ಹಾಸನ ಜೈಲಿಗೆ ಡಿಸಿ ಲತಾ ಕುಮಾರಿ ದಿಢೀರ್ ಭೇಟಿ – ಕೈದಿಗಳಿಗೆ ನೀತಿ ಪಾಠ, ಆಹಾರ ಪರಿಶೀಲನೆ

Spread the love

ಹಾಸನ: ಹಾಸನ ಕಾರಾಗೃಹಕ್ಕೆ ಜಿಲ್ಲಾಧಿಕಾರಿ ಲತಾ ಕುಮಾರಿ ದಿಢೀರ್ ಭೇಟಿ ನೀಡಿ ಜೈಲು ಸಿಬ್ಬಂದಿ ಮತ್ತು ಕೈದಿಗಳಿಗೆ ಅಚ್ಚರಿ ಮೂಡಿಸಿದರು.
ಮೊದಲ ಬಾರಿಗೆ ಯಾವುದೇ ಪೂರ್ವ ಸೂಚನೆ ಇಲ್ಲದೆ ಭೇಟಿ ನೀಡಿದ ಜಿಲ್ಲಾಧಿಕಾರಿಗಳು, ಕಾರಾಗೃಹದ ವ್ಯವಸ್ಥೆಯನ್ನು ಸಮಗ್ರವಾಗಿ ಪರಿಶೀಲಿಸಿದರು. ಭೇಟಿ ನೀಡಿದ ತಕ್ಷಣವೇ ಅಡುಗೆ ಮನೆಯತ್ತ ತೆರಳಿ, ಕೈದಿಗಳಿಗೆ ನೀಡಲಾಗುತ್ತಿರುವ ಆಹಾರದ ಗುಣಮಟ್ಟವನ್ನು ಪರಿಶೀಲಿಸಿದರು. ಅಲ್ಲದೆ, “ಕೈದಿಗಳಿಗೆ ಸರಿಯಾದ ಸಮಯಕ್ಕೆ, ಉತ್ತಮ ಆಹಾರ ಸಿಗುತ್ತಿದೆಯೇ?” ಎಂದು ಸಿಬ್ಬಂದಿಯನ್ನು ಪ್ರಶ್ನಿಸಿದರು.
ನಂತರ ಜೈಲಿನ ವಿವಿಧ ಭಾಗಗಳನ್ನು ವೀಕ್ಷಿಸಿದ ಅವರು, ಕೈದಿಗಳೊಂದಿಗೆ ನೇರವಾಗಿ ಮಾತುಕತೆ ನಡೆಸಿದರು. ಅವರ ವೈಯಕ್ತಿಕ ಜೀವನದ ಬಗ್ಗೆ ಕೇಳಿ, “ನಿಮಗೆ ಮದುವೆಯಾಗಿದೆಯಾ? ಮಕ್ಕಳಿದ್ದಾರಾ? ಮತ್ತೆ ಯಾಕೆ ತಪ್ಪು ಮಾಡಿದಿರಿ?” ಎಂದು ಪ್ರಶ್ನಿಸಿ, ತಪ್ಪು ನಡೆ ಬಗ್ಗೆ ಚಿಂತನೆ ಮಾಡಲು ಪ್ರೇರೇಪಿಸಿದರು.
ಜಿಲ್ಲಾಧಿಕಾರಿಗಳು ಕೈದಿಗಳಿಗೆ ನೈತಿಕ ಬೋಧನೆ ನೀಡುತ್ತಾ, “ನಾವು ಮನುಷ್ಯರು. ಜೀವನದಲ್ಲಿ ಹಲವಾರು ಅವಕಾಶಗಳಿವೆ. ತಪ್ಪು ಮಾಡಿದರೆ ಅದನ್ನು ಸರಿಪಡಿಸಿಕೊಳ್ಳಬೇಕು” ಎಂದು ಸಲಹೆ ನೀಡಿದರು. “ಈ ಭೂಮಿಗೆ ಬಂದ ಮೇಲೆ ಒಳ್ಳೆಯ ಕೆಲಸ ಮಾಡಬೇಕು. ಯಾರೂ ಏನನ್ನೂ ಜೊತೆ ತೆಗೆದುಕೊಂಡು ಹೋಗುವುದಿಲ್ಲ” ಎಂದು ತಿಳಿಸಿದರು.
ಅವರು ಇನ್ನೂ ಮುಂದೆ ಹೇಳುತ್ತಾ, “ಕಳ್ಳತನ, ಮೋಸ, ಸುಳ್ಳು ಇಂತಹ ಅಪರಾಧಗಳನ್ನು ಎಷ್ಟು ದಿನ ಮಾಡುತ್ತೀರಿ? ಮೊದಲು ಒಳ್ಳೆಯ ಮಾನವರಾಗಿರಿ” ಎಂದು ಕೈದಿಗಳಿಗೆ ಬುದ್ಧಿವಾದ ಹೇಳಿದರು.
ಜಿಲ್ಲಾಧಿಕಾರಿಗಳ ಮಾತು ಕೇಳಿದ ಕೈದಿಗಳು ಕೈಕಟ್ಟಿ ನಿಂತು ಗೌರವ ಸೂಚಿಸಿದರು. ಈ ವೇಳೆ ಜೈಲು ಸಿಬ್ಬಂದಿಗಳು ಕೂಡ ಜಿಲ್ಲಾಧಿಕಾರಿಗಳ ಜೊತೆಗಿದ್ದರು.
ಜಿಲ್ಲಾಧಿಕಾರಿಗಳ ಈ ದಿಢೀರ್ ಭೇಟಿ ಜೈಲಿನ ವ್ಯವಸ್ಥೆಯಲ್ಲಿ ಶಿಸ್ತು ಮತ್ತು ಜಾಗೃತಿ ಮೂಡಿಸುವುದರ ಜೊತೆಗೆ ಕೈದಿಗಳಲ್ಲಿ ಆತ್ಮಪರಿಶೀಲನೆಗೆ ಕಾರಣವಾಯಿತು.

Leave a Reply

Your email address will not be published. Required fields are marked *