ್ಕೆ ತರಲಾಗಿದೆ. ಐಜಿ ರಸ್ತೆ ನಗರದಲ್ಲಿನ ಪ್ರಮುಖ ರಸ್ತೆ ಆಗಿರುವುದರಿಂದ ಕೆಲ ಕಾಲ ವಾಹನ ಸಂಚಾರಕ್ಕೂ ಅಡಚಣೆ ಉಂಟಾಯಿತು.














Leave a Reply