ಚಿಕ್ಕಮಗಳೂರು: ವ್ಯಾಪಾರ ದ್ವೇಷಕ್ಕೆ ಫರ್ನಿಚರ್ ಅಂಗಡಿಗೆ ಬೆಂಕಿ; ಮಹಾರಾಜ ಫರ್ನಿಚರ್ ಮಾಲೀಕ ಸೇರಿ ಮೂವರ ಬಂಧನ

Spread the love

 

ಚಿಕ್ಕಮಗಳೂರು: ನಗರದ ಐ.ಜಿ (IG) ರಸ್ತೆಯಲ್ಲಿರುವ ಫರ್ನಿಚರ್ ಅಂಗಡಿಯೊಂದಕ್ಕೆ ಕಿಡಿಗೇಡಿಗಳು ಬೆಂಕಿ ಹಚ್ಚಿದ ಪ್ರಕರಣಕ್ಕೆ ಅನಿರೀಕ್ಷಿತ ಟ್ವಿಸ್ಟ್ ಸಿಕ್ಕಿದ್ದು, ವ್ಯಾಪಾರ ದ್ವೇಷವೇ ಈ ಕೃತ್ಯಕ್ಕೆ ಕಾರಣ ಎಂಬುದು ಪೊಲೀಸ್ ತನಿಖೆಯಿಂದ ಬಯಲಾಗಿದೆ.

​ಕಳೆದ ಭಾನುವಾರ ಚಿಕ್ಕಮಗಳೂರು ನಗರದ ಐ.ಜಿ ರಸ್ತೆಯಲ್ಲಿರುವ ‘ಎ.ಆರ್ (A.R) ಫರ್ನಿಚರ್’ ಅಂಗಡಿಯಲ್ಲಿ ಅನಿರೀಕ್ಷಿತವಾಗಿ ಬೆಂಕಿ ಕಾಣಿಸಿಕೊಂಡಿತ್ತು. ಈ ದುರ್ಘಟನೆಯಲ್ಲಿ ಅಂಗಡಿಯಲ್ಲಿದ್ದ ಲಕ್ಷಾಂತರ ರೂಪಾಯಿ ಮೌಲ್ಯದ ಫರ್ನಿಚರ್ ಸಾಮಗ್ರಿಗಳು ಸಂಪೂರ್ಣವಾಗಿ ಭಸ್ಮವಾಗಿದ್ದವು.

​ಪೊಲೀಸ್ ತನಿಖೆಯಲ್ಲಿ  ಎ.ಆರ್ ಫರ್ನಿಚರ್ ಅಂಗಡಿಯ ಪಕ್ಕದಲ್ಲೇ ‘ಮಹಾರಾಜ ಫರ್ನಿಚರ್’ ಎಂಬ ಅಂಗಡಿ ಇದೆ. “ತನ್ನ ಅಂಗಡಿಯಲ್ಲಿ ವ್ಯಾಪಾರವಿಲ್ಲ, ಆದರೆ ಪಕ್ಕದ ಎ.ಆರ್ ಫರ್ನಿಚರ್ ಅಂಗಡಿಯಲ್ಲಿ ಉತ್ತಮ ವ್ಯಾಪಾರ ನಡೆಯುತ್ತಿದೆ” ಎಂಬ ಅಸೂಯೆ ಮತ್ತು ದ್ವೇಷವೇ ಈ ಕೃತ್ಯಕ್ಕೆ ಪ್ರೇರಣೆಯಾಗಿದೆ.

​ದ್ವೇಷದ ಅಂಧಕಾರದಲ್ಲಿದ್ದ ಮಹಾರಾಜ ಫರ್ನಿಚರ್ ಮಾಲೀಕ ಹ್ಯಾರಿಸ್, ಎ.ಆರ್ ಫರ್ನಿಚರ್ ಅಂಗಡಿಯನ್ನು ನಾಶಪಡಿಸಲು ಸಂಚು ರೂಪಿಸಿದ್ದಾನೆ. ಇದಕ್ಕಾಗಿ ಸಾದ್ ಮತ್ತು ಯಾಕೂಬ್ ಎಂಬುವವರಿಗೆ 20 ಸಾವಿರ ರೂಪಾಯಿ ಹಣ ನೀಡಿ, ಅವರಿಂದಲೇ ಬೆಂಕಿ ಹಚ್ಚಿಸಿದ್ದಾರೆ ಎಂಬುದು ವಿಚಾರಣೆಯಲ್ಲಿ ದೃಢಪಟ್ಟಿದೆ.

​ಘಟನೆಯ ನಂತರ ಎಚ್ಚೆತ್ತ ಚಿಕ್ಕಮಗಳೂರು ನಗರ ಠಾಣೆಯ ಪೊಲೀಸರು, ಸ್ಥಳದಲ್ಲಿದ್ದ ಸಿಸಿಟಿವಿ ದೃಶ್ಯಾವಳಿಗಳನ್ನು ಕೂಲಂಕಷವಾಗಿ ಪರಿಶೀಲನೆ ನಡೆಸಿದರು. ಈ ವೇಳೆ ಕೃತ್ಯದ ಸತ್ಯಾಂಶ ಹೊರಬಂದಿದ್ದು, ತಕ್ಷಣವೇ ಕಾರ್ಯಾಚರಣೆ ನಡೆಸಿ ಮಹಾರಾಜ ಫರ್ನಿಚರ್ ಮಾಲೀಕ ಹ್ಯಾರಿಸ್ ಹಾಗೂ ಬೆಂಕಿ ಹಚ್ಚಿದ ಆರೋಪಿಗಳಾದ ಸಾದ್ ಮತ್ತು ಯಾಕೂಬ್ ಅವರನ್ನು ಬಂಧಿಸಿದ್ದಾರೆ.

​ವ್ಯಾಪಾರದ ಅಸೂಯೆಯಿಂದ ಅಮಾಯಕರ ಬದುಕಿನೊಂದಿಗೆ ಚೆಲ್ಲಾಟವಾಡಿದ ಆರೋಪಿಗಳಿಗೆ ಈಗ ಕಾನೂನಿನ ಬಿಸಿ ತಟ್ಟಿದೆ. ಈ ಕುರಿತು ಚಿಕ್ಕಮಗಳೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಹೆಚ್ಚಿನ ತನಿಖೆ ಮುಂದುವರಿದಿದೆ.

Leave a Reply

Your email address will not be published. Required fields are marked *