ಚಿಕ್ಕಮಗಳೂರು ಜಿಲ್ಲೆಯ. ಕಡೂರು ತಾಲೂಕಿನ ಯಗಟಿ ಸಮೀಪದ ಬೋರಗಾನಹಳ್ಳಿ ಗ್ರಾಮದಲ್ಲಿ ಮದುವೆಗಾಗಿ ಮನನೊಂದಿದ್ದ 26 ವರ್ಷದ ಕುರಿಗಾಯಿ ಯುವಕನೊಬ್ಬ ತೆಂಗಿನಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮೃತ ಯುವಕನನ್ನು ತುಮಕೂರು ಜಿಲ್ಲೆಯ ಶಿರಾ ತಾಲೂಕಿನ ಬ್ರಹ್ಮಸಂದ್ರ ಮೂಲದ ಕುಮಾರ್ ಎಂದು ಗುರುತಿಸಲಾಗಿದ್ದು, ಈತ ತನ್ನ ಪೋಷಕರೊಂದಿಗೆ ಬಾಸೂರು ಬಳಿ ವಾಸವಿದ್ದು ಕುರಿಮಂದೆ ಮೇಯಿಸುವ ಕೆಲಸ ಮಾಡುತ್ತಿದ್ದನು. ಕುಮಾರ್ಗೆ ಇಬ್ಬರು ಅಣ್ಣಂದಿರಿದ್ದು, ಅವರಿಬ್ಬರಿಗೂ ಮದುವೆಯಾಗಿರಲಿಲ್ಲ. ತನಗೂ ಮದುವೆ ಮಾಡುವಂತೆ ಕುಮಾರ್ ಪೋಷಕರನ್ನು ಒತ್ತಾಯಿಸುತ್ತಿದ್ದಾಗ, ಅಣ್ಣಂದಿರಿಗೆ ಹುಡುಗಿ ಸಿಗುತ್ತಿಲ್ಲ, ಅವರಿಗಾದ ನಂತರ ನಿನಗೆ ಮಾಡುತ್ತೇವೆ ಎಂಬ ಉತ್ತರ ಸಿಕ್ಕಿತ್ತು. ಇದರಿಂದ ತೀವ್ರ ಬೇಸರಗೊಂಡಿದ್ದ ಕುಮಾರ್ ಮದ್ಯವ್ಯಸನಿಯಾಗಿದ್ದನು ಎಂದು ಹೇಳಲಾಗುತ್ತಿದೆ. ಇದೇ ಮಾನಸಿಕ ವೇದನೆಯಲ್ಲಿ ಕುಮಾರ್ ಮರಕ್ಕೆ ನೇಣು ಬಿಗಿದುಕೊಂಡು ಪ್ರಾಣ ಕಳೆದುಕೊಂಡಿದ್ದು, ಸ್ಥಳಕ್ಕೆ ಭೇಟಿ ನೀಡಿರುವ ಯಗಟಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಯುವಕನ ಸಾವಿಗೆ ಅತಿಯಾದ ಮದ್ಯ ಸೇವನೆ ಕಾರಣವೇ ಅಥವಾ ಮದುವೆಯಾಗದ ನೋವೇ ಎಂಬ ಬಗ್ಗೆ ತನಿಖೆ ನಡೆಯುತ್ತಿದೆ.
















Leave a Reply