ಮೂಡಿಗೆರೆಯ ಬಿಜಿಎಸ್ ಕಾಲೇಜಿಗೆ 100% ಫಲಿತಾಂಶ: ರಾಜ್ಯಕ್ಕೆ 5ನೇ ರ‍್ಯಾಂಕ್ ತಂದುಕೊಟ್ಟ ಹೇಮಾ ಸಿಂಧೂರ!

Spread the love

ಮೂಡಿಗೆರೆಯ ಬಿಜಿಎಸ್ ಒಕ್ಕಲಿಗರ ಸಂಘ ಪದವಿಪೂರ್ವ ಕಾಲೇಜು 2025-26ನೇ ಸಾಲಿನ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಅಭೂತಪೂರ್ವ ಯಶಸ್ಸು ಸಾಧಿಸಿದ್ದು, ಪರೀಕ್ಷೆಗೆ ಹಾಜರಾಗಿದ್ದ ಒಟ್ಟು 78 ವಿದ್ಯಾರ್ಥಿಗಳೂ ತೇರ್ಗಡೆಯಾಗುವ ಮೂಲಕ ಕಾಲೇಜು ಶೇಕಡಾ 100ರಷ್ಟು ಫಲಿತಾಂಶ ದಾಖಲಿಸಿದೆ. ವಾಣಿಜ್ಯ ವಿಭಾಗದ ಎಲ್ಲಾ 35 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, ಇವರಲ್ಲಿ 17 ವಿದ್ಯಾರ್ಥಿಗಳು ಅತ್ಯುನ್ನತ ಹಾಗೂ 17 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ಸಾಧನೆ ಮಾಡಿದ್ದಾರೆ. ಈ ವಿಭಾಗದ ಹೇಮಾ ಸಿಂಧೂರ ಬಿ.ಎಸ್. 595 ಅಂಕಗಳನ್ನು (99.17%) ಪಡೆಯುವ ಮೂಲಕ ರಾಜ್ಯಕ್ಕೆ 5ನೇ ಸ್ಥಾನ ಹಾಗೂ ಜಿಲ್ಲೆ ಮತ್ತು ತಾಲ್ಲೂಕಿಗೆ ಪ್ರಥಮ ಸ್ಥಾನ ಗಳಿಸಿ ಕಾಲೇಜಿಗೆ ಕೀರ್ತಿ ತಂದಿದ್ದಾರೆ. ಇದೇ ವಿಭಾಗದ ಸಾಕೇತ್ ಎಸ್. 586 ಅಂಕಗಳನ್ನು ಪಡೆದು ಗಮನಾರ್ಹ ಸಾಧನೆ ಮಾಡಿದ್ದಾರೆ.
ವಿಜ್ಞಾನ ವಿಭಾಗದಲ್ಲೂ ಸಹ 43 ವಿದ್ಯಾರ್ಥಿಗಳು ಹಾಜರಾಗಿ ಎಲ್ಲರೂ ತೇರ್ಗಡೆಯಾಗುವ ಮೂಲಕ ಶೇಕಡಾ 100ರಷ್ಟು ಫಲಿತಾಂಶ ಬಂದಿದ್ದು, 24 ವಿದ್ಯಾರ್ಥಿಗಳು ಅತ್ಯುನ್ನತ ಹಾಗೂ 18 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ಪಾಸಾಗಿದ್ದಾರೆ. ವಿಜ್ಞಾನ ವಿಭಾಗದಲ್ಲಿ ರಹಮಾ ಮುಮ್ತಾಜ್ ಎಂ.ಕೆ. 576 ಅಂಕಗಳನ್ನು (96%) ಹಾಗೂ ಶ್ರೇಯ ಗೌಡ ಎನ್.ಎಸ್. 572 ಅಂಕಗಳನ್ನು (95.33%) ಗಳಿಸಿ ಸಾಧನೆ ಮೆರೆದಿದ್ದಾರೆ. ವಿಷಯಾವಾರು ಸಾಧನೆಯಲ್ಲಿ ಕನ್ನಡ ಮತ್ತು ವ್ಯವಹಾರ ಅಧ್ಯಯನದಲ್ಲಿ ತಲಾ ಐವರು, ಗಣಕ ವಿಜ್ಞಾನ ಹಾಗೂ ಅರ್ಥಶಾಸ್ತ್ರದಲ್ಲಿ ತಲಾ ಇಬ್ಬರು ಮತ್ತು ಲೆಕ್ಕಶಾಸ್ತ್ರ ಹಾಗೂ ಗಣಿತ ಶಾಸ್ತ್ರದಲ್ಲಿ ತಲಾ ಒಬ್ಬ ವಿದ್ಯಾರ್ಥಿ 100ಕ್ಕೆ 100 ಅಂಕಗಳನ್ನು ಪಡೆದು ಮಿಂಚಿದ್ದಾರೆ.
ಈ ಅದ್ಭುತ ಸಾಧನೆ ಮಾಡಿದ ಎಲ್ಲಾ ವಿದ್ಯಾರ್ಥಿಗಳಿಗೆ ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್‌ನ ಶೃಂಗೇರಿ ಶಾಖೆಯ ಕಾರ್ಯದರ್ಶಿಗಳಾದ ಪರಮಪೂಜ್ಯ ಶ್ರೀ ಶ್ರೀ ಗುಣನಾಥ ಸ್ವಾಮೀಜಿಯವರು, ಕಾಲೇಜಿನ ಪ್ರಾಚಾರ್ಯರಾದ ಸಂದೇಶ್ ಎಂ.ಆರ್. ಹಾಗೂ ಉಪನ್ಯಾಸಕರು ಮತ್ತು ಸಿಬ್ಬಂದಿ ವರ್ಗದವರು ಹಾರ್ದಿಕವಾಗಿ ಅಭಿನಂದಿಸಿದ್ದಾರೆ.

Leave a Reply

Your email address will not be published. Required fields are marked *